ಮದುವೆ ದಿನವೇ ವಧುಗೆ ಅಪಘಾತ! – ICUನಲ್ಲೇ ತಾಳಿ ಕಟ್ಟಿದ ವರ

ಮದುವೆ ದಿನವೇ ವಧುಗೆ ಅಪಘಾತ! – ICUನಲ್ಲೇ ತಾಳಿ ಕಟ್ಟಿದ ವರ

ಆಕೆ ತನ್ನ ಮದುವೆ ಸಂಭ್ರಮದಲ್ಲಿದ್ದಳು. ಮನ ಮೆಚ್ಚಿದ ಹುಡುಗನ ಜೊತೆ ಸಪ್ತಪದಿ ಕನಸು ಕಂಡಿದ್ದಳು. ಆದ್ರೆ ವಿಧಿ ಆಟವೇ ಬೇರೆಯಾಗಿತ್ತು. ಹಸೆಮಣೆ ಏರಬೇಕಿದ್ದ ಯುವತಿ ಆಸ್ಪತ್ರೆ ಸೇರುವಂತಾಗಿದೆ. ಭೀಕರ ಅಪಘಾತದಲ್ಲಿ ಗಾಯಗೊಂಡ ಯುವತಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ. ಆದ್ರೆ ವರನ ಮನೆಯವರು ತೆಗೆದುಕೊಂಡ ನಿರ್ಧಾರದಿಂದ ಈ ಜೋಡಿ ಹಕ್ಕಿ ಮತ್ತೆ ಒಂದಾಗಿದೆ.

ಇದನ್ನೂ ಓದಿ: ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಇನ್ಮುಂದೆ ಹೊಸ ರೂಲ್ಸ್!‌ – ನಿಯಮ ಉಲ್ಲಂಘಿಸಿದ್ರೆ ಬೀಳುತ್ತೆ ಫೈನ್!

ಈ ಘಟನೆ ನಡೆದಿದ್ದು ಕೇರಳದ ಕೊಚ್ಚಿಯ ಆಲಪ್ಪುಳದ ಥುಂಬೋಳಿ ಎಂಬಲ್ಲಿ. ಆಳಪ್ಪುಳ ನಿವಾಸಿ ಅವನಿ ಹಾಗೂ ಥುಂಬೋಳಿ ನಿವಾಸಿ ಶರೋನ್ ವಿವಾಹ ಶುಕ್ರವಾರ ನಿಗದಿಯಾಗಿತ್ತು. ಈ ಹಿನ್ನೆಲೆ ವಧು ಅವನಿ ಮೇಕಪ್ ಮಾಡಿಸಿಕೊಳ್ಳಲೆಂದು ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅವನಿಯ ಬೆನ್ನುಮೂಳೆಗೆ ತೀವ್ರ ಗಾಯವಾಗಿ ವಿಪಿಎಸ್ ಲೇಕ್‌ಶೋರ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಆಸ್ಪತ್ರೆಗೆ ಬಂದ ಶರೋನ್ ಹಾಗೂ ಅವನಿ ಕುಟುಂಬಸ್ಥರು ಪೂರ್ವ ನಿಗದಿಯಾಗಿದ್ದಂತೆ ಶುಕ್ರವಾರ ಮಧ್ಯಾಹ್ನ 12:15 ರಿಂದ 12:30ರ ನಡುವೆ ಮದುವೆ ನೆರವೇರಿಸಲು ಅವಕಾಶ ಕಲ್ಪಿಸುವಂತೆ ಆಸ್ಪತ್ರೆಯವರಲ್ಲಿ ಮನವಿ ಮಾಡಿದ್ದರು. ಅದರಂತೆ ಆಸ್ಪತ್ರೆಯ ಐಸಿಯುನಲ್ಲೇ ಶರೋನ್ ಅವನಿ ಕುತ್ತಿಗೆಗೆ ತಾಳಿ ಕಟ್ಟಿದ್ದಾರೆ. ಕುಟುಂಬ ಸದಸ್ಯರು ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.

ಆಸ್ಪತ್ರೆಯಲ್ಲಿಯೇ ಸಮಾರಂಭ ನಡೆಸಬೇಕೆಂದು ವರನ ಕುಟುಂಬ ಮನವಿ ಮೇರೆಗೆ ಇಲ್ಲಿಯೇ ಮದುವೆ ನಡೆಸಿದ್ದೇವೆ ಎಂದು ವಿಪಿಎಸ್ ಲೇಕ್‌ಶೋರ್ ಆಸ್ಪತ್ರೆಯ ವಕ್ತಾರರು ತಿಳಿಸಿದ್ದಾರೆ.  ಶನಿವಾರ ಅವನಿ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ನರಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಸುಧೀಶ್ ಕರುಣಾಕರನ್ ತಿಳಿಸಿದ್ದಾರೆ.

Shwetha M