ಪೌರ ಕಾರ್ಮಿಕ ಮಹಿಳೆಯರಿಗೆ ಒಲಿದ ಅದೃಷ್ಟ ಲಕ್ಷ್ಮೀ – ಲಾಟರಿಯಲ್ಲಿ 10 ಕೋಟಿ ಗೆದ್ದರು

ಪೌರ ಕಾರ್ಮಿಕ ಮಹಿಳೆಯರಿಗೆ ಒಲಿದ ಅದೃಷ್ಟ ಲಕ್ಷ್ಮೀ – ಲಾಟರಿಯಲ್ಲಿ 10 ಕೋಟಿ ಗೆದ್ದರು

ಅದೃಷ್ಟ ಯಾರಿಗೆ ಯಾವಾಗ ಒಲಿದು ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವೊಮ್ಮೆ ಜೀವನ ಪೂರ್ತಿ ದುಡಿದರೂ ಕಷ್ಟ ಪರಿಹಾರವಾಗೋದಿಲ್ಲ. ಎಷ್ಟು ದುಡಿದರೂ ತಿಂಗಳ ಕೊನೆಗೆ ಕೈಯಲ್ಲಿ ಚೂರು ಉಳಿಯೋದಿಲ್ಲ. ಆದರೆ ಅದೃಷ್ಟ ಕೈ ಹಿಡಿದರೆ ರಾತ್ರಿ ಬೆಳಗಾಗುವುದರ ಒಳಗೆ ಕೋಟ್ಯಧಿಪತಿಗಳು ಆಗಬಹುದು ಎಂಬುವುದಕ್ಕೆ ಕೇರಳದಲ್ಲೊಂದು ಘಟನೆ ನಡೆದಿದೆ. 250 ರೂ. ಸಾಲ ಪಡೆದು ಲಾಟರಿ ಟಿಕೆಟ್ ಖರೀದಿಸಿದ ಕೇರಳದ 11 ಪೌರಕಾರ್ಮಿಕ ಮಹಿಳೆಯರ ಅದೃಷ್ಟ ಖುಲಾಯಿಸಿದೆ. ರಾತ್ರಿ ಬೆಳಗಾಗುವುದರೊಳಗೆ ಕೋಟ್ಯಧಿಪತಿಗಳಾದ್ದಾರೆ.

ಇದನ್ನೂ ಓದಿ: ಲಾಟರಿಯಲ್ಲಿ ಗೆದ್ದ ಹಣವನ್ನು ಒಡಿಶಾ ರೈಲು ದುರಂತದ ಸಂತ್ರಸ್ತರಿಗೆ ನೀಡಲು ಮುಂದಾದ ಬಾಣಸಿಗ

ಕೇರಳದ 11 ಪೌರ ಕಾರ್ಮಿಕ ಮಹಿಳೆಯರು ಸೇರಿ 250 ರೂ. ಸಾಲ ಪಡೆದು ಒಂದು ಲಾಟರಿ ಟಿಕೆಟ್ ಖರೀದಿ ಮಾಡಿದ್ದು ಅದೃಷ್ಟ ಒಲಿದು ಬಂದಿದೆ. ಹೌದು, ಈ ಮಹಿಳೆಯರು ಖರೀದಿ ಮಾಡಿದ 10 ಕೋಟಿ ರೂಪಾಯಿ ಬಹುಮಾನ ಬಂದಿದ್ದು, ಮಹಿಳೆಯರ ಬದುಕೇ ಬದಲಾಗಲಿದೆ. ಕೇರಳ ಲಾಟರಿ ಇಲಾಖೆ  ನಡೆಸುವ ಡ್ರಾನಲ್ಲಿ 10 ಕೋಟಿ ರೂ. ಬಹುಮಾನ ಈ ಮಹಿಳೆಯರ ಪಾಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹಿಳೆಯರು, ನಮಗೆ ವೇತನ ಹೊರತುಪಡಿಸಿ ಯಾವುದೇ ಆದಾಯ ಮೂಲಗಳಿಲ್ಲ. ನಾವೆಲ್ಲರೂ ಜೀವನದಲ್ಲಿ ಕಷ್ಟಗಳನ್ನು ಎದುರಿಸುತ್ತಿದ್ದೇವೆ. ನಾವೆಲ್ಲರೂ ಮೊದಲು ಹಣವನ್ನು ಒಟ್ಟುಗೂಡಿಸಿ ಲಾಟರಿ ಟಿಕೆಟ್‍ಗಳನ್ನು ಖರೀದಿಸಿದ್ದೆವು. ಇದೇ ಮೊದಲ ಬಾರಿಗೆ ನಾವು ಗೆದ್ದಿದ್ದೇವೆ. ಬಹುಮಾನ ಗೆಲ್ಲುತ್ತೇವೆ ಎಂದು ಕನಸಲ್ಲೂ ಊಹಿಸಿರಲಿಲ್ಲ. ನಮ್ಮ ಸಮಸ್ಯೆಗಳನ್ನು ಪರಿಹರಿಸಲು ಈ ಹಣ ಸಹಕಾರವಾಗಲಿದೆ ಮಹಿಳೆಯರು ತಿಳಿಸಿದ್ದಾರೆ.

ನಗರಸಭೆಯ ಹರಿತ ಕರ್ಮ ಸೇನೆ ಒಕ್ಕೂಟದ ಅಧ್ಯಕ್ಷೆ ಶೀಜಾ ಮಾತನಾಡಿ, ಈ ಬಾರಿ ಅತ್ಯಂತ ಅರ್ಹರಿಗೆ ಅದೃಷ್ಟ ಒಲಿದು ಬಂದಿದೆ. ಎಲ್ಲಾ ವಿಜೇತರು ಶ್ರಮಜೀವಿಗಳಾಗಿದ್ದಾರೆ. ಅವರೆಲ್ಲ ಹೆಚ್ಚಾಗಿ ಸಾಲದಲ್ಲಿದ್ದಾರೆ. ಅಲ್ಲದೇ ಮದುವೆಗೆ ಬಂದಿರುವ ಹೆಣ್ಣುಮಕ್ಕಳಿದ್ದಾರೆ. ಕೆಲವರು ಅವರ ಕುಟುಂಬಸ್ಥರ ಚಿಕಿತ್ಸಾ ವೆಚ್ಚಕ್ಕೆ ಹಣ ಹೊಂದಿಸಬೇಕಿದೆ. ಅವರ ಮನೆಗಳು ಭದ್ರವಾಗಿಲ್ಲ. ಅಂಥವರಿಗೆ ಈ ಲಾಟರಿ ಒಲಿದಿರುವುದು ಖುಷಿ ನೀಡಿದೆ. ಲಾಟರಿ ವಿಜೇತ ಮಹಿಳೆಯರನ್ನು ಭೇಟಿ ಮಾಡಿ ಹಲವಾರು ಜನ ಅಭಿನಂದಿಸಿದ್ದಾರೆ. ಶ್ರಮಜೀವಿಗಳಿಗೆ ಒಲಿದ ಅದೃಷ್ಟಕ್ಕೆ ಖುಷಿಪಟ್ಟಿದ್ದಾರೆ.

suddiyaana