ಮಗುವಿಗೆ ಹೆಸರಿಡುವ ವಿಚಾರದಲ್ಲಿ ದಂಪತಿ ಮಧ್ಯೆ ಕಲಹ! – ಶಿಶುವಿಗೆ ತಾನೇ ಹೆಸರು ಸೂಚಿಸಿದ ಹೈಕೋರ್ಟ್!
ಮನೆಯಲ್ಲಿ ಮಗುವಿನ ಜನನವಾದರೆ ಮಗುವಿಗೆ ಸೂಕ್ತ ಹೆಸರು ಇಡಲು ಚರ್ಚೆ ನಡೆಸಲಾಗುತ್ತದೆ. ಸಂಬಂಧಿಕರು, ಸ್ನೇಹಿತರ ಬಳಿ ಚೆಂದದ ಹೆಸರು ಸೂಚಿಸಲು ಹೇಳುತ್ತಾರೆ. ಕೆಲವೊಂದು ಬಾರಿ ತಾನು ಸೂಚಿಸಿದ ಹೆಸರನ್ನೇ ಇಡಬೇಕೆಂದು ಮನೆಯಲ್ಲಿ ವಾಗ್ವಾದ ಕೂಡ ನಡೆಯುತ್ತದೆ. ಇನ್ನೂ ದಂಪತಿ ಮಧ್ಯೆ ತನ್ನ ಹೆಸರಿನ ಪ್ರಾರಂಭದ ಅಕ್ಷರದ ಹೆಸರನ್ನೇ ಸೂಚಿಸಬೇಕು ಅಂತಾ ಚರ್ಚೆ ನಡೆಯುವುದು ಸಾಮಾನ್ಯ. ಇದೀಗ ಇಲ್ಲೊಂದು ದಂಪತಿ ನಡುವೆ ಮಗುವಿಗೆ ಹೆಸರು ಇಡುವ ವಿಚಾರವಾಗಿ ಜಗಳ ಉಂಟಾಗಿದೆ. ಈ ಜಗಳ ಈಗ ಕೋರ್ಟ್ ಮೆಟ್ಟಿಲೇರಿದೆ.
ಏನಿದು ವಿಚಿತ್ರ ಘಟನೆ?
ಈ ವಿಚಿತ್ರ ಘಟನೆ ಕೇರಳದಲ್ಲಿ ನಡೆದಿದೆ. ಫೆ.12, 2020ರಂದು ಮಗು ಜನಿಸಿದ ನಂತರ ದಂಪತಿ ಬೇರೆ ಬೇರೆಯಾಗಿ ವಾಸಿಸುತ್ತಿದ್ದರು. 2020ರಿಂದ ಮಗು ತಾಯಿಯ ಜೊತೆಗೆ ಇದೆ. ಹೀಗಾಗಿ ಮಗುವಿಗೆ ಸೂಕ್ತ ಹೆಸರಿಡುವ ವಿಚಾರವಾಗಿ ಅವರಿಬ್ಬರ ಮಧ್ಯೆ ಕಲಹ ಉಂಟಾಗಿದೆ. ಮಗುವಿನ ಜನನ ಪ್ರಮಾಣಪತ್ರದಲ್ಲಿ ಹೆಸರು ನಮೂದಿಸಲು ಒಮ್ಮತ ಮೂಡದಿದ್ದ ಕಾರಣ ತಾಯಿ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಕೇರಳ ಹೈಕೋರ್ಟ್ ಮಗುವಿಗೆ ತಾನೇ ಹೊಸ ಹೆಸರನ್ನು ಸೂಚಿಸಿದೆ.
ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಯಲ್ಲಿ ಮರಣ ಮೃದಂಗ! – 24 ಗಂಟೆಗಳಲ್ಲಿ 12 ನವಜಾತ ಶಿಶುಗಳು ಸೇರಿ 24 ಮಂದಿ ಸಾವು
ನ್ಯಾಯಮೂರ್ತಿ ಬೇಚು ಕುರಿಯನ್ ಥಾಮಸ್ ನೀಡಿದ ಆದೇಶದಲ್ಲಿ ‘ತಾಯಿಯ ಬಳಿ ಮಗು ವಾಸಿಸುತ್ತಿರುವ ಕಾರಣ ಆಕೆ ಸೂಚಿಸಿದ ಹೆಸರಿಗೆ ಪ್ರಾಮುಖ್ಯತೆಯನ್ನು ನೀಡಬೇಕಾಗುತ್ತದೆ. ಆದರೆ ಪಿತೃತ್ವದ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲದಿರುವುದರಿಂದ ತಂದೆಯ ಹೆಸರನ್ನೂ ಮಗುವಿನೊಂದಿಗೆ ಸೇರಿಸಬೇಕು. ಒಂದು ಮಗುವಿಗೆ ಹೆಸರನ್ನು ಇಡುವಾಗ ಮಗುವಿನ ಬೆಳವಣಿಗೆಯನ್ನು ಪರಿಗಣಿಸಬೇಕೇ ಹೊರತು ತಂದೆ ತಾಯಿಗಳ ಬಯಕೆ ಅಥವಾ ಸಾಮಾಜಿಕ ಪ್ರಭಾವಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ. ಹಾಗಾಗಿ ಪೇರೆನ್ಸ್ ಪೇಟ್ರೀ ತತ್ವದ ಪ್ರಕಾರ ನ್ಯಾಯಾಲಯವೇ ಮಗುವಿಗೆ ಪ್ರತ್ಯೇಕ ಹೆಸರನ್ನು ಸೂಚಿಸುತ್ತದೆ ಎಂದು ತಿಳಿಸಿದೆ.
ಹೈಕೋರ್ಟ್ ನ್ಯಾಯಮೂರ್ತಿ ಬೇಚು ಕುರಿಯನ್ ಥಾಮಸ್ ಅವರು ತಾಯಿ ಸೂಚಿಸಿದ ಪುಣ್ಯ ಎಂಬ ಹೆಸರನ್ನು ಮಗುವಿಗೆ ಇಟ್ಟಿದ್ದಾರೆ. ಮಗುವಿನ ಹೆಸರಿನ ಮುಂದೆ ತಂದೆ ಉಪನಾಮವನ್ನು ಸೇರಿಸಲು ಸೂಚಿಸಿದೆ ಎಂದು ವರದಿಯಾಗಿದೆ.