ಅಳುವ ಮಕ್ಕಳಿಗೆಂದೇ ಕ್ರೈ ರೂಂ – ಕೇರಳ ಥಿಯೇಟರ್ ನಲ್ಲಿ ತಾಯಂದಿರಿಗೆ ಪ್ರತ್ಯೇಕ ಕೋಣೆ
ತಿರುವಂತಪುರಂ: ಕೇರಳದ ತಿರುವನಂತಪುರಂನಲ್ಲಿರುವ ಕೈರಳಿ ಶ್ರೀನಿಲಾ ಥಿಯೇಟರ್ ಕಾಂಪ್ಲೆಕ್ಸ್ ನಲ್ಲಿ ಕ್ರೈ ರೂಂ ಎಂಬ ಪ್ರತ್ಯೇಕ ಕೋಣೆಯೊಂದನ್ನು ಸಜ್ಜುಗೊಳಿಸಲಾಗಿದೆ.
ಕೇರಳ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮವು ಥಿಯೇಟರ್ ನಲ್ಲೇ ‘ಕ್ರೈ ರೂಂ’ ಅನ್ನು ಸ್ಥಾಪಿಸಿದೆ. ಸಿನಿಮಾ ವೀಕ್ಷಣೆ ವೇಳೆ ಮಕ್ಕಳು ಅಳುತ್ತಿದ್ದರೆ ಪೋಷಕರು ತಮ್ಮ ಮಕ್ಕಳನ್ನು ಈ “ಕ್ರೈ ರೂಮ್’ ನಲ್ಲಿ ಕೂರಿಸಬಹುದು. ಕೆಲವು ತಿಂಗಳ ಹಿಂದೆ, ಕೇರಳದಲ್ಲಿ ಸಿನಿಮಾ ವೀಕ್ಷಣೆಗೆ ತೊಂದರೆಯಾಗಬಹುದು ಎಂಬ ಕಾರಣದಿಂದ ಚಿಕ್ಕ ಮಕ್ಕಳನ್ನು ಥಿಯೇಟರ್ ಗಳಿಗೆ ಕರೆತರಲು ಅನುಮತಿ ನೀಡಬಾರದು ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆದಿತ್ತು. ಹೀಗಾಗಿ ಕ್ರೈ ರೂಮ್ ವ್ಯವಸ್ಥೆ ಮಾಡಲು ಸರ್ಕಾರ ನಿರ್ಧರಿಸಿದೆ.
ಇದನ್ನೂ ಓದಿ: ‘ಕೋವಿಡ್ ಮಾನವ ನಿರ್ಮಿತ’? – ಅಮೆರಿಕ ವಿಜ್ಞಾನಿಯಿಂದ ಸ್ಪೋಟಕ ಮಾಹಿತಿ
ಗಾಜಿನ ಕಿಟಕಿಗಳು ಮತ್ತು ಪ್ರತ್ಯೇಕ ಧ್ವನಿ ವ್ಯವಸ್ಥೆಯನ್ನು ಹೊಂದಿರುವ ಕ್ರೈ ರೂಂ ಅನ್ನು ಯುವ ಪೋಷಕರ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ಇದೇ ಕೋಣೆಯಲ್ಲಿ ಡೈಪರ್ ಬದಲಾಯಿಸಲು ಮತ್ತು ಮಗುವಿಗೆ ಹಾಲುಣಿಸಲು,ಆಹಾರ ನೀಡಲು ಪ್ರತ್ಯೇಕ ಸೌಕರ್ಯವಿದೆ. ತಮ್ಮ ಮಕ್ಕಳು ಅಳಲು ಪ್ರಾರಂಭಿಸಿದರೆ ಪೋಷಕರು ಚಿತ್ರಮಂದಿರದಿಂದ ಹೊರಬರುವ ಅಗತ್ಯವಿಲ್ಲ ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಕೇರಳದ ಸಂಸ್ಕೃತಿ ಸಚಿವ ವಿಎನ್ ವಾಸವನ್ ಹೇಳಿದ್ದಾರೆ.
“ಚಿಕ್ಕ ಮಕ್ಕಳಿರುವ ಪೋಷಕರು ನೆಮ್ಮದಿಯಾಗಿ ಸಿನಿಮಾ ನೋಡುವುದು ತೀರಾ ಅಪರೂಪ. ಮಕ್ಕಳು ಸಿನಿಮಾ ಹಾಲ್ ಒಳಗಿನ ಕತ್ತಲೆ, ಧ್ವನಿ ಮತ್ತು ಬೆಳಕಿನಿಂದ ಸಾಮಾನ್ಯವಾಗಿ ಅಳುವುದಕ್ಕೆ ಶುರುಮಾಡುತ್ತಾರೆ. ಈ ವೇಳೆ ಪೋಷಕರು ಥಿಯೇಟರ್ ನಿಂದ ಹೊರಹೋಗಬೇಕಾಗುತ್ತದೆ. ಥಿಯೇಟರ್‌ಗಳನ್ನು ಮಕ್ಕಳ ಸ್ನೇಹಿಯಾಗಿ ಮಾಡಲು, ಕೈರಳಿ-ಶ್ರೀ-ನಿಲಾ ಸಂಕೀರ್ಣದ ಒಳಗೆ ಕ್ರೈ ರೂಂ ವ್ಯವಸ್ಥೆ ಮಾಡಲಾಗಿದೆ. ಧ್ವನಿ ನಿರೋಧಕ ಕ್ರೈ ರೂಮ್‌ನಲ್ಲಿ ತೊಟ್ಟಿಲು ಮತ್ತು ಡೈಪರ್ ಬದಲಾಯಿಸುವ ಸೌಲಭ್ಯವಿದೆ ಎಂದು ಸಚಿವರು ಹೇಳಿದ್ದಾರೆ.
ಈ ವರ್ಷದ ಮಾರ್ಚ್‌ನಲ್ಲಿ ಥಿಯೇಟರ್ ಸಂಕೀರ್ಣದ ನವೀಕರಣ ಕಾಮಗಾರಿಯ ಭಾಗವಾಗಿ ಕ್ರೈ ರೂಂ ಅನ್ನು ಪರಿಚಯಿಸಲಾಯಿತು. ನಿಗಮದ ಹೊಸ ಯೋಜನೆಗಳಲ್ಲಿ ಈ ಸೌಲಭ್ಯ ಕಲ್ಪಿಸಲಾಗಿದೆ ಎಂದು ಕೆಎಸ್‌ಎಫ್‌ಡಿಸಿ ಅಧ್ಯಕ್ಷ ಶಾಜಿ ಎನ್ ಕರುಣ್ ತಿಳಿಸಿದರು.
“ನಾವು ತ್ರಿಶೂರ್ ಮತ್ತು ಕಾಯಂಕುಳಂ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಸುಮಾರು ಆರು ಥಿಯೇಟರ್‌ಗಳನ್ನು ಹೊಂದಿದ್ದೇವೆ. ಭವಿಷ್ಯದಲ್ಲಿ, ಎಲ್ಲಾ ಥಿಯೇಟರ್‌ಗಳು ಅಂತಹ ಸೌಲಭ್ಯಗಳನ್ನು ಹೊಂದಿರುತ್ತವೆ. ಇದು ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ಮತ್ತು ವಿಕಲಚೇತನರು ಸೇರಿದಂತೆ ಎಲ್ಲರಿಗೂ ಚಿತ್ರಮಂದಿರಗಳನ್ನು ಪ್ರವೇಶಿಸುವಂತೆ ಮಾಡುವ ಭಾಗವಾಗಿದೆ ಎಂದಿದ್ದಾರೆ.
ಐರೋಪ್ಯ ರಾಷ್ಟ್ರಗಳ ಚರ್ಚ್ ಗಳಲ್ಲಿ ಇಂತಹ ಸೌಲಭ್ಯಗಳನ್ನು ಕಂಡಿದ್ದೇನೆ ಎಂದು ಕರುಣ್ ಹೇಳಿದ್ದಾರೆ. “ಥಿಯೇಟರ್‌ಗಳು ಕೂಡ ದೇವಸ್ಥಾನಗಳಿದ್ದಂತೆ, ನಾವು ಅದನ್ನು ಎಲ್ಲರಿಗೂ ಪ್ರವೇಶಿಸುವಂತೆ ಮಾಡಬೇಕು. ವಿಶೇಷವಾಗಿ ವಿಭಕ್ತ ಕುಟುಂಬಗಳಿಗೆ ಮಕ್ಕಳನ್ನು ಕರೆದುಕೊಂಡು ಬರದೇ ಇರಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.