ಕಾಡಿನಲ್ಲಿ ಎಷ್ಟೇ ಹುಡುಕಿದರೂ ಸಿಗುತ್ತಿಲ್ಲ ಶ್ರೀನಂದಾ – ಥರ್ಮಲ್ ಡ್ರೋನ್ ಮೂಲಕ ಕಾರ್ಯಾಚರಣೆ

ಕೇರಳದಿಂದ ಕರ್ನಾಟಕಕ್ಕೆ ಪ್ರವಾಸಕ್ಕೆ ಬಂದ ಬಾಲಕಿ ನಾಪತ್ತೆಯಾಗಿ ಎರಡು ದಿನಗಳು ಕಳೆದಿವೆ. ಆದರೆ, ಬಾಲಕಿಯ ಸುಳಿವು ಇನ್ನೂ ಸಿಗಲಿಲ್ಲ. ಹೀಗಾಗಿ ಅರಣ್ಯ ಇಲಾಖೆ ಈಗ ಥರ್ಮಲ್ ಡ್ರೋನ್ ಮೊರೆ ಹೋಗಿದೆ.
ಇದನ್ನೂ ಓದಿ:ಚಾರ್ ಧಾಮ್ ಯಾತ್ರೆಗೆ ಹೋಗುವವರಿಗೆ ಬಿಗ್ ಶಾಕ್! – ಹೆಲಿಕಾಪ್ಟರ್, ಪೂಜಾ ದರಗಳಲ್ಲಿ ಭಾರಿ ಏರಿಕೆ
ಚಿಕ್ಕಮಗಳೂರು ಜಿಲ್ಲೆಯ ಮಾಣಿಕ್ಯಧಾರ ಜಲಪಾತದಲ್ಲಿ ಕೇರಳದ ಬಾಲಕಿ ಶ್ರೀನಂದಾ ನಾಪತ್ತೆಯಾಗಿ ಎರಡು ದಿನಗಳು ಕಳೆದಿದೆ. ಕಾಫಿನಾಡಿನ ಸೌಂದರ್ಯ ಸವಿಯಲು ಬಂದಿದ್ದ ಕೇರಳದ ಕುಟುಂಬಕ್ಕೆ ಮಗಳನ್ನು ಕಾಣದೇ ಕಣ್ಣೀರಿಡುತ್ತಿದ್ದಾರೆ. ಚಿಕ್ಕಮಗಳೂರಿನಲ್ಲಿ ಚಂದ್ರದ್ರೋಣ ಪರ್ವತ ಶ್ರೇಣಿಯ ಪ್ರಸಿದ್ಧ ಮಾಣಿಕ್ಯಧಾರ ಜಲಪಾತ ವೀಕ್ಷಣೆಗೆ ಪಾಲಕಾಡ್ ಜಿಲ್ಲೆಯ ಬಾಲಕಿ ಶ್ರೀನಂದಾ ಕುಟುಂಬ ಆಗಮಿಸಿತ್ತು. ಆದರೆ, ಮಂಗಳವಾರ ಸಂಜೆ 5 ಗಂಟೆಗೆ ಬಾಲಕಿ ಶ್ರೀನಂದಾ ದಿಢೀರ್ ನಾಪತ್ತೆಯಾಗಿದ್ದಾಳೆ. ಈಕೆ 10ನೇ ತರಗತಿ ವಿದ್ಯಾರ್ಥಿನಿ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರು ಅಲರ್ಟ್ ಆಗಿದ್ದಾರೆ. ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು, ಕೇವಲ ಪೊಲೀಸ್ ಮತ್ತು ಜಿಲ್ಲಾಡಳಿತವಷ್ಟೇ ಅಲ್ಲದೇ, ದಟ್ಟ ಅರಣ್ಯದಲ್ಲಿ ಸಂಚರಿಸಲು ಪರಿಣಿತಿ ಹೊಂದಿರುವ ಅರಣ್ಯ ಇಲಾಖೆಯ ವಿಶೇಷ ತಂಡವನ್ನು ಕಳುಹಿಸಿದ್ದಾರೆ.
ಗುಡ್ಡಗಾಡು ಪ್ರದೇಶವಾಗಿರುವುದರಿಂದ, ಮನುಷ್ಯನ ಕಣ್ಣಿಗೆ ನಿಲುಕದ ಜಾಗಗಳನ್ನು ಪತ್ತೆಹಚ್ಚಲು ಥರ್ಮಲ್ ಸೆನ್ಸರ್ ಇರುವ ಡ್ರೋನ್‍ಗಳನ್ನು ಬಳಸಲು ಸೂಚಿಸಲಾಗಿದೆ. ಜಂಟಿ ಕಾರ್ಯಾಚರಣೆ ಅರಣ್ಯ ಇಲಾಖೆಯ ನುರಿತ ಸಿಬ್ಬಂದಿ ಈಗ ಪೊಲೀಸ್ ಪಡೆಯೊಂದಿಗೆ ಕಾರ್ಯಾಚರಣೆ ನಡೆಸಲಿದ್ದಾರೆ. ಬಾಲಕಿ ನಾಪತ್ತೆಯಾದ ಸ್ಥಳವು ಅತ್ಯಂತ ಕಡಿದಾದ ಗುಡ್ಡಗಳಿಂದ ಕೂಡಿದೆ. ಆ ಪ್ರದೇಶವು ತಾಂತ್ರಿಕವಾಗಿ ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರದಿದ್ದರೂ, ಬಾಲಕಿಯ ಪ್ರಾಣ ಉಳಿಸುವ ದೃಷ್ಟಿಯಿಂದ ಇಲಾಖೆಯ ಬೆಂಬಲ ಅತ್ಯಗತ್ಯ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವ ಸಚಿವರು, ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ನೋಡಿರಿ

