ಕೇರಳ ಬ್ಲಾಸ್ಟ್ ಮಾಹಿತಿ ಸರ್ಕಾರಕ್ಕೆ ಮೊದಲೇ ಗೊತ್ತಿತ್ತಾ? – ಕ್ರಿಶ್ಚಿಯನ್ನರ ನಡುವೆ ಏನಿದು ದೇವರ ಕದನ?

ಕೇರಳ ಬ್ಲಾಸ್ಟ್ ಮಾಹಿತಿ ಸರ್ಕಾರಕ್ಕೆ ಮೊದಲೇ ಗೊತ್ತಿತ್ತಾ? – ಕ್ರಿಶ್ಚಿಯನ್ನರ ನಡುವೆ ಏನಿದು ದೇವರ ಕದನ?

ದೇವರನಾಡು ಕೇರಳದಲ್ಲೀಗ ಬಾಂಬ್ ಸ್ಫೋಟದ್ದೇ ಸದ್ದು. ಚರ್ಚ್ ನಲ್ಲಿ ನಡೆದ ಸೀರಿಯಲ್ ಬ್ಲಾಸ್ಟ್ ಗೆ ನರಮೇಧವೇ ನಡೆದಿದೆ. ಬೆಂಕಿ ಜ್ವಾಲೆಯಲ್ಲಿ ಬೆಂದು 50ಕ್ಕೂ ಹೆಚ್ಚು ಜನ ಆಸ್ಪತ್ರೆಗಳಲ್ಲಿ ನರಳಾಡುತ್ತಿದ್ದಾರೆ. ಪ್ರಾರ್ಥನಾ ಸ್ಥಳದಲ್ಲಿ ನಡೆದ ಅಟ್ಟಹಾಸ ಇಡೀ ದೇಶವನ್ನೇ ನಡುಗಿಸಿದ್ದು, ಉಗ್ರರ ಕರಿನೆರಳು ಬಿದ್ದಿತಾ ಎಂಬ ಆತಂಕ ಮೂಡಿಸಿದೆ. ಕೇಂದ್ರದ ತನಿಖಾ ಏಜೆನ್ಸಿಗಳು ಫೀಲ್ಡಿಗಿಳಿದಿದ್ದು, ಗೃಹ ಸಚಿವರು ಕೂಡ ಕಟ್ಟೆಚ್ಚರಕ್ಕೆ ಸೂಚನೆ ನೀಡಿದ್ದಾರೆ. ಅದ್ರಲ್ಲೂ ದೆಹಲಿ ಮತ್ತು ಮುಂಬೈನಲ್ಲಿ ದಿಢೀರನೇ ಭದ್ರಕೋಟೆ ನಿರ್ಮಿಸಲಾಗಿದೆ. ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಕಟ್ಟೆಚ್ಚರಕ್ಕೆ ಸಿದ್ದರಾಮಯ್ಯ ಸರ್ಕಾರ ಸೂಚಿಸಿದೆ. ಹಾಗಾದ್ರೆ ದೇಶದೊಳಗೆ ಉಗ್ರರು ನುಸುಳಿದ್ದಾರಾ..? ರಕ್ತಪಾತಕ್ಕೆ ಸಂಚು ನಡೆದಿದೆಯಾ ಅನ್ನೋ ವಿಸ್ತೃತ ವರದಿ ಇಲ್ಲಿದೆ.

ಕರ್ನಾಟಕದ ಕರಾವಳಿಗೆ ಹೊಂದಿಕೊಂಡಂತಿರುವ ರಾಜ್ಯ ಕೇರಳ. ಪ್ರವಾಸಕ್ಕೆ ಹೇಳಿ ಮಾಡಿಸಿದಂತಹ ತಾಣ. ಆದ್ರೆ ಅಕ್ಟೋಬರ್ 29ರ ಭಾನುವಾರ ಇಡೀ ಕೇರಳವೇ ಕಂಪಿಸುವಂಥ ಸ್ಫೋಟ ಸಂಭವಿಸಿದೆ. ಎರ್ನಾಕುಲಂ ಜಿಲ್ಲೆಯ ಕಲಮಸ್ಸೆರಿಯ ಕನ್ವೆನ್ಷನ್ ಸೆಂಟರ್ ನಲ್ಲಿ ಸೀರಿಯಲ್ ಬ್ಲಾಸ್ಟ್ ಮಾಡಲಾಗಿದೆ. 2 ಸಾವಿರಕ್ಕೂ ಹೆಚ್ಚು ಜನ ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆ ಸಿಡಿದ ಬಾಂಬ್ ಹಲವರನ್ನ ಬಲಿ ಪಡೆದಿದೆ. 50 ಜನ ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂರು ದಿನಗಳ ಪ್ರಾರ್ಥನಾ ಸಭೆಯ ಮುಕ್ತಾಯದ ದಿನ ಯೆಹೋವನ ಪ್ರಾರ್ಥನೆಗಾಗಿ ಒಟ್ಟುಗೂಡಿದಾಗ ಇಂಥದ್ದೊಂದು ಕೃತ್ಯ ಎಸಗಲಾಗಿದೆ. ಇದೇ ಸ್ಫೋಟ ರಾಷ್ಟ್ರ ಮಟ್ಟದಲ್ಲಿ ಆತಂಕ ಮೂಡಿಸಿದ್ದು ದೆಹಲಿ ಮತ್ತು ಮುಂಬೈನಲ್ಲಿ ಹದ್ದಿನ ಕಣ್ಣಿಡಲಾಗಿದೆ. ಸ್ಫೋಟದ ಹಿಂದೆ ಭಯೋತ್ಪಾದಕರ ಕೈವಾಡದ ಶಂಕೆ ಕೂಡ ವ್ಯಕ್ತವಾಗಿದೆ. ಕೇರಳ ಪೊಲೀಸರು, ಕೇಂದ್ರದ ತನಿಖಾ ಏಜೆನ್ಸಿಗಳು ಫೀಲ್ಡಿಗಿಳಿದು ಸ್ಫೋಟದ ರೂವಾರಿಗಳನ್ನ ಹುಡುಕುವಾಗಲೇ ಫೇಸ್ಬುಕ್ನಲ್ಲೊಬ್ಬ ಪ್ರತ್ಯಕ್ಷವಾಗಿದ್ದ. ಸರಣಿ ಸ್ಫೋಟದ ರೂವಾರಿ ನಾನೇ, ನಾನೇ ಬಾಂಬ್ ಬ್ಲಾಸ್ಟ್ ಮಾಡಿದ್ದು ಎಂದು ವಿಡಿಯೋದಲ್ಲಿ ಹೇಳಿಕೆ ನೀಡಿದ್ದ. ಬಳಿಕ ತಾನೇ ಹೋಗಿ ಪೊಲೀಸ್ ಸ್ಟೇಷನ್ನಲ್ಲಿ ಸರೆಂಡರ್ ಕೂಡ ಆಗಿದ್ದ. ತಾನೊಬ್ಬ ಯೆಹೋವನ ಅನುಯಾಯಿ ಎಂದು ಹೇಳಿಕೊಳ್ತಿದ್ದ ಡೊಮೆನಿಕ್ ಮಾರ್ಟಿನ್ ಎಂಬಾತ ತಾನೇ ಸ್ಫೋಟ ನಡೆಸಿದ್ದಾಗಿ ಒಪ್ಪಿಕೊಂಡಿದ್ದ.

ಇದನ್ನೂ ಓದಿ:  ಇಸ್ರೇಲ್ ಒತ್ತಾಯಕ್ಕೆ ಮಣಿದು ಹಮಾಸ್ ಗೆ ಉಗ್ರ ಪಟ್ಟ ಕಟ್ಟುತ್ತಾ ಭಾರತ? – ಪ್ರಧಾನಿ ಮೋದಿ ಮುಂದಿನ ನಡೆಯೇನು?

ಫೇಸ್ಬುಕ್ ವಿಡಿಯೋದಲ್ಲಿ 44 ವರ್ಷದ ಡೊಮಿನಿಕ್ ಮಾರ್ಟಿನ್ ತನ್ನ ಕೃತ್ಯಕ್ಕೆ ಸಮರ್ಥನೆ ಕೂಡ ನೀಡಿದ್ದ. ಪೊಲೀಸರಿಗೆ ಶರಣಾಗುವ ಮೊದಲು ಫೇಸ್ಬುಕ್ ಲೈವ್ನಲ್ಲಿ ಬಾಂಬ್ ಸ್ಫೋಟ ನಡೆಸಿದ ಕಾರಣಗಳನ್ನ ಹೇಳಿದ್ದ. ತಾನು ಕ್ರಿಶ್ಚಿಯನ್ ಧಾರ್ಮಿಕ ಗುಂಪಿನ ಅನುಯಾಯಿ. ಆದರೆ ಇವರ ಚಟುವಟಿಕೆ ರಾಷ್ಟ್ರದ್ರೋಹಿಯಾಗಿದೆ, ಹಾಗಾಗಿ ಇವರನ್ನು ಕೊಲ್ಲುತ್ತಿದ್ದೇನೆ ಎಂದು ಹೇಳಿಕೊಂಡಿದ್ದ. 16 ವರ್ಷಗಳ ಕಾಲ ಅವರ ಸಂಘಟನೆಯೊಂದಿಗೇ ಇದ್ದೆ. ಆದ್ರೆ ಇವರು ತಾವು ಮಾತ್ರ ಶ್ರೇಷ್ಠ ಎನ್ನುವ ಮನೋಭಾವನೆ ಹೊಂದಿದ್ದಾರೆ. ಇದಕ್ಕಾಗಿ ಕೊಲ್ಲುತ್ತಿದ್ದೇನೆ ಎಂದು ಕಾರಣ ಕೊಟ್ಟಿದ್ದ. ಅಷ್ಟಕ್ಕೂ ಈತನಿಗೆ ಬಾಂಬ್ ಸಿಕ್ಕಿದ್ದೇಗೆ..? ಅದನ್ನ ಹೇಗೆ ಚರ್ಚ್ ಒಳಗೆ ತಂದಿದ್ದ ಅನ್ನೋದೇ ಆಘಾತಕಾರಿಯಾಗಿದೆ.

ಆರೋಪಿ ಮಾರ್ಟಿನ್ ಯೂಟ್ಯೂಬ್ ನೋಡಿಕೊಂಡು ಮನೆಯಲ್ಲೇ ಬಾಂಬ್ ತಯಾರಿಸಿದ್ದ. ಬಳಿಕ ಅದನ್ನ ತೆಗೆದುಕೊಂಡು ಕಳಮಶ್ಶೇರಿಯಲ್ಲಿರುವ ಕನ್ವೆನ್ಷನ್ ಸೆಂಟರ್ಗೆ ತೆರಳಿದ್ದ. ಭಾನುವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಚರ್ಚೆಗೆ ತೆರಳಿ ಕಾರ್ಯಕ್ರಮ ನಡೆಯುತ್ತಿದ್ದ ಸಭಾಂಗಣದ ಕುರ್ಚಿಯ ಕೆಳಗೆ ಬಾಂಬ್ ಇಟ್ಟಿದ್ದ.  ಟಿಫಿನ್ ಬಾಕ್ಸ್ ನಲ್ಲಿ ಬಾಂಬ್ ಇಟ್ಟಿದ್ದ ಎಂದು ಶಂಕಿಸಲಾಗಿತ್ತು ಆದರೆ ಆತ ಆರು ಪ್ಲಾಸ್ಟಿಕ್ ಕವರ್ಗಳಲ್ಲಿ ಬಾಂಬ್ ಇರಿಸಿದ್ದ. ಪೆಟ್ರೋಲ್ ತುಂಬಿದ ಪ್ಲಾಸ್ಟಿಕ್ ಚೀಲಕ್ಕೆ ರಿಮೋಟ್ ಜೋಡಣೆ ಮಾಡಲಾಗಿತ್ತು. ಬ್ಯಾಟರಿಗೆ ಜೋಡಿಸಲಾದ ಗನ್ ನಿಂದ ಕಿಡಿ ಸೃಷ್ಟಿಯಾಗಿ ನಂತರ ಸ್ಫೋಟಗೊಂಡಿತ್ತು. ಇನ್ನು ಸ್ಫೋಟಕ್ಕಾಗಿ 8 ಲೀಟರ್ ಪೆಟ್ರೋಲ್, 50 ಶೆಲ್ ಗಳನ್ನು ಬಳಸಿದ್ದು, ಇದೆಲ್ಲವನ್ನೂ ತ್ರಿಪೂಣಿತ್ತರದ ಪಟಾಕಿ ಅಂಗಡಿಯೊಂದರಲ್ಲಿ ಖರೀದಿಸಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಚರ್ಚ್ನ ಸಮಾವೇಶದ ಸ್ಥಳದಲ್ಲಿ ಆರೋಪಿ ಮಾರ್ಟಿನ್ ಸಂಬಂಧಿಕರು ಕೂಡ ಭಾಗಿಯಾಗಿದ್ರು ಎನ್ನುವ ಮಾಹಿತಿ ಇದೆ. ಆದರೆ ಅವರ್ಯಾರೂ ಸ್ಫೋಟ ಸಂಭವಿಸಿದ ಸ್ಥಳದಲ್ಲಿ ಕುಳಿತಿರಲಿಲ್ಲ, ಸಭಾಂಗಣದ ಹಿಂಭಾಗದಲ್ಲಿ ಕುಳಿತಿದ್ದರು ಎನ್ನಲಾಗಿದೆ.

ಚರ್ಚ್ನಲ್ಲಿ ಪ್ರಾರ್ಥನೆ ಆರಂಭವಾದ ಕೆಲವೇ ನಿಮಿಷಗಳಲ್ಲಿ 3 ಬಾರಿ ಸ್ಫೋಟ ಸಂಭವಿಸಿದೆ. 2,000 ಜನ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಮುಂಜಾಗ್ರತಾ ಕ್ರಮಗಳನ್ನೇ ಕೈಗೊಂಡಿರಲಿಲ್ಲವಾ ಅನ್ನೋ ಅನುಮಾನ ಮೂಡಿದೆ. ವಿವಿಧ ಆಯಾಮಗಳಲ್ಲಿ ಎನ್ಐಎ ಟೀಂ ತನಿಖೆ ನಡೆಸುತ್ತಿದೆ. ಹಾಗೇ ಆರೋಪಿ ಡೊಮೆನಿಕ್ ಮಾರ್ಟಿನ್ನ ಮೂಲವನ್ನೂ ಕೆದಕುತ್ತಿದೆ. ವಿಚಾರಣೆ ವೇಳೆ ಆರೋಪಿ ಮಾರ್ಟಿನ್ ತಾನು ಕಡವಂತ್ರ ಮೂಲದವನೆಂದು ಹೇಳಿಕೊಂಡಿದ್ದ. ಆದ್ರೆ ಕೇಂದ್ರದ ತನಿಖಾ ಏಜೆನ್ಸಿಗಳು ಮತ್ತು ಕೇರಳ ಪೊಲೀಸರು ತನಿಖೆ ನಡೆಸಿದಾಗ ಆತ ವಿದೇಶದಲ್ಲಿದ್ದ ಅನ್ನೋದು ಗೊತ್ತಾಗಿದೆ. ಜೆಹೋವನ ಸಾಕ್ಷಿಗಳ ಸಭೆಯನ್ನ ದ್ವೇಷಿಸುತ್ತಿದ್ದ ಮಾರ್ಟಿನ್ ಗೆ ಅಕ್ಟೋಬರ್ 29ರ ಭಾನುವಾರದಂದು ಅವರು ಸಭೆ ನಡೆಸುತ್ತಿರೋ ಮಾಹಿತಿ ಗೊತ್ತಾಗಿತ್ತು. ಹೀಗಾಗಿ ಸ್ಫೋಟಿಸಲೆಂದೇ  ದುಬೈನಿಂದ ಬಂದಿದ್ದ ಅನ್ನೋ ಮಾಹಿತಿ ಲಭ್ಯವಾಗಿದೆ. ಫೇಸ್ಬುಕ್ ಲೈವ್ನಲ್ಲಿ ಆರೋಪಿಯೇ ಹೇಳಿಕೊಂಡಂತೆ ಆತ ಜೆಹೋವಾಸ್ ವಿಟ್ನೆಸಸ್ ಗಳ ಮೇಲಿನ ಸಿಟ್ಟಿಗೆ ದಾಳಿ ನಡೆಸಿರೋದಾಗಿ ಹೇಳಿದ್ದಾನೆ. ಈತನಿಗ್ಯಾಕೆ ಇವರ ಮೇಲೆ ಸಿಟ್ಟು ಅಂದ್ರೆ ಅದಕ್ಕೂ ಒಂದಷ್ಟು ಕಾರಣ ಅವನೇ ಕೊಟ್ಟಿದ್ದಾನೆ.

ಜೆಹೋವಾಸ್ ವಿಟ್ನೆಸಸ್ ಪಂಗಡದವರಾದ ಇವರು ತಾವಷ್ಟೇ ಪರಿಶುದ್ಧ ಕ್ರೈಸ್ತ ನಂಬಿಕಸ್ಥರು ಎಂದು ಹೇಳಿಕೊಳ್ಳುತ್ತಾರೆ. ಬೈಬಲ್ನಲ್ಲಿರುವ ವಿಚಾರಗಳು ದೇವರ ನುಡಿಗಳಾಗಿದ್ದು, ಅವು ಮಾತ್ರ ಸತ್ಯವೆಂದು ಇವರು ನಂಬುತ್ತಾರೆ. ಅಬ್ರಹಾಂ ಆಗಲೀ, ಮೋಸಸ್ ಆಗಲೀ ಜೀಸಸ್ ಆಗಲೀ ಇವರಾರೂ ದೈವಾಂಶ ಸಂಭೂತರಲ್ಲ. ಜೆಹೋವಾಹ್ ಮಾತ್ರವೇ ಏಕಮಾತ್ರ ದೇವರು. ಏಸು ಕ್ರಿಸ್ತನು ಸ್ವರ್ಗದಲ್ಲಿರುವ ದೇವಲೋಕದ ದೊರೆಯಷ್ಟೇ ಎಂದು ಪರಿಗಣಿಸುತ್ತಾರೆ. ಅಲ್ಲದೆ ಜಗತ್ತು ವಿನಾಶಗೊಂಡು, ಭೂಮಿಯಲ್ಲಿ ದೈವ ಸಾಮ್ರಾಜ್ಯ ಸ್ಥಾಪನೆಯಾಗುತ್ತದೆ ಎಂದು ನಂಬಿದ್ದಾರೆ. ಬೈಬಲ್ ನುಡಿಗಳ ಮೇಲೆ ಅಚಲ ನಂಬಿಕೆ ಇಟ್ಟುಕೊಂಡಿರುವ ಇವರು  ಬೈಬಲ್ನಲ್ಲಿ ಪ್ರಸ್ತಾಪಿಸಿರುವಂತೆ ಆರ್ಮೆಗೆಡ್ಡಾನ್ ಎಂಬ ಪ್ರಳಯ ಸದ್ಯದಲ್ಲೇ ಸಂಭವಿಸುತ್ತದೆ. ಇಡೀ ಜಗತ್ತು ಬಹಳ ಬೇಗ ವಿನಾಶಗೊಂಡು, ಆ ಬಳಿಕ ದೇವರ ಸಾಮ್ರಾಜ್ಯವು ಈ ಭೂಮಿಯಲ್ಲಿ ಸ್ಥಾಪನೆಯಾಗುತ್ತದೆ. ಆಗ ಮನುಷ್ಯ ಆಡಳಿತ ಇರುವುದಿಲ್ಲ. ಎಲ್ಲವನ್ನೂ ದೇವರೇ ನಿಭಾಯಿಸುತ್ತದೆ ಎಂದು ನಂಬಿದ್ದಾರೆ. ಜೊತೆಗೆ ಯೇಸು ಕ್ರಿಸ್ತನ ಜನ್ಮದಿನದ ಕ್ರಿಸ್ಮಸ್ ಹಬ್ಬವನ್ನಾಗಲೀ, ಈಸ್ಟರ್ ಹಬ್ಬವನ್ನಾಗಲೀ ಜೆಹೋವಾಸ್ ವಿಟ್ನೆಸಸ್ ಪಂಗಡ ಆಚರಿಸುವುದಿಲ್ಲ. ಯಾರದೇ ಜಯಂತಿ, ಪುಣ್ಯತಿಥಿಗಳಲ್ಲಿ ಇವರು ಪಾಲ್ಗೊಳ್ಳುವುದಿಲ್ಲ. ಅವೆಲ್ಲವೂ ಸೈತಾನ್ ಪ್ರೇರಿತ ಆಚರಣೆಗಳು ಎಂಬುದು ಇವರ ವಾದ.

19ನೇ ಶತಮಾನದಲ್ಲಿ ಶುರುವಾದ ಈ ಪಂಗಡಕ್ಕೆ ವಿಶ್ವಾದ್ಯಂತ ಕೋಟ್ಯಂತರ ಅನುಯಾಯಿಗಳಿದ್ದಾರೆ.   ಭಾರತದಲ್ಲೂ ಈ ಪಂಗಡ ಇದ್ದು, ರಾಜಕೀಯದಿಂದಲೇ ಇವರು ದೂರ ಉಳಿಯುತ್ತಾರೆ. ಜೊತೆಗೆ ಇನ್ನೊಬ್ಬರ ರಕ್ತವನ್ನು ಇವರ ಮೈಗೆ ಹರಿಯಬಿಡುವುದಿಲ್ಲ. ಯಾವುದೇ ದೇಶದ ಮಿಲಿಟರಿಗೆ ಇವರು ಸೇರುವುದೂ ಇಲ್ಲ. ಯಾವ ರಾಷ್ಟ್ರಧ್ವಜಕ್ಕೂ ಇವರು ವಂದಿಸುವುದಿಲ್ಲ. ಯಾಕಂದ್ರೆ ಜೆಹೋವಾಸ್ ಮಾತ್ರವೇ ಇವರಿಗೆ ಏಕಮಾತ್ರ ಪರಮೋಚ್ಛ ದೇವರು. ಸದ್ಯ ಸ್ಫೋಟದ ಹಿನ್ನೆಲೆ ಕೇರಳದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಸೋಮವಾರ ಕೇರಳ ಸಿಎಂ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಸಮಾಜಘಾತುಕ ಶಕ್ತಿಗಳ ವಿರುದ್ಧ ಜಯಿಸಲು ಸಾಮೂಹಿಕವಾಗಿ ನಿರ್ಣಯ ಕೈಗೊಳ್ಳಲಾಗಿದೆ.

ಪ್ರಕರಣವನ್ನ ಕೇಂದ್ರ ಸರ್ಕಾರ ಕೂಡ ಗಂಭೀರವಾಗಿ ಪರಿಗಣಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ದೇಶದ ಹಲವೆಡೆ ಹೈಅಲರ್ಟ್ಗೆ ಸೂಚಿಸಿದ್ದಾರೆ. ಅದರಲ್ಲೂ ದೇಶದ ರಾಜಧಾನಿ ದೆಹಲಿ ಮತ್ತು ಮುಂಬೈನಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಕೇರಳದ ಸರಣಿ ಸ್ಫೋಟ ಪ್ರಕರಣದ ಬಳಿಕ ಕೇಂದ್ರ ಸರ್ಕಾರ ಅಲರ್ಟ್ ಆಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಘಟನೆ ಬಗ್ಗೆ ಮಾಹಿತಿ ಪಡೆದಿದ್ದು, ಕೇರಳ ಸರ್ಕಾರಕ್ಕೆ ಅಗತ್ಯ ನೆರವು ನೀಡುವುದಾಗಿ ತಿಳಿಸಿದ್ದಾರೆ. ಅಲ್ಲದೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಮುಖ ಮಾರುಕಟ್ಟೆಗಳು, ಚರ್ಚ್‌ಗಳು, ಮೆಟ್ರೊ ನಿಲ್ದಾಣ, ಬಸ್ ನಿಲ್ದಾಣ, ರೈಲು ನಿಲ್ದಾಣಗಳು ಸೇರಿದಂತೆ ಇತರ ಸಾರ್ವಜನಿಕ ಸ್ಥಳಗಳಲ್ಲಿ ಭದ್ರತೆಯನ್ನ ಹೆಚ್ಚಿಸಲಾಗಿದೆ. ಉತ್ತರ ಪ್ರದೇಶ, ಹರಿಯಾಣ ಮತ್ತು ದೆಹಲಿಯ ಗಡಿ ಪ್ರದೇಶಗಳಲ್ಲಿ ಹೆಚ್ಚಿನ ಬ್ಯಾರಿಕೇಡ್‌ಗಳನ್ನು ಅಳವಡಿಸಿ, ತಪಾಸಣೆ ನಡೆಸಲು ಸೂಚನೆ ನೀಡಲಾಗಿದೆ. ಸಿವಿಲ್ ಡ್ರೆಸ್ ಮತ್ತು ಪಿಸಿಆರ್ನಲ್ಲಿರುವ ಪೊಲೀಸರು ಜಾಗರೂಕರಾಗಿರಲು ತಿಳಿಸಲಾಗಿದೆ. ಜತೆಗೆ, ಅವರಿಗೆ ಬರುವ ಯಾವುದೇ ಮಾಹಿತಿಯನ್ನು ನಿರ್ಲಕ್ಷಿಸದಂತೆ ಸೂಚಿಸಲಾಗಿದೆ.

ಒಂದ್ಕಡೆ ಭದ್ರತೆ ಹೆಚ್ಚಿಸಲಾಗ್ತಿದೆ. ಇದರ ನಡುವೆ ನಾವು ಕೇರಳದ ರಚನೆಯನ್ನೂ ಗಮನಿಸಬೇಕಾಗುತ್ತದೆ. 2023ರ ಪ್ರಕಾರ 3.57 ಕೋಟಿ ಜನಸಂಖ್ಯೆ ಇದೆ. ಎಲ್ಲಾ ಧರ್ಮಗಳ ಜನರೂ ಇಲ್ಲಿ ವಾಸಿಸುತ್ತಿದ್ದಾರೆ. ಅದ್ರಲ್ಲೂ ಕೇರಳದಲ್ಲಿ ಅತೀ ಹೆಚ್ಚು ಇರುವ ಜನಸಂಖ್ಯೆ ಎಂದರೆ ಅದು ಹಿಂದೂಗಳು. ಬಳಿಕ ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೇರಳದ ಪ್ರಮುಖ ಧರ್ಮಗಳಂದ್ರೆ ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ನರು. 2011 ರ ಜನಗಣತಿಯ ಪ್ರಕಾರ ಕೇರಳದ ಜನಸಂಖ್ಯೆಯಲ್ಲಿ ಶೇಕಡಾ ಅರ್ಧಕ್ಕಿಂತ ಹೆಚ್ಚು ಹಿಂದೂಗಳೇ ಇದ್ದಾರೆ. ಶೇಕಡಾ 54 ರಷ್ಟು ಹಿಂದೂಗಳು,  26.5 ಪರ್ಸೆಂಟ್ ಮುಸ್ಲಿಮರು, 18.3ರಷ್ಟು ಕ್ರಿಶ್ಚಿಯನ್ನರಿದ್ದಾರೆ. ಸಿಖ್ಖರು, ಬೌದ್ಧರು ಮತ್ತು ಜೈನರು 5 ಸಾವಿರಕ್ಕಿಂತಲೂ ಕಡಿಮೆ ಜನಸಂಖ್ಯೆ ಹೊಂದಿದ್ದಾರೆ. ಸದ್ಯ ಕೇರಳದಲ್ಲಿ ಸರಣಿ ಬಾಂಬ್ ಬಳಿಕ ಕಟ್ಟೆಚ್ಚರ ವಹಿಸಲಾಗಿದೆ. ಕೇಂದ್ರ ಕೂಡ ಅಲರ್ಟ್ ಆಗಿದ್ದು ಪ್ರಮುಖ ನಗರಗಳಲ್ಲಿ ಭದ್ರತೆ ಹೆಚ್ಚಿಸಿದೆ. ಇದರ ನಡುವೆ ಆರೋಪಿ ಮಾರ್ಟಿನ್ ತಾನೇ ಬಾಂಬ್ ಬ್ಲಾಸ್ಟ್ ಮಾಡಿರೋದಾಗಿ ಹೇಳಿಕೊಂಡಿದ್ರೂ ಕೂಡ ಅದರ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ. ಜೊತೆಗೆ ಭಯೋತ್ಪಾದಕರ ಕೈವಾಡದ ಶಂಕೆಯೂ ಇದೆ. ಈ ಎಲ್ಲಾ ಆಯಾಮಗಳಲ್ಲೂ ಎನ್ಐಎ ತಂಡ ಪರಿಶೀಲನೆ ನಡೆಸುತ್ತಿದೆ.

Shwetha M