ಕೇದಾರನಾಥದಲ್ಲಿ ಮಳೆ, ಹಿಮಪಾತ – ಮುಂದಿನ 3 ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಣೆ
ಉತ್ತರಾಖಂಡದ ಹಲವು ಪ್ರದೇಶಗಳಲ್ಲಿ ಭಾರೀ ಮಳೆ ಮತ್ತು ಹಿಮಪಾತವಾಗುತ್ತಿದೆ. ಬದರಿನಾಥ್ ಮತ್ತು ಕೇದಾರನಾಥ ದೇವಾಲಯಗಳಿಗೆ ತೆರಳಿರುವ ಭಕ್ತಾಧಿಗಳಿಗೆ ಹವಾಮಾನ ಉತ್ತಮವಾಗುವವರೆಗೆ ತಂಗಿರುವ ಸ್ಥಳದಲ್ಲಿಯೇ ಇರುವಂತೆ ತಿಳಿಸಲಾಗಿದೆ.
ಉತ್ತರಾಖಂಡದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಈ ಭಾಗಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಮುಂದಿನ 2 ರಿಂದ 3 ದಿನಗಳವರೆಗೆ ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.
ಇದನ್ನೂ ಓದಿ:ಯಜಮಾನನನ್ನು ಹುಡುಕಿಕೊಂಡು 64 ಕಿ.ಮೀ ದೂರದಿಂದ ಬಂದ ಶ್ವಾನ!
ಕೇದಾರನಾಥಕ್ಕೆ ಭೇಟಿ ನಿಡಲು ಬರುವ ಯಾತ್ರಾರ್ಥಿಗಳ ಸುರಕ್ಷತೆಗಾಗಿ ಮನವಿ ಮಾಡಲಾಗುತ್ತಿದೆ. ಹವಾಮಾನ ಉತ್ತಮವಾಗುವವರೆಗೆ ಪ್ರಯಾಣಿಕರು ಸುರಕ್ಷಿತ ಸ್ಥಳದಲ್ಲಿ ಇರಿ. ಮುಂಜಾಗೃತ ಕ್ರಮಗಳನ್ನು ಅನುಸರಿಸಿಯೇ ಯಾತ್ರೆಯನ್ನು ಮುಂದುವರಿಸಿ ಎಂದು ರುದ್ರಪ್ರಯಾಗದ ಜಿಲ್ಲಾಧಿಕಾರಿ ಮಯೂರ್ ದೀಕ್ಷಿತ್ ಸೂಚಿಸಿದ್ದಾರೆ.
ಎಲ್ಲ ಪ್ರಯಾಣಿಕರು ತಮ್ಮ ಸುರಕ್ಷತೆಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಹೊರಡಿಸಿರುವ ಮಾರ್ಗಸೂಚಿಗಳನ್ನು ಅನುಸರಿಸಿ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು. ಹವಾಮಾನ ಉತ್ತಮವಾದ ಬಳಿಕ ಮಾತ್ರ ಎಲ್ಲಾ ಯಾತ್ರಾರ್ಥಿಗಳು ಕೇದಾರನಾಥಕ್ಕೆ ತಮ್ಮ ಪ್ರಯಾಣವನ್ನು ಬೆಳೆಸಬಹುದು ಎಂದು ದೀಕ್ಷಿತ್ ಹೇಳಿದ್ದಾರೆ.
ಏಪ್ರಿಲ್ 25 ರಂದು ಯಾತ್ರಾರ್ಥಿಗಳಿಗೆ ಕೇದಾರನಾಥದ ಬಾಗಿಲನ್ನು ತೆರೆಯಲಾಯಿತು. ಆದರೆ ಯಾತ್ರೆಯ ಮಾರ್ಗದಲ್ಲಿ ಹಿಮಪಾತ ಹಾಗೂ ಹವಾಮಾನ ಪ್ರತಿಕೂಲತೆಯ ಹಿನ್ನೆಲೆ ಉತ್ತರಾಖಂಡ ಸರ್ಕಾರ ಕೇದಾರನಾಥ ಯಾತ್ರೆಗೆ ಯಾತ್ರಿಕರಿಂದ ನೋಂದಣಿ ಅರ್ಜಿಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದೆ.