ಬಂಗಾರದಿಂದ ಮಿರ ಮಿರ ಮಿನುಗುತ್ತಿರುವ ಕೇದಾರನಾಥ

ಬಂಗಾರದಿಂದ ಮಿರ ಮಿರ ಮಿನುಗುತ್ತಿರುವ ಕೇದಾರನಾಥ

ಉತ್ತರಾಖಂಡ ರಾಜ್ಯದ ವಿಶ್ವವಿಖ್ಯಾತ ಕೇದಾರನಾಥ ದೇವಸ್ಥಾನದ ಗರ್ಭಗುಡಿಗೆ ಬಂಗಾರದ ಹೊಳಪು ಬಂದಿದೆ. ಇಷ್ಟು ದಿನ ಬೆಳ್ಳಿಯಲ್ಲಿ ಬಿಳಿ ಬಿಳಿಯಾಗಿ ಹೊಳೆಯುತ್ತಿದ್ದ ಕೇದಾರನಾಥ ದೇವಸ್ಥಾನದ ಗರ್ಭಗುಡಿಯ ಗೋಡೆಗಳು ಈಗ ಚಿನ್ನದ ಲೇಪನದಿಂದ ಫಳ ಪಳ ಹೊಳೆಯುತ್ತಿದೆ. ದೇವಸ್ಥಾನದ ಗರ್ಭಗುಡಿಯ ಗೋಡೆಗಳಿಗೆ ಈ ಹಿಂದೆ ಬೆಳ್ಳಿಯ ಹಾಳೆಗಳನ್ನ ಜೋಡಿಸಲಾಗಿತ್ತು. ಇದೀಗ ಇದನ್ನೆಲ್ಲಾ ತೆಗೆದು ಚಿನ್ನದ ಹಾಳೆಗಳನ್ನ ಹಾಕಲಾಗಿದೆ.

ಕೇದಾರನಾಥ ದೇವಸ್ಥಾನದಲ್ಲಿ ಅಕ್ಟೋಬರ್ 26ರಂದು ಚಿನ್ನದ ಲೇಪನ ಅಳವಡಿಕೆ ಕಾರ್ಯ ಮುಕ್ತಾಯಗೊಂಡಿದೆ. ಇಬ್ಬರು ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಕೊನೆಯ ಹಂತದ ಚಿನ್ನದ ಲೇಪನ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ. ಗರ್ಭಗುಡಿಯ ಗೋಡೆಗಳು ಮತ್ತು ಛಾವಣಿಗಳ ಮೇಲೆ ಒಟ್ಟು 550 ಚಿನ್ನದ ಪದರಗಳನ್ನು ಬಳಸಲಾಗಿದೆ. 230 ಕೆ.ಜಿ ತೂಕದ ಚಿನ್ನದ ಲೇಪನದಿಂದ ಕೇದಾರನಾಥ ದೇವಾಲಯದ ಗರ್ಭಗುಡಿ ಇದೀಗ ಬಂಗಾರವರ್ಣದಿಂದ ಮಿನುಗುತ್ತಿದೆ.

ತಜ್ಞರ ಸಮ್ಮುಖದಲ್ಲಿ ಬಂಗಾರದ ಲೇಪನ ಮಾಡುವ ಕಾರ್ಯ ನಡೆದಿದೆ.  ಮೂರು ದಿನಗಳಲ್ಲಿ 19 ಕಾರ್ಮಿಕರು ಕೆಲಸ ನಿರ್ವಹಿಸಿದ್ದಾರೆ. ಗೋಡೆಗೆ ಚಿನ್ನದ ಹಾಳೆಗಳನ್ನು ಲೇಪಿಸಲು ಮುಂಬೈನ ವಜ್ರದ ವ್ಯಾಪಾರಿಯೊಬ್ಬರು 230 ಕೆಜಿ ಚಿನ್ನ ಅರ್ಪಿಸಿದ್ದಾರೆ. ಈ ಬಂಗಾರದ ಹಾಳೆಗಳಲ್ಲಿ ಶಿವ, ಹಾವು , ನಂದಿ, ಡಮರುಗ, ತ್ರಿಶೂಲದ ಚಿತ್ರಗಳನ್ನು ಕೆತ್ತನೆ ಮಾಡಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ಹೇಳಿದೆ. ದೇಗುಲದ ಗರ್ಭಗುಡಿಗೆ ಚಿನ್ನದ ಲೇಪನ ಮಾಡಲು ಉತ್ತರಾಖಂಡ ಸರ್ಕಾರ ಕೂಡ ಅನುಮತಿ ನೀಡಿದೆ ಎಂದು ದೇವಾಲಯದ ಆಡಳಿತ ಮಂಡಳಿ ಹೇಳಿದೆ.

ಚಿನ್ನದ ಲೇಪನಕ್ಕೂ ಮುನ್ನ ದೇವಸ್ಥಾನ ಸಮಿತಿ ಪದಾಧಿಕಾರಿಗಳ ಸಮ್ಮುಖದಲ್ಲಿ ಬೆಳ್ಳಿಯ ಪದರಗಳನ್ನು ತೆಗೆಯಲಾಯಿತು. ಈ ಬೆಳ್ಳಿಯ ಒಡವೆಗಳನ್ನು ದೇವಸ್ಥಾನದವತಿಯಿಂದ ಸುರಕ್ಷಿತವಾಗಿ ಇಡಲಾಗಿದೆ. ಈ ಚಿನ್ನದ ಹಾಳೆಗಳನ್ನು ಒಂದು ವಾರದ ಹಿಂದೆ ದೆಹಲಿಯಿಂದ ವಿಶೇಷ ವಾಹನದಲ್ಲಿ ತರಲಾಗಿತ್ತು.  ಚಳಿಗಾಲದ ಕಾರಣಕ್ಕಾಗಿ ಅಕ್ಟೋಬರ್ 26ರಿಂದಲೇ ಕೇದಾರನಾಥ ದೇವಾಲಯವನ್ನ ಮುಚ್ಚಲಾಗಿದೆ.

suddiyaana