ಕೇದಾರನಾಥ ಧಾಮದ ಮೆರುಗು ಹೆಚ್ಚಿಸಲಿದೆ 60 ಕ್ವಿಂಟಾಲ್ ತೂಕದ ‘ಓಂ’ ಆಕೃತಿ!
ನವದೆಹಲಿ: ಉತ್ತರಾಖಂಡದ ಬಾಬಾ ಕೇದಾರನಾಥ ಧಾಮ ಭಕ್ತರ ಹಾಗೂ ಪ್ರವಾಸಿಗರ ಮೆಚ್ಚಿನ ತಾಣ. ಈ ದೇಗುಲಕ್ಕೆ ಲಕ್ಷಾಂತರ ಮಂದಿ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಾರೆ. ಇದೀಗ ಕೇದಾರನಾಥ ಧಾಮದ ವೈಭವವನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ಧಾಮದ ಗೋಲ್ ಪ್ಲಾಜಾದಲ್ಲಿ ‘ಓಂ’ ಆಕಾರವನ್ನು ಸ್ಥಾಪನೆ ಮಾಡಲಾಗುತ್ತದೆ.
‘ಓಂ’ ಆಕೃತಿಯನ್ನು ಕಂಚಿನಿಂದ ಮಾಡಲಾಗಿದೆ. ಈ ಆಕೃತಿ ಸುಮಾರು 60 ಕ್ವಿಂಟಾಲ್ ತೂಕವಿದೆ. ಧಾಮ್ನಲ್ಲಿ ಈ ಆಕೃತಿಯನ್ನು ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಪ್ರಯೋಗವನ್ನು ಯಶಸ್ವಿಯಾಗಿ ಕೈಗೊಂಡಿದೆ. ಅಗತ್ಯ ಕೆಲಸ ಮುಗಿದ ತಕ್ಷಣ ಈ ಓಂ ಅನ್ನು ಶಾಶ್ವತವಾಗಿ ಇಲ್ಲಿ ಸ್ಥಾಪನೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕೇದಾರನಾಥ ಧಾಮಕ್ಕೆ ಹೆಲಿಕಾಪ್ಟರ್ ಆನ್ಲೈನ್ ಬುಕ್ಕಿಂಗ್ ಸೌಲಭ್ಯ
ಕೇದಾರನಾಥ ಧಾಮದಲ್ಲಿ ಸ್ಥಾಪಿಸಲಾದ ಈ 60 ಕ್ವಿಂಟಾಲ್ ಓಂ ಆಕೃತಿಯನ್ನು ಗುಜರಾತ್ನ ಕಲಾವಿದರು ಕಂಚಿನಿಂದ ತಯಾರಿಸಿದ್ದಾರೆ. ಇದನ್ನು ಈ ಧಾಮದಲ್ಲಿ ಶಾಶ್ವತವಾಗಿ ಸ್ಥಾಪಿಸಲು ತಾಮ್ರದಿಂದ ಬೆಸುಗೆ ಹಾಕಲಾಗುತ್ತದೆ. ಇದರಿಂದ ಧಾಮ್ನಲ್ಲಿ ಯಾವುದೇ ಅನಾಹುತಗಳಾದರೂ ಇದರ ಮೇಲೆ ಪರಿಣಾಮ ಬೀರೋದಿಲ್ಲ. ಮೊದಲ ಹಂತದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಪಿಡಬ್ಲ್ಯುಡಿ ಹೈಡ್ರಾ ಯಂತ್ರದ ಸಹಾಯದಿಂದ ಗೋಲ್ ಪ್ಲಾಜಾದಲ್ಲಿ ಓಂ ಆಕೃತಿಯನ್ನು ಅಳವಡಿಸುವ ಪ್ರಯೋಗ ನಡೆಸಿದ್ದು, ಸಂಪೂರ್ಣ ಯಶಸ್ವಿಯಾಗಿದ್ದು, ಮುಂದಿನ ವಾರ ಆಕೃತಿ ಜೋಡಣೆ ಮಾಡಲು ನಿರ್ಧರಿಸಲಾಗಿದೆ.
ಓಂನ ಆಕೃತಿಯನ್ನು ಸ್ಥಾಪಿಸುತ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ. ಈ ಫೋಟೋಗಳಲ್ಲಿ ಹಗ್ಗಗಳು ಮತ್ತು ಜೆಸಿಬಿ ಸಹಾಯದಿಂದ ಓಂ ಅನ್ನು ಸ್ಥಾಪಿಸಲು ಪ್ರಯತ್ನಿಸಲಾಗುತ್ತಿದೆ. ಈ ಕೆಲಸದಲ್ಲಿ ಸಾಕಷ್ಟು ಮಂದಿ ಕೂಡ ತೊಡಗಿಸಿಕೊಂಡಿದ್ದಾರೆ. ಓಂ ಅಳವಡಿಕೆಯ ನಂತರ ದೀಪಾಲಂಕಾರವೂ ನಡೆಯಲಿದ್ದು, ರಾತ್ರಿ ವೇಳೆಯಲ್ಲಿ ಇನ್ನಷ್ಟು ಅದ್ಧೂರಿಯಾಗಿ ಕಾಣುತ್ತದೆ ಎಂದು ಹೇಳಲಾಗುತ್ತಿದೆ.
बाबा केदार के धाम में स्थापित होने के लिए 60 क्विंटल वजनी कांस्य का भव्य ऊं 🚩🚩🚩
जय हो बाबा केदार 🙏#OM #kedarnathdham #kedarnathtemple #kedarnath #KedarnathYatra2023 #kedarnathyatra #omnamahshivaya #lordshiva #lordshivatemple #shivji pic.twitter.com/ka2P9nUAM0— Jai Bhagwan Goyal (@JaiBhagwanGoyal) May 18, 2023
ಓಂನ ಆಕಾರವನ್ನು ಸಂಪೂರ್ಣವಾಗಿ ಭದ್ರಪಡಿಸಲು ನಾಲ್ಕು ಕಡೆಯಿಂದ ತಾಮ್ರದಿಂದ ವೆಲ್ಡಿಂಗ್ ಮಾಡಲಾಗುತ್ತದೆ. ಇದರೊಂದಿಗೆ ಮಧ್ಯ ಭಾಗ ಹಾಗೂ ಅಂಚುಗಳನ್ನು ಭದ್ರಪಡಿಸಿ, ಹಿಮಪಾತ ಅಥವಾ ಯಾವುದೇ ಅನಾಹುತದ ಸಮಯದಲ್ಲಿ ಹಾನಿಯಾಗದಂತೆ, ಒಂದು ವಾರದಲ್ಲಿ ಓಂನ ಆಕಾರವನ್ನು ಸಂಪೂರ್ಣವಾಗಿ ಅಳವಡಿಸಲಾಗುವುದು ಎಂದು ಇಇ ವಿನಯ್ ಜಿಕ್ವಾನ್ ಹೇಳಿದ್ದಾರೆ.
ರುದ್ರಪ್ರಯಾಗದ ಜಿಲ್ಲಾ ಮ್ಯಾಜಿಸ್ಟ್ರೇಟ್ ಮಯೂರ್ ದೀಕ್ಷಿತ್ ಅವರು ಈ ಬಗ್ಗೆ ಮಾತನಾಡಿದ್ದು, ʼಓಂ ಅಕೃತಿ ಅಳವಡಿಕೆಯಿಂದ ಕೇದಾರನಾಥ ಗೋಲ್ ಪ್ಲಾಜಾದ ಹಿರಿಮೆ ಇನ್ನಷ್ಟು ಹೆಚ್ಚಲಿದೆ. ಓಂ ಆಕೃತಿಯನ್ನು ಅಳವಡಿಸಲು ಡಿಡಿಎಂಎ ಅಗತ್ಯ ಕ್ರಮವನ್ನು ಪೂರ್ಣಗೊಳಿಸುತ್ತಿದೆʼ ಎಂದು ಹೇಳಿದರು.