ವಿವಾದಕ್ಕೆ ಗುರಿಯಾಯ್ತು ಕೆಡಿ ಸಿನಿಮಾದ ಸಾಂಗ್! – ಸರ್ಸೆ ನಿನ್ನ ಸೆರಗ ಹಾಡಿನ ಸಾಹಿತ್ಯಕ್ಕೆ ಫ್ಯಾನ್ಸ್ ಗರಂ!

ಸ್ಯಾಂಡಲ್ವುಡ್ನ ನಿರ್ದೇಶಕ ಜೋಗಿ ಪ್ರೇಮ್ ಅವರ ಬಹುನಿರೀಕ್ಷಿತ ಕೆಡಿ ಸಿನಿಮಾದ ಸರ್ಸೆ ನಿನ್ನ ಸೆರಗ ಸರ್ಸೆ ಸಾಂಗ್ ರಿಲೀಸ್ ಆಗಿದ್ದು, ಮಿಲಿಯನ್ಗಟ್ಟಲೆ ವೀವ್ಸ್ ಪಡೆದುಕೊಂಡಿದೆ. ಆದ್ರೀಗ ಈ ಹಾಡು ವಿವಾದಕ್ಕೆ ಗುರಿಯಾಗಿದೆ. ಅಶ್ಲೀಲ ಸಾಹಿತ್ಯ ಮತ್ತು ಡಬಲ್ ಮೀನಿಂಗ್ ಪದಬಳಕೆಯ ವಿರುದ್ಧ ಕನ್ನಡಿಗರು ಕಿಡಿಕಾರುತ್ತಿದ್ದು, ನಿರ್ದೇಶಕ ಪ್ರೇಮ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಮಹೇಶ್ ಶೆಟ್ಟಿ ತಿಮರೋಡಿಗೆ ಶಾಕ್! – ಮೂರನೇ ಬಾರಿ ಗಡಿಪಾರಿಗೆ ನೋಟಿಸ್ ಜಾರಿ!
ಜೋಗಿ ಪ್ರೇಮ್ ನಿರ್ದೇಶನ ‘ಕೆಡಿ ದಿ ಡೆವಿಲ್’ ಬಿಡುಗಡೆಗೆ ರೆಡಿಯಾಗುತ್ತಿದೆ. ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡಿರುವ ಈ ಸಿನಿಮಾ ಏಪ್ರಿಲ್ 30ಕ್ಕೆ ರಿಲೀಸ್ ಆಗುತ್ತಿದೆ. ಧ್ರುವ ಸರ್ಜಾ ಹಾಗೂ ರೀಷ್ಮಾ ನಾಣಯ್ಯ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಬಾಲಿವುಡ್ ಬ್ಯೂಟಿ ನೋರಾ ಫತೇಹಿ ಮತ್ತು ಧ್ರುವ ಸರ್ಜಾ ಕಾಂಬಿನೇಷನ್ನ ಈ ಹಾಡು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿದ್ದು, ಕೆಲವೇ ಗಂಟೆಗಳಲ್ಲಿ ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದಿದೆ. ಆದ್ರೀಗ ಈ ಹಾಡಿನ ಸಾಹಿತ್ಯಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಈ ಹಾಡಿಗೆ ಕನ್ನಡದಲ್ಲಿ ಸ್ವತಃ ನಿರ್ದೇಶಕ ಪ್ರೇಮ್ ಅವರು ಸಾಹಿತ್ಯ ಬರೆದಿದ್ದಾರೆ. ಐಶ್ವರ್ಯಾ ರಂಗರಾಜನ್ ಅವರು ಹಾಡಿದ್ದಾರೆ. ಹಿಂದಿ ವರ್ಷನ್ಗೆ ರಖೀಬ್ ಆಲಂ ಅವರು ಸಾಹಿತ್ಯ ಬರೆದಿದ್ದು, ಮಂಗ್ಲಿ ಧ್ವನಿ ನೀಡಿದ್ದಾರೆ. ಹಾಡುಗಳನ್ನು ತೀರಾ ಕಮರ್ಷಿಯಲ್ ಮಾಡುವುದಕ್ಕೆ ಹೋಗಿ ಜನರ ಆಕ್ರೋಶವನ್ನು ಎದುರಿಸಬೇಕಾಗಿದೆ.
ಸಿನಿಮಾದ ಸಾಹಿತ್ಯ ಹಾಗೂ ನಟಿ ನೂರಾ ಫತೇಹಿಯ ಕಾಸ್ಟ್ಯೂಮ್ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ‘ಕೆಡಿ ದಿ ಡೆವಿಲ್’ ಸಿನಿಮಾದಿಂದ ನಮ್ಮ ಚಿತ್ರರಂಗಕ್ಕೆ ನೀವೇನು ಮಾಡುತ್ತಿದ್ದೀರಾ? ದಯವಿಟ್ಟು ನೀವು ನಿವೃತ್ತಿ ತೆಗೆದುಕೊಂಡು ಚಿತ್ರರಂಗವನ್ನು ಕಾಪಾಡಿ ಎಂದು ಎಂದು ಬರೆದುಕೊಂಡಿದ್ದಾರೆ ನೆಟ್ಟಿಗರು.
ಇಷ್ಟು ಕಳಪೆ ಸಾಹಿತ್ಯದ ಹಾಡು ನಿರ್ದೇಶಕ ಪ್ರೇಮ್ ಅವರ ಸಿನಿಮಾದಲ್ಲಿ ಇರುತ್ತದೆ ಅಂದುಕೊಂಡಿರಲಿಲ್ಲ. ಬೇಡುವನು ವರವನ್ನು ಕೊಡೆ ತಾಯಿ ಜನ್ಮವನು ಎಂಬಂತಹ ಉತ್ತಮ ಹಾಡು ಬರೆದ ಪ್ರೇಮ್ ಅವರಿಂದ ಇಷ್ಟು ಕಳಪೆ ಮಟ್ಟದ ಸಾಹಿತ್ಯ ಬಂದಿರುವುದು ಇದೇ ಮೊದಲು. ಪ್ರೇಮ್ ಅವರೇ, ನಿಮ್ಮ ಮೇಲೆ ಗೌರವ ಇದೆ. ಆದರೆ ಕನ್ನಡಕ್ಕೆ ಇಂಥ ಹಾಡು ಬೇಡ ಎಂದು ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ.
ಹಿಂದಿಯಲ್ಲಿ ಹಾಡು ಕೇಳಿದ ಪ್ರೇಕ್ಷಕರು ಕೂಡ ಗರಂ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹಲವರು ಈ ಹಾಡಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖ್ಯಾತ ಗಾಯಕ ಅರ್ಮಾನ್ ಮಲಿಕ್ ಕೂಡ ಅಸಮಾಧಾನ ಹೊರಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ನೇರವಾಗಿ ಟೀಕೆ ಮಾಡಿದ್ದಾರೆ.

ನೋಡಿರಿ

