KD ಚಿತ್ರ ತಂಡಕ್ಕೆ ಕಾನೂನು ಸಂಕಷ್ಟ! – ನಿರ್ದೇಶಕ ಪ್ರೇಮ್ ಸೇರಿ ಹಲವರಿಗೆ ಮಹಿಳಾ ಆಯೋಗ ನೋಟಿಸ್

KD ಚಿತ್ರ ತಂಡಕ್ಕೆ ಕಾನೂನು ಸಂಕಷ್ಟ! – ನಿರ್ದೇಶಕ ಪ್ರೇಮ್ ಸೇರಿ ಹಲವರಿಗೆ ಮಹಿಳಾ ಆಯೋಗ ನೋಟಿಸ್

ನಿರ್ದೇಶಕ ಜೋಗಿ ಪ್ರೇಮ್‌ ನಿರ್ದೇಶನದ, ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ʻಕೆಡಿ ದಿ ಡೆವಿಲ್‌ʼ ಸಿನಿಮಾದ ಐಟಂ ಸಾಂಗ್‌ ಈಗ ದೊಡ್ಡ ವಿವಾದಕ್ಕೆ ಗುರಿಯಾಗಿದೆ. ಇದ್ರಿಂದಾಗಿ ಕೆಡಿ ಸಿನಿಮಾ ತಂಡಕ್ಕೆ ಕಾನೂನು ಸಂಕಷ್ಟ ಶುರುವಾಗಿದೆ. ಇದೀಗ ಚಿತ್ರದ ಸರ್ಸೆ ಸೆರಗ ಸರ್ಸೆ ಹಾಡಿನಲ್ಲಿಅಶ್ಲೀಲ ಸಾಹಿತ್ಯ ಬಳಸಿದ ಹಿನ್ನೆಲೆಯಲ್ಲಿ ನಿರ್ದೇಶಕ ಪ್ರೇಮ್, ನಟಿ ನೋರಾ ಫತೇಹಿ ಸೇರಿದಂತೆ ಹಲವರಿಗೆ ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸ್‌ ಜಾರಿ ಮಾಡಿದೆ.

ಇದನ್ನೂ ಓದಿ: ಅಭಿಮಾನಿಗಳ ಮನಗೆದ್ದ ಅಪ್ಪ ಮಗಳ ಭಾವನಾತ್ಮಕ ಬಂಧ – ಲವ್ ಮಾಕ್ಟೇಲ್- 3 ಸಿನಿಮಾ ಹೇಗಿದೆ ಗೊತ್ತಾ?

ಕೆಡಿ ಸಿನಿಮಾದ ಸರ್ಸೆ ನಿನ್ನ ಸೆರಗ ಸರ್ಸೆ ಹಾಡು ಭಾರಿ ವಿವಾದಕ್ಕೆ ಕಾರಣವಾಗಿದ್ದು, ಈ ಹಾಡಿನಲ್ಲಿ ಅಶ್ಲೀಲ ಸಾಹಿತ್ಯ ಇದೆ ಎಂಬ ಕಾರಣಕ್ಕೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಉತ್ತರ ಭಾರತದಲ್ಲಿ ಈ ಚಿತ್ರದ ಹಿಂದಿ ಅವತರಣಿಕೆಯ ಹಾಡಿಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಹಿಂದಿ ಆವೃತ್ತಿಯ ಹಾಡನ್ನು ಕೇಂದ್ರ ಸರ್ಕಾರ ಬ್ಯಾನ್‌ ಮಾಡಿದೆ. ಇದೀಗ ರಾಷ್ಟ್ರೀಯ ಮಹಿಳಾ ಆಯೋಗ ನಿರ್ದೇಶಕ ಪ್ರೇಮ್, ನಿರ್ಮಾಪಕ ವೆಂಕಟ್ ನಾರಾಯಣ್, ನಟಿ ನೋರಾ ಫತೇಹಿ, ನಟ ಸಂಜಯ್ ದತ್, ಹಿಂದಿ ಹಾಡಿನ ಬರಹಾರ ರಕೀಬ್ ಆಲ್ಬಂಗೆ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಿದೆ. ಮಾ.24 ರಂದು ಮಧ್ಯಾಹ್ನ 12:30ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ಮಾಧ್ಯಮಗಳ ವರದಿ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಿದ ರಾಷ್ಟ್ರೀಯ ಮಹಿಳಾ ಆಯೋಗ, 1990ರ ಎನ್‌ಸಿಡಬ್ಲ್ಯೂ ಕಾಯ್ದೆಯ ಅಡಿಯಲ್ಲಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲು ಮಾಡಿದೆ. ಪ್ರಾಥಮಿಕ ಲೈಂಗಿಕವಾಗಿ ಸೂಚಿಸುವ, ಆಕ್ಷೇಪಾರ್ಹ ಮತ್ತು ಭಾರತೀಯ ನ್ಯಾಯ ಸಂಹಿತಾ, ಐಟಿ ಕಾಯ್ದೆ ಮತ್ತು ಪೋಕ್ಸೊ ಕಾಯ್ದೆಯಡಿಯಲ್ಲಿರುವ ನಿಬಂಧನೆಗಳನ್ನು ಸಿನಿಮಾ ಟೀಂ ಉಲ್ಲಂಘಿಸಿದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಿದೆ.  ಸಂಬಂಧಿತ ದಾಖಲಾಗಳೊಂದಿಗೆ ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಹಾಜರಾಗಲು ವಿಫಲವಾದರೆ ಕಾನೂನಿನ ಪ್ರಕಾರ ಸೂಕ್ತ ಕ್ರಮ ತಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

Shwetha M