ಕಾವೇರಿ ನೀರು ಹಂಚಿಕೆ ವಿವಾದ – ಅರ್ಜಿ ವಿಚಾರಣೆ ಸೆ. 1 ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್‌

ಕಾವೇರಿ ನೀರು ಹಂಚಿಕೆ ವಿವಾದ – ಅರ್ಜಿ ವಿಚಾರಣೆ ಸೆ. 1 ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್‌

ನವದೆಹಲಿ: ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರಗಳ ನಡುವೆ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ವಿವಾದ ಭುಗಿಲೆದ್ದಿದೆ. ಈ ವಿಚಾರ ಈಗ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಪ್ರತಿದಿನ 24 ಸಾವಿರ ಕ್ಯೂಸೆಕ್ ಕಾವೇರಿ ನೀರನ್ನು ಬಿಡುಗಡೆ ಮಾಡುವಂತೆ ಕರ್ನಾಟಕ ಸರ್ಕಾರಕ್ಕೆ ಆದೇಶಿಸಬೇಕೆಂದು ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ಸೆ.1 ಕ್ಕೆ ಸುಪ್ರೀಂ ಕೋರ್ಟ್‌ ಮುಂದೂಡಿದೆ.

ಸೋಮವಾರ ಪ್ರಾಧಿಕಾರದ ಸಭೆಯನ್ನು ನಿಗದಿಪಡಿಸಲಾಗಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ತಿಳಿಸಿದ ನಂತರ ನ್ಯಾಯಮೂರ್ತಿ ಬಿ.ಆರ್ ಗವಾಯಿ ನೇತೃತ್ವದ ತ್ರಿಸದಸ್ಯ ಪೀಠವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಿಂದ (ಸಿಡಬ್ಲ್ಯುಎಂಎ) ಕರ್ನಾಟಕ ಬಿಡುಗಡೆ ಮಾಡಿದ ನೀರಿನ ಪ್ರಮಾಣದ ಬಗ್ಗೆ ವರದಿ ಕೇಳಿದೆ.

ಇದನ್ನೂ ಓದಿ: ಅಗ್ಗದ ರಾಜಕೀಯಕ್ಕಾಗಿ ರಾಷ್ಟ್ರ ಪ್ರಶಸ್ತಿಗಳ ಘನತೆಗೆ ಚ್ಯುತಿ ತರಬಾರದು – ʼದಿ ಕಾಶ್ಮೀರ್ ಫೈಲ್ಸ್’ ಆಯ್ಕೆಗೆ ಸ್ಟಾಲಿನ್ ಕಿಡಿ!

‘ನಾವು ಈ ವಿಚಾರದಲ್ಲಿ ಪರಿಣತಿಯನ್ನು ಹೊಂದಿಲ್ಲ, ಮುಂದಿನ ಹದಿನೈದು ದಿನಗಳ ಕಾಲ ನೀರು ಹರಿಸುವುದನ್ನು ನಿರ್ಧರಿಸಲು ಸೋಮವಾರ ಪ್ರಾಧಿಕಾರ ಸಭೆ ನಡೆಸುತ್ತಿದೆ’ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಸ್ಪಷ್ಟಪಡಿಸಿದ್ದಾರೆ.

“ನೀರು ಬಿಡಲು ನೀಡಿರುವ ನಿರ್ದೇಶನಗಳನ್ನು ಪಾಲಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಪ್ರಾಧಿಕಾರ ತನ್ನ ವರದಿಯನ್ನು ಸಲ್ಲಿಸುವುದು ಸೂಕ್ತ’ ಎಂದು ನ್ಯಾಯಮೂರ್ತಿಗಳಾದ ಪಿ.ಎಸ್‌.ನರಸಿಂಹ ಮತ್ತು ಪಿ.ಕೆ.ಮಿಶ್ರಾ ಅವರನ್ನೊಳಗೊಂಡ ಪೀಠ ಹೇಳಿದೆ.

‘ಈ ವರ್ಷ ನೀರಿಗೆ ಸಂಕಷ್ಟವಿಲ್ಲ. ಹಾಗಾಗಿ ಪ್ರತಿದಿನ 24 ಸಾವಿರ ಕ್ಯೂಸೆಕ್‌ ಕಾವೇರಿ ನೀರನ್ನು ಬಿಡುಗಡೆ ಮಾಡಬೇಕು” ಎಂದು ತಮಿಳುನಾಡು ಸರ್ಕಾರ ಕೇಳುತ್ತಿರುವುದು ಸರಿಯಲ್ಲ. ಎಂದು ಕರ್ನಾಟಕ ಸರ್ಕಾರ ಹೇಳಿದೆ.

suddiyaana