ಕಾವೇರಿ ಕಿಚ್ಚು: ನಾಳೆ ಚಿತ್ರೋದ್ಯಮದ ಎಲ್ಲಾ ಚಟುವಟಿಕೆಗಳು ಬಂದ್ – ಇಂದು ಮಧ್ಯರಾತ್ರಿಯಿಂದಲೇ ಬೆಂಗಳೂರಲ್ಲಿ 144 ಸೆಕ್ಷನ್ ಜಾರಿ!
ಬೆಂಗಳೂರು: ರಾಜ್ಯದಲ್ಲಿ ಕಾವೇರಿ ಕಿಚ್ಚು ಜೋರಾಗಿದೆ. ಕಾವೇರಿ ನದಿ ನೀರನ್ನು ತಮಿಳು ನಾಡಿಗೆ ಹರಿಸುವುದನ್ನು ವಿರೋಧಿಸಿ ಶುಕ್ರವಾರ ನಡೆಯುತ್ತಿರುವ ಅಖಂಡ ಕರ್ನಾಟಕ ಬಂದ್ ಗೆ ನೂರಾರು ಸಂಘಟನೆಗಳು ಬೆಂಬಲ ಸೂಚಿಸಿವೆ. ಕರ್ನಾಟಕ ಬಂದ್ ಕರೆ ಬೆನ್ನಲ್ಲೇ ಗುರುವಾರ ಮಧ್ಯರಾತ್ರಿಯಿಂದಲೇ ಬೆಂಗಳೂರಿನಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್, ಗುರುವಾರ ಮಧ್ಯರಾತ್ರಿ 12 ಗಂಟೆಯಿಂದ ಶುಕ್ರವಾರ ಮಧ್ಯರಾತ್ರಿ 12 ಗಂಟೆಯವರೆಗೆ 144 ಸೆಕ್ಷನ್ ಜಾರಿ ಮಾಡಲಾಗುತ್ತದೆ. 144 ಸೆಕ್ಷನ್ ಜಾರಿ ವೇಳೆ ಐದಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ, ಗುಂಪು ಸೇರುವಂತೆ ಇಲ್ಲ. ಬಂದ್‌ಗಳನ್ನು ಕರೆಯುವುದು ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಬಂದ್ ವೇಳೆ ಆಸ್ತಿ ಪಾಸ್ತಿ ನಾಶ ಮತ್ತು ಸಾವು ನೋವಿಗೆ ಸಂಘಟಕರೇ ಹೊಣೆಯಾಗುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ವಾಹನಗಳನ್ನು ತಡೆಯುವುದು, ಡ್ಯಾಮೇಜ್ ಮಾಡುವುದು, ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುವುದು ಮಾಡಿದರೆ ಕ್ರಮ ಕೈಗೊಳ್ಳಲಾಗುವುದು. ಬೆಂಗಳೂರು ನಗರದಲ್ಲಿ ವ್ಯಾಪಕ ರಕ್ಷಣಾ ಕ್ರಮ ಜರುಗಿಸಲಾಗುತ್ತದೆ. ಪ್ರತಿಭಟನೆ, ಮೆರವಣಿಗೆಗೆ ಯಾವುದೇ ಅವಕಾಶವಿಲ್ಲ. ಬಲವಂತವಾಗಿ ಬಂದ್ ಮಾಡಿದರೆ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ನ ಆದೇಶ ಉಲ್ಲಂಘನೆಯಾಗುತ್ತದೆ. ಈ ಹಿನ್ನೆಲೆ ಇಂದು ಮಧ್ಯರಾತ್ರಿಯಿಂದ ನಾಳೆ ಮಧ್ಯರಾತ್ರಿಯವರೆಗೆ ಬಂದೋಬಸ್ತ್ ಇರುತ್ತದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ಬಂದ್‌ಗೆ ಕನ್ನಡ ಚಿತ್ರರಂಗ ಬೆಂಬಲ
ಕಾವೇರಿ ಹೋರಾಟಕ್ಕೆ ಕನ್ನಡ ಚಿತ್ರರಂಗ ಕೂಡ ಬೆಂಬಲ ಸೂಚಿಸಿದೆ. ಶುಕ್ರವಾರದ ಹೋರಾಟದ ಮುಂದಾಳತ್ವ ನಟ ಶಿವರಾಜ್ ಕುಮಾರ್ ವಹಿಸಿಕೊಂಡಿದ್ದಾರೆ. ಹೀಗಾಗಿ ಶಿವರಾಜ್ ಕುಮಾರ್ ನೇತೃತ್ವದಲ್ಲಿ ನಾಳೆ ಗುರುರಾಜ್ ಕಲ್ಯಾಣ ಮಂಟಪದ ಬಳಿ ಚಿತ್ರೋದ್ಯಮ ಹೋರಾಟಕ್ಕೆ ಇಳಿಯಲಿದೆ. ಈ ಹಿನ್ನೆಲೆಯಲ್ಲಿ ಸೆ.29ರಂದು ಕರ್ನಾಟಕ ಬಂದ್ ಕರೆ ನೀಡಿದ್ದು, ಸೀರಿಯಲ್, ಸಿನಿಮಾ ಚಿತ್ರೀಕರಣ, ಚಿತ್ರ ಪ್ರದರ್ಶನ ಸೇರಿದಂತೆ ಎಲ್ಲಾ ಚಟುವಟಿಕೆಗಳು ಬಂದ್ ಮೂಲಕ ಚಿತ್ರೋದ್ಯಮ ಸಾಥ್ ನೀಡುತ್ತಿದೆ.
ನಾಳೆಯ ಪ್ರತಿಭಟನೆಯಲ್ಲಿ ಶಿವಣ್ಣ, ಉಪೇಂದ್ರ, ರಾಘಣ್ಣ, ನೆನಪಿರಲಿ ಪ್ರೇಮ್, ಅಜಯ್ ರಾವ್, ಪ್ರಜ್ವಲ್ ದೇವರಾಜ್, ರಂಗಾಯಣ ರಘು, ಸಾಧು ಕೋಕಿಲಾ ಸೇರಿದಂತೆ ಕಿರುತೆರೆ ನಟ- ನಟಿಯರು ಭಾಗಿಯಾಗುವ ಸಾಧ್ಯತೆ ಇದೆ. ಫಿಲ್ಮ್ ಚೇಂಬರ್ ಅಂಗ ಸಂಸ್ಥೆಗಳಾದ, ನಿರ್ಮಾಪಕರ ಸಂಘ, ಕಲಾವಿದರ ಸಂಘ, ನಿರ್ದೇಶಕರ ಸಂಘದಿಂದ, ಒಕ್ಕೂಟದಿಂದಲೂ ಕರ್ನಾಟಕ ಬೆಂಬಲಿಸಲಿದ್ದಾರೆ.
ಕೆಎಸ್ ಆರ್ ಟಿಸಿ, ಬಿಎಂಟಿಸಿ ಬಸ್ಸು ನಾಳೆ ಎಂದಿನಂತೆ ಸಂಚಾರ
ಶುಕ್ರವಾರ ನಡೆಯುತ್ತಿರುವ ಅಖಂಡ ಕರ್ನಾಟಕ ಬಂದ್ ಗೆ ನೂರಾರು ಸಂಘಟನೆಗಳು ಬೆಂಬಲ ಸೂಚಿಸಿವೆ. ಆದರೆ ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ಬಸ್ಸುಗಳು ಎಂದಿನಂತೆ ನಾಳೆಯೂ ಸಂಚರಿಸಲಿವೆ. ನಿಗಮದ ನೌಕರರನ್ನು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ದೀರ್ಘಾವಧಿ, ವಾರದ ರಜೆ ಹೊರತುಪಡಿಸಿ ನೌಕರರು ಹೊರತುಪಡಿಸಿ ಉಳಿದ ಎಲ್ಲಾ ನೌಕರರು ಕಡ್ಡಾಯವಾಗಿ ನಾಳೆ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ನೌಕರರಿಗೆ ಸಾರಿಗೆ ನಿಗಮಗಳು ಮೌಖಿಕ ಸೂಚನೆ ನೀಡಿವೆ. ಸಾರಿಗೆ ಸಿಬ್ಬಂದಿ ನಾಳೆಯ ಬಂದ್ ನಲ್ಲಿ ಭಾಗಿಯಾಗುವಂತಿಲ್ಲ. ಒಂದು ವೇಳೆ ಕೆಲಸಕ್ಕೆ ಗೈರು ಆಗಿ ಬಂದ್ ನಲ್ಲಿ ಭಾಗಿಯಾದರೆ ಅಂತವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.