ದಳಪತಿ ವಿಜಯ್‌ಗೆ ಕಾನೂನು ಸಂಕಷ್ಟ! – ಕರೂರು ಕಾಲ್ತುಳಿತ ಕೇಸ್‌ ಸಂಬಂಧ ವಿಚಾರಣೆಗೆ ಹಾಜರಾಗುವಂತೆ CBI ಸಮನ್ಸ್‌

ದಳಪತಿ ವಿಜಯ್‌ಗೆ ಕಾನೂನು ಸಂಕಷ್ಟ! – ಕರೂರು ಕಾಲ್ತುಳಿತ ಕೇಸ್‌ ಸಂಬಂಧ ವಿಚಾರಣೆಗೆ ಹಾಜರಾಗುವಂತೆ CBI ಸಮನ್ಸ್‌

ತಮಿಳು ನಟ, ರಾಜಕಾರಣಿ ದಳಪತಿ ವಿಜಯ್‌ಗೆ ಕಾನೂನು ಸಂಕಷ್ಟ ಎದುರಾಗಿದೆ. ತಮಿಳುನಾಡಿನ ಕರೂರಿನಲ್ಲಿ  ನಡೆದ ರ್ಯಾಲಿ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ  ವಿಜಯ್‌ಗೆ ಸಿಬಿಐ ನೋಟಿಸ್‌ ಜಾರಿ ಮಾಡಿದೆ.

ಇದನ್ನೂ ಓದಿ: ಅವಧಿ ಪೂರ್ಣಗೊಳ್ಳುವವರೆಗೂ ನಾನೇ ಸಿಎಂ! -ದಾಖಲೆಗಳನ್ನು ಮುರಿಯಲೆಂದು ರಾಜಕೀಯ ಮಾಡಿಲ್ಲ ಎಂದ ಸಿದ್ದರಾಮಯ್ಯ!

ಕಳೆದ ವರ್ಷ ಸೆ.27 ರಂದು ಕರೂರಿನ ವೇಲುಸಾಮಿಪುರಂನಲ್ಲಿ ನಡೆದ ಸಾರ್ವಜನಿಕ ರ‍್ಯಾಲಿಯಲ್ಲಿ ವಿಜಯ್‌ ಅವರನ್ನು ನೋಡಲು ಲಕ್ಷಾಂತರ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಅಗಾಧವಾದ ಜನಸಂದಣಿಯು ಅವ್ಯವಸ್ಥೆಗೆ ಕಾರಣವಾಯಿತು. ಪರಿಣಾಮವಾಗಿ ಕಾಲ್ತುಳಿತ ದುರಂತ ಸಂಭವಿಸಿತು. ಸೆಪ್ಟೆಂಬರ್‌ನಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 41 ಜನರು ಸಾವಿಗೀಡಾಗಿದ್ದರು. ಹಲವರು ಗಾಯಗೊಂಡಿದ್ದರು. ಈ ದುರಂತ ರಾಜಕೀಯ ಕೋಲಾಹಲಕ್ಕೆ ಕಾರಣವಾಯಿತು. ತಮಿಳುನಾಡು ಪೊಲೀಸರು ಕೈಗೆತ್ತಿಕೊಂಡಿದ್ದ ಪ್ರಕರಣದ ತನಿಖೆಯನ್ನು ಸುಪ್ರೀಂ ಕೋರ್ಟ್‌ ಸಿಬಿಐಗೆ ಹಸ್ತಾಂತರಿಸಿತ್ತು. ಚೆನ್ನೈನಲ್ಲಿರುವ ಟಿವಿಕೆ ಕೇಂದ್ರ ಕಚೇರಿಗೂ ಸಿಬಿಐ ಅಧಿಕಾರಿಗಳು ಇತ್ತೀಚೆಗೆ ಭೇಟಿ ನೀಡಿ ಕೆಲವು ದಾಖಲೆಗಳು ಮತ್ತು ರ್ಯಾಲಿ ದಿನ ಸಂಚರಿಸಿದ ಬಸ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು. ಇದೀಗ ಈ ಪ್ರಕರಣದ ತನಿಖೆಯ ಭಾಗವಾಗಿ ವಿಚಾರಣೆಗಾಗಿ ಹಾಜರಾಗುವಂತೆ ವಿಜಯ್‌ಗೆ ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಮತ್ತೊಂದ್ಕಡೆ ದಳಪತಿ ವಿಜಯ್‌ ಚಿತ್ರರಂಗ ತೊರೆಯುತ್ತಿರುವುದಾಗಿ ಈಗಾಗಲೇ  ಘೋಷಿಸಿದ್ದು, ಸದ್ಯ ಅವರ ಕೊನೆಯ ಸಿನಿಮಾ ಜನ ನಾಯಗನ್‌ ತೆರೆಗೆ ಬರಲು ಸಜ್ಜಾಗಿದೆ. ಜನವರಿ 9ರಂದು ಈ ಸಿನಿಮಾ ಬಿಡುಗಡೆಯಾಗಲಿದ್ದು, ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಅಭಿಮಾನಿಗಳು ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ಸಜ್ಜಾಗಿದ್ದು, ಮೂಲಕ ತಮ್ಮ ನೆಚ್ಚಿನ ನಾಯಕನ ಕೊನೆ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಗೆಲ್ಲಿಸಲು ಮುಂದಾಗಿದ್ದಾರೆ. ಎಚ್‌. ವಿನೋತ್‌ ನಿರ್ದೇಶನದ ಈ ಚಿತ್ರದಲ್ಲಿ ನಾಯಕಿಯಾಗಿ ಕನ್ನಡತಿ ಪೂಜಾ ಹೆಗ್ಡೆ ನಟಿಸಿದ್ದಾರೆ.

Shwetha M