ವ್ಯಕ್ತಿತ್ವದಲ್ಲೇ ಗೆದ್ದ ಕಾರ್ತಿಕ್ – ಎರಡು ವಾರ ಡಲ್ ಆದರೂ ವಿನ್ನರ್ ಪಟ್ಟ ಸಿಕ್ಕಿದ್ದು ಹೇಗೆ?

ವ್ಯಕ್ತಿತ್ವದಲ್ಲೇ ಗೆದ್ದ ಕಾರ್ತಿಕ್ – ಎರಡು ವಾರ ಡಲ್ ಆದರೂ ವಿನ್ನರ್ ಪಟ್ಟ ಸಿಕ್ಕಿದ್ದು ಹೇಗೆ?

ಸಕಲಕಲಾ ವಲ್ಲಭ, ತಪ್ಪಿದ್ದರೆ ನಯವಾಗಿಯೇ ತಿದ್ದಿಕೊಳ್ಳುವ ಜಾಣ, ಸ್ಟ್ರಾಂಗ್ ಸ್ಪರ್ಧಿ ಎಂದೇ ಗುರುತಿಸಿಕೊಂಡಿದ್ದ ಕಾರ್ತಿಕ್ ಮಹೇಶ್ ಬಿಗ್‌ಬಾಸ್ ಸೀಸನ್ 10 ಟ್ರೋಫಿಯನ್ನು ಗೆದ್ದು ಬೀಗಿದ್ದಾರೆ. ಅತ್ಯಧಿಕ ವೋಟ್ ಪಡೆದ ಕಾರ್ತಿಕ್ ಮಹೇಶ್ ಅಪಾರ ವೀಕ್ಷಕರ ಮನಸನ್ನು ಗೆದ್ದಿದ್ದಲ್ಲದೇ ಬಿಗ್ಬಾಸ್ ವಿನ್ನರ್ ಆಗಿದ್ದಾರೆ. ಕಿಚ್ಚ ಸುದೀಪ್ ಕಾರ್ತಿಕ್ ಅವರ ಕೈ ಎತ್ತಿ ಗೆಲುವಿನ ಕಿರೀಟ ತೊಡಿಸಿದ್ದಾರೆ. ಡ್ರೋನ್ ಪ್ರತಾಪ್ ರನ್ನರ್ ಅಪ್ ಆಗಿ ಮಿಂಚಿದ್ದಾರೆ. ಕರ್ನಾಟಕದ ಕ್ರಷ್ ಆಗಿರುವ ಸಂಗೀತಾ ಶೃಂಗೇರಿ ಎರಡನೇ ರನ್ನರ್ ಅಪ್ ಆಗಿದ್ದಾರೆ.

ಇದನ್ನೂ ಓದಿ: ಆನೆ ಹಿಂದಿಕ್ಕಿ ಸಂಗೀತಾಗೆ ಸೈಡ್‌ ಹೊಡೆದ ಕಾರ್ತಿಕ್‌! –‌ ಹಾರದ ಡ್ರೋನ್ ಪ್ರತಾಪ!

ಅಸಮರ್ಥರು ಎಂಬ ಹಣೆಪಟ್ಟಿಯೊಂದಿಗೆ ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟವರು ಕಾರ್ತಿಕ್ ಮಹೇಶ್. ಮೊದಲ ವಾರವೇ ತಾನು ಸಮರ್ಥ ಅಂತಾ ಟಾಸ್ಕ್ನಲ್ಲಿ ತೋರಿಸಿಕೊಟ್ಟರು. ಕಾರ್ತಿಕ್ ಫಿಸಿಕಲಿ ಸ್ಟ್ರಾಂಗ್ ಸ್ಪರ್ಧಿ ಎಂದೇ ಪ್ರತಿವಾರ ಕೂಡಾ ತೋರಿಸಿಕೊಳ್ಳುತ್ತಲೇ ಬಂದಿದ್ದರು. ಎಲ್ಲಾ ಟಾಸ್ಕ್ಗಳಲ್ಲೂ ಕಾರ್ತಿಕ್ ಮಹೇಶ್ ಉತ್ತಮ ಪ್ರದರ್ಶನ ಕೊಟ್ಟಿದ್ದಾರೆ. ಅನೇಕ ಬಾರಿ ವಿನಯ್ ಮೈಕಲ್‌ಗೆ ಕಾರ್ತಿಕ್ ಪ್ರಬಲ ಪೈಪೋಟಿ ನೀಡಿದ್ದಾರೆ. ಕಾರ್ತಿಕ್ ಸ್ಟ್ರಾಂಗ್ ಅನ್ನೋ ಕಾರಣಕ್ಕೆ ಕೆಲ ಟಾಸ್ಕ್‌ಗಳಲ್ಲಿ  ಅವಕಾಶ ವಂಚಿತರಾಗಿದ್ದೂ ಇದೆ.

ಇನ್ನು ಬಿಗ್‌ಬಾಸ್ ಮನೆಯಲ್ಲಿ ತನಿಷಾ ಬಿಟ್ಟರೆ ಸಹ ಸ್ಪರ್ಧಿಗಳಿಗೆ ಅಡುಗೆ ಮಾಡಿ ಬಡಿಸಿದವರು ಕಾರ್ತಿಕ್ ಮಹೇಶ್. ಅಡುಗೆ ಮಾಡೋದ್ರಿಂದ ಹಿಡಿದು ಬೇರೆ ಕೆಲಸಗಳಲ್ಲೂ ಕಾರ್ತಿಕ್ ಅವರದ್ದು ಎತ್ತಿದ ಕೈ. ದೊಡ್ಮನೆಯಲ್ಲಿ ಸದಾ ಸಕ್ರಿಯವಾಗಿ, ಲವಲವಿಕೆಯಿಂದ ಕಾಣಿಸಿಕೊಂಡಿದ್ದಾರೆ ಕಾರ್ತಿಕ್ ಮಹೇಶ್. ಸಂಗೀತಾ ಜೊತೆ ಸ್ನೇಹದಲ್ಲಿದ್ದ ಕಾರ್ತಿಕ್, ತೀರ ಆಪ್ತರಾಗಿದ್ದರು. ಸಂಗೀತಾ ಮುನಿಸಿಕೊಂಡು ದೂರ ಹೋದ ಮೇಲೆ ನಮ್ರತಾ ಜೊತೆ ತಮಾಷೆಗಾಗಿ ಫ್ಲರ್ಟ್ ಕೂಡಾ ಮಾಡಿದ್ದರು. ಲವ್ವರ್ ಬಾಯ್ ಆಗಲು ಹೋದ ಕಾರ್ತಿಕ್ಗೆ ಪ್ಲಸ್ಗಿಂತ ಮೈನಸ್ ಆಗಿದ್ದೇ ಹೆಚ್ಚು.

ಕಾರ್ತಿಕ್ ವಿಚಾರದಲ್ಲಿ ಒಂದಂತೂ ಹೇಳಲೇಬೇಕು. ಟಾಸ್ಕ್ ಸಮಯದಲ್ಲಿ ಮಾತ್ರ ವಿನಯ್ ಜೊತೆ ಜಗಳ ಮಾಡುವ ಕಾರ್ತಿಕ್ ಸ್ನೇಹಿತನ ಜೊತೆ ಪ್ರೀತಿಯಿಂದಲೇ ಇರುತ್ತಿದ್ದರು. ಕೊನೇ ವಾರಗಳಲ್ಲಿ ಸ್ನೇಹಿತ ವಿನಯ್ ತನಗೆ ಮಾಡಿರುವ ಸಹಾಯಕ್ಕೆ ತುಂಬು ಮನಸಿನಿಂದ ಧನ್ಯವಾದ ಕೂಡಾ ಹೇಳಿದ್ದರು. ಜೊತೆಗೆ ತನಿಷಾ ಜೊತೆ ಸುಂದರ ಸ್ನೇಹ ಇಟ್ಟುಕೊಂಡಿದ್ದರು. ಕೆಲವು ಬಾರಿ ಗೇಮ್ ಮೇಲೆ ಮಾತ್ರ ಫೋಕಸ್ ಮಾಡಿದ ಕಾರ್ತಿಕ್, ಸ್ನೇಹವನ್ನ ಮರೆತರು. ಇದೇ ಅವರಿಗೆ ಮೈನಸ್ ಕೂಡ ಆಯ್ತು. ಕಾರ್ತಿಕ್ ನಾಮಿನೇಷನ್ನಿಂದಾಗಿ ತನಿಷಾ ಎಲಿಮಿನೇಟ್ ಆದರು. ಫ್ರೆಂಡ್ ಆಗಿ ತಮ್ಮನ್ನ ಸೇಫ್ ಮಾಡಲಿಲ್ಲ ಎಂದೂ ಲೂಡೋ ಟಾಸ್ಕ್ ವೇಳೆ ಕಾರ್ತಿಕ್ ಮೇಲೆ ಸಂಗೀತಾ ಸಿಟ್ಟಾಗಿದ್ದರು. ಹೆಚ್ಚು ಟ್ರಿಗರ್ ಆಗುತ್ತಿದ್ದಾಗ ಕಾರ್ತಿಕ್, ತಾಳ್ಮೆಯಿಂದ ವರ್ತಿಸಿದ್ದೂ ಇದೆ. ಜೋರಾಗಿ ಕೂಗಾಡಿದ್ದೂ ಇದೆ. ಸಿಟ್ಟು ಬಂದಾಗ ಮೈಮ್ ಮಾಡಿ, ಮಿಮಿಕ್ ಮಾಡಿ, ಸನ್ನೆ ಮಾಡಿ ಇತರರನ್ನ ಕೆರಳಿಸಿದ್ದೂ ಇದೆ. ಒಟ್ನಲ್ಲಿ ಹೇಳೋದಾದರೆ, ಕಾರ್ತಿಕ್ ಬಿಗ್ಬಾಸ್ ಮನೆಯಲ್ಲಿ ತನ್ನ ಸಾಮರ್ಥ್ಯವನ್ನು ಸಂಪೂರ್ಣ ತೋರಿಸಿದ್ದಾರೆ. ದ್ವೇಷ ಸಾಧಿಸದೆ, ತನ್ನಲ್ಲಿ ಸಾಧ್ಯವಾದಷ್ಟು ಸ್ನೇಹದ ಹಸ್ತ ಚಾಚಿಕೊಂಡೇ ಬಂದಿರುವ ಕಾರ್ತಿಕ್ ಬಿಗ್‌ಬಾಸ್ ಟ್ರೋಫಿಯನ್ನು ಗೆದ್ದು ಬೀಗಿದ್ದಾರೆ.

Sulekha