ಲಾರೆನ್ಸ್ ಬಿಷ್ಣೋಯ್‌ನನ್ನು ಹತ್ಯೆ ಮಾಡಿದ್ರೆ 1,11,11,111 ನಗದು ಬಹುಮಾನ! – ಕರ್ಣಿ ಸೇನೆಯಿಂದ ಘೋಷಣೆ
ಜೈಲಿನಲ್ಲಿರುವ ದರೋಡೆಕೋರ ಲಾರೆನ್ಸ್ ಬಿಷ್ಣೋಯ್‌ನನ್ನು ಹತ್ಯೆ ಮಾಡಿದ್ರೆ ಭಾರಿ ಮೊತ್ತದ ನಗದು ಬಹುಮಾನ ನೀಡಲಾಗುವುದು ಎಂದು ಕ್ಷತ್ರಿಯ ಕರ್ಣಿ ಸೇನೆ ಘೋಷಣೆ ಮಾಡಿದೆ.
ಇದನ್ನೂ ಓದಿ:ಯುದ್ದ ಪೀಡಿತ ಪ್ಯಾಲೆಸ್ಟೈನ್ ಗೆ ಭಾರತದ ನೆರವು – 30 ಟನ್ ಔಷಧ, ಆಹಾರ ಪದಾರ್ಥಗಳ ರವಾನೆ
ಕಳೆದ ವರ್ಷ ಡಿಸೆಂಬರ್‌ನಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯರಿಂದ ಹತ್ಯೆಗೀಡಾದ ಪ್ರಮುಖ ರಜಪೂತ್ ನಾಯಕ ಸುಖದೇವ್ ಸಿಂಗ್ ಗೊಗಮೆಡಿ ಅವರ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಕ್ಷತ್ರಿಯ ಕರ್ಣಿ ಸೇನೆಯ ನಾಯಕ ರಾಜ್ ಶೇಖಾವತ್ ಈ ಬಹುಮಾನವನ್ನು ಘೋಷಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಹಂಚಿಕೊಂಡಿರುವ ರಾಜ್ ಶೇಖಾವತ್, ಜೈಲಿನಲ್ಲಿರುವ ದರೋಡೆಕೋರನನ್ನು ಕೊಂದ ಯಾವುದೇ ಪೊಲೀಸ್ ಅಧಿಕಾರಿಗೆ ಬಹುಮಾನವನ್ನು ನೀಡುತ್ತೇನೆ. 1,11,11,111 ನಗದು ಬಹುಮಾನವನ್ನು ನೀಡೋದಾಗಿ ಹೇಳಿಕೊಂಡಿದ್ದಾರೆ.
ಗಡಿಯಾಚೆಗಿನ ಮಾದಕವಸ್ತು ಕಳ್ಳಸಾಗಣೆ ಆರೋಪದಡಿ ಬಿಷ್ಣೋಯಿ ಪ್ರಸ್ತುತ ಗುಜರಾತ್‌ನ ಸಬರಮತಿ ಜೈಲಿನಲ್ಲಿದ್ದಾನೆ. ಇತ್ತೀಚೆಗೆ, ಬಿಷ್ಣೋಯ್ ಗ್ಯಾಂಗ್ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದೆ. ಅಲ್ಲದೇ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ನಿವಾಸದ ಹೊರಗೆ ನಡೆದ ಗುಂಡಿನ ದಾಳಿಗೆ ಬಿಷ್ಣೋಯ್ ಗ್ಯಾಂಗ್‌ಗೂ ಸಂಬಂಧ ಇರುವುದು ತನಿಖೆ ವೇಳೆ ಬೆಳಕಿಗೆ ಬಂದಿತ್ತು.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಗೊಗಮೆಡಿ ಅವರ ಜೈಪುರದ ನಿವಾಸದಲ್ಲಿ ಚಹಾ ಕುಡಿಯುತ್ತಿದ್ದ ವೇಳೆ ಗುಂಡಿಕ್ಕಿ ಹತ್ಯೆಗೈಯ್ಯಲಾಗಿತ್ತು. ಭದ್ರತಾ ಸಿಬ್ಬಂದಿ ಸಹ ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದರು. ಗುಂಡಿನ ಚಕಮಕಿಯಲ್ಲಿ ಶೂಟರ್‌ಗಳಲ್ಲಿ ಒಬ್ಬನಾದ ನವೀನ್ ಸಿಂಗ್ ಶೇಖಾವತ್ ಕೂಡ ಸಾವನ್ನಪ್ಪಿದ್ದ.
ದಾಳಿಯ ಸ್ವಲ್ಪ ಸಮಯದ ನಂತರ, ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಗ್ಯಾಂಗ್‌ಗಳ ಸಹವರ್ತಿ ರೋಹಿತ್ ಗೋಡಾರಾ, ಗೊಗಮೆಡಿ ಅವರ ಹತ್ಯೆಯ ಹೊಣೆಗಾರಿಕೆಯನ್ನು ಹೊತ್ತುಕೊಂಡಿದ್ದ. ಸಾಮಾಜಿಕ ಜಾಲತಾಣದಲ್ಲಿ ನಮ್ಮ ಶತೃಗಳನ್ನು ಬೆಂಬಲಿಸಿದ್ದಕ್ಕಾಗಿ ಹತ್ಯೆ ಮಾಡಿದ್ದಾರೆ ರೋಹಿತ್ ಹೇಳಿಕೊಂಡಿದ್ದ.