ಅಕ್ಕಿ ಕೊಡುತ್ತೇವೆಂದು ಒಪ್ಪಿ ಕೈ ಕೊಟ್ಟ ಕೇಂದ್ರ – ಜುಲೈ 1 ರಿಂದ ‘ಅನ್ನಭಾಗ್ಯ’ ಜಾರಿ ಡೌಟ್!

ಅಕ್ಕಿ ಕೊಡುತ್ತೇವೆಂದು ಒಪ್ಪಿ ಕೈ ಕೊಟ್ಟ ಕೇಂದ್ರ – ಜುಲೈ 1 ರಿಂದ ‘ಅನ್ನಭಾಗ್ಯ’ ಜಾರಿ ಡೌಟ್!

ಬೆಂಗಳೂರು: ವಿಧಾನಸಭಾ ಚುನಾವಣೆ ಸಂದರ್ಭ ಕಾಂಗ್ರೆಸ್‌ ಐದು ಗ್ಯಾರಂಟಿಗಳನ್ನು ಘೋಷಿಸಿತ್ತು. ಇವುಗಳಲ್ಲಿ ʼಅನ್ನಭಾಗ್ಯʼ ಕೂಡ ಒಂದು. ಇದೀಗ ಈ ಯೋಜನೆಗೆ ಆರಂಭದಲ್ಲೇ ವಿಘ್ನ ಎದುರಾಗಿದೆ.

ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ಅಕ್ಕಿ ವಿತರಣೆಗೆ ಪೂರಕವಾಗಿ 15 ದಿನದೊಳಗಾಗಿ 2.28 ಲಕ್ಷ ಟನ್‌ ಹೆಚ್ಚುವರಿ ಅಕ್ಕಿಯನ್ನು ಕರ್ನಾಟಕ ರಾಜ್ಯಕ್ಕೆ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ ಮಾರಾಟ ಮಾಡಲು ಒಪ್ಪಿಗೆ ನೀಡಿದ್ದ ಭಾರತೀಯ ಆಹಾರ ನಿಗಮವು, ಮರು ದಿನವೇ ಕೇಂದ್ರದ ಸೂಚನೆ ಮೇರೆಗೆ ಅಕ್ಕಿ ನೀಡುವುದಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. ಈ ಹಿನ್ನೆಲೆಯಲ್ಲಿ ಜುಲೈ 1 ರಿಂದ ಪ್ರತಿಯೊಬ್ಬ ಬಿಪಿಎಲ್‌ ಹಾಗೂ ಅಂತ್ಯೋದಯ ಪಡಿತರ ಚೀಟಿದಾರರಿಗೆ ಹೆಚ್ಚುವರಿ 5 ಕೆ.ಜಿ. ಸೇರಿ ತಲಾ 10 ಕೆ.ಜಿ. ಅಕ್ಕಿ ನೀಡುವ ಗ್ಯಾರಂಟಿ ಯೋಜನೆ ಜಾರಿ ವಿಳಂಬವಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಬಿಜೆಪಿ ಅವಧಿಯ ಪಠ್ಯಗಳಿಗೆ ಕತ್ತರಿ! – ಪಾಠ ಬೋಧಿಸದಂತೆ ಶಿಕ್ಷಕರಿಗೆ ಸುತ್ತೋಲೆ?

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ‘ಭಾರತೀಯ ಆಹಾರ ನಿಗಮವು ಜೂ.8 ರಂದು ತಮ್ಮ ಬಳಿ 7 ಲಕ್ಷ ಟನ್‌ ಅಕ್ಕಿ ಲಭ್ಯವಿದೆ ಎಂದು ಹೇಳಿತ್ತು. ಜತೆಗೆ ಜೂ.12ರಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಸಾಗಣೆವೆಚ್ಚ ಸೇರಿದಂತೆ ಕೆ.ಜಿ.ಗೆ 36.60 ರು.ಗಳಂತೆ 2.28 ಲಕ್ಷ ಟನ್‌ ಅಕ್ಕಿ ಮಾರಾಟ ಮಾಡಲು ಒಪ್ಪಿಗೆ ನೀಡಿತ್ತು. ಬಳಿಕ ಜೂ.13 ರಂದು ಪತ್ರ ಬರೆದು, ರಾಜ್ಯ ಸರ್ಕಾರಗಳಿಗೆ ಅಕ್ಕಿ ನೀಡುವುದನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದೆ. ಇದರ ಹಿಂದೆ ಕೇಂದ್ರದ ಬಿಜೆಪಿ ಸರ್ಕಾರದ ಪಿತೂರಿಯಿರುವುದು ಸ್ಪಷ್ಟವಾಗಿದೆʼ ಎಂದು ಹೇಳಿದ್ದಾರೆ.

‘ಅಕ್ಕಿ ನೀಡುವುದಾಗಿ ಹೇಳಿ ಅನಂತರ ನಿಲುವು ಬದಲಿಸಿದ ನಿಗಮದ ಈ ಧೋರಣೆಗೆ ಕೇಂದ್ರ ಸರ್ಕಾರದ ಷಡ್ಯಂತ್ರ ಕಾರಣ. ಇದರ ಹಿಂದೆ ರಾಜಕೀಯ ಷಡ್ಯಂತ್ರವಿದೆ.  ಕೇಂದ್ರದ ರಾಜಕೀಯ ನಿರ್ಧಾರದಿಂದ ಅವರು ಬಡವರ ಹಾಗೂ ಕನ್ನಡಿಗರ ವಿರೋಧಿ ಎಂಬುದು ಸಾಬೀತಾಗಿದೆ’ಎಂಬ ಗಂಭೀರ ಆರೋಪ ಮಾಡಿದ್ದಾರೆ.

ಕೇಂದ್ರವು ಎಷ್ಟೇ ರಾಜಕೀಯ ಷಡ್ಯಂತ್ರ ನಡೆಸಿದರೂ ನಾವು ಅಕ್ಕಿ ನೀಡುವುದು ಗ್ಯಾರಂಟಿ. ಈ ಸಂಬಂಧ ತೆಲಂಗಾಣ ಹಾಗೂ ಛತ್ತೀಸ್‌ಗಢ ಸರ್ಕಾರದ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸುತ್ತಿದ್ದೇನೆ’ ಎಂದು ಹೇಳಿದರು.

suddiyaana