ಶುದ್ಧ ಗಾಳಿ ಇರುವ ದೇಶದ ನಗರಗಳ ಪಟ್ಟಿಯಲ್ಲಿ ಕರ್ನಾಟಕಕ್ಕೆ ಅಗ್ರ ಸ್ಥಾನ!
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ವಾಯು ಮಾಲಿನ್ಯ ಹೆಚ್ಚಾಗಿದೆ. ವಾಹನ, ಕಾರ್ಖಾನೆಗಳಿಂದ ಬರುವ ಹೊಗೆಯಿಂದಾಗಿ ವಾಯು ಗುಣಮಟ್ಟ ತೀರಾ ಹಾಳಾಗಿದೆ. ಇದೀಗ ರೆಸ್ಪೈರ್ ಲಿವಿಂಗ್ ಸೈನ್ಸಸ್ ಮತ್ತು ಕ್ಲೈಮೇಟ್ ಟ್ರೆಂಡ್ಸ್ ವಾಯು ಗುಣಮಟ್ಟದ ಡೇಟಾವನ್ನು ಬಿಡುಗಡೆ ಮಾಡಿದೆ. ದೇಶದಲ್ಲಿ ಅತ್ಯಂತ ಸ್ವಚ್ಛವಾದ ಗಾಳಿ ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮೇಲುಗೈ ಸಾಧಿಸಿದೆ.
ರೆಸ್ಪೈರ್ ಲಿವಿಂಗ್ ಸೈನ್ಸಸ್ ಮತ್ತು ಕ್ಲೈಮೇಟ್ ಟ್ರೆಂಡ್ಸ್‌ನ ವರದಿಯ ಪ್ರಕಾರ, ಸ್ವಚ್ಛವಾದ ಗಾಳಿಯೊಂದಿಗೆ ಭಾರತದ ಅಗ್ರ 10 ಸ್ಥಳಗಳಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆದುಕೊಂಡಿದೆ. ಟಾಪ್ 10ರ ಪೈಕಿ ರಾಜ್ಯದ 8 ನಗರಗಳಿಗೆ ಈ ಸ್ಥಾನ ದೊರೆಯುವ ಮೂಲಕ ಇಡೀ ದೇಶದಲ್ಲೇ ಕರ್ನಾಟಕ ಅತ್ಯಂತ ಶುದ್ಧಗಾಳಿ ಇರುವ ರಾಜ್ಯವೆಂಬ ಗರಿ ಕರುನಾಡಿಗೆ ಸಿಕ್ಕಿದೆ.
ಇದನ್ನೂ ಓದಿ: ಈಕೆ ಸ್ನಾನ ಮಾಡಂಗಿಲ್ಲ.. ನೀರು ಕುಡಿಯಂಗಿಲ್ಲ..! – ಯುವತಿಗೆ ಜೀವಜಲವೇ ಕಂಟಕವಾಗಿದ್ದು ಯಾಕೆ?
ರೆಸ್ಪೈರರ್ ಲಿವಿಂಗ್ ಸೈನ್ಸಸ್‌ನ ಉಪಕ್ರಮವಾದ ರೆಸ್ಪೈರ್ ರಿಪೋರ್ಟ್ಸ್, ಎರಡು ರೀತಿಯಲ್ಲಿ ಗಾಳಿಯ ಗುಣಮಟ್ಟದ ಡೇಟಾವನ್ನು ವಿಶ್ಲೇಷಿಸಿದೆ. ಮೊದಲನೆಯದು ಸರ್ಕಾರದ PM2.5 ಡೇಟಾದಲ್ಲಿ ಎನ್‌ಸಿಆರ್ ಮತ್ತು ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮದಲ್ಲಿ ಪಟ್ಟಿ ಮಾಡಲಾದ ಇತರ ನಗರಗಳಲ್ಲಿ ಹಿಂದಿನ ವರ್ಷಕ್ಕಿಂತ ಗಾಳಿಯ ಗುಣಮಟ್ಟದಲ್ಲಿ ಸುಧಾರಣೆಯನ್ನು ಪತ್ತೆಹಚ್ಚಲು ಕಳೆದ ಒಂದು ವರ್ಷದ (1 ಅಕ್ಟೋಬರ್, 2022 ರಿಂದ 30 ಸೆಪ್ಟೆಂಬರ್, 2023) ಮಾಹಿತಿಯನ್ನು ಕಲೆ ಹಾಕಿ ವಿಶ್ಲೇಷಣೆ ಮಾಡಲಾಗುವುದು. ಇನ್ನೊಂದು ಕಡೆ ಚಳಿಗಾಲದಲ್ಲಿ PM2.5 ಡೇಟಾ, ಸರಿಸುಮಾರು ಅಕ್ಟೋಬರ್-ಮಾರ್ಚ್ ಮಾಲಿನ್ಯದ ಮಟ್ಟಗಳು ಹೆಚ್ಚಾದಾಗ ಅದರ ಮಾಹಿತಿ ಪಡೆದು ವಿಶ್ಲೇಷಣೆ ಮಾಡಿ ಅತ್ಯಂತ ಶುದ್ಧಗಾಳಿ ಇರುವ ನಗರವನ್ನು ಪತ್ತೆ ಮಾಡಲಾಗಿದೆ.
ಅತ್ಯಂತ ಶುದ್ಧ ಗಾಳಿ ಇರುವ ನಗರಗಳ ಪಟ್ಟಿ ಹೀಗಿದೆ..
ಮಿಜೋರಾಂನ ಐಜ್ವಾಲ್ (11 μg/m3) ಮೊದಲ ಸ್ಥಾನದಲ್ಲಿದೆ.
ನಂತರದ ಸ್ಥಾನದಲ್ಲಿ ಕರ್ನಾಟಕದ ಚಿಕ್ಕಮಗಳೂರು (17.6 μg/m3 )
ಮೂರನೇ ಸ್ಥಾನದಲ್ಲಿ ಹರಿಯಾಣದ ಮಂಡಿಖೇರಾ (17.7 μg/m3) ನಗರವಿದೆ.
ಉಳಿದಂತೆ 7 ಸ್ಥಾನಗಳಲ್ಲೂ ಕರ್ನಾಟಕವೇ ಇದೆ. ಕ್ರಮವಾಗಿ ಚಾಮರಾಜನಗರ, ಮಡಿಕೇರಿ, ವಿಜಯಪುರ, ರಾಯಚೂರು, ಶಿವಮೊಗ್ಗ, ಗದಗ, ಮೈಸೂರು ಸ್ಥಾನ ಪಡೆದಿವೆ.