GST ಇಳಿಕೆಯಿಂದ ಕರ್ನಾಟಕಕ್ಕೆ ವಾರ್ಷಿಕ 70,000 ಕೋಟಿ ಲಾಸ್ – ಸಚಿವ ಕೃಷ್ಣ ಬೈರೇಗೌಡ

ಈ ಬಾರಿ ನವರಾತ್ರಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಜನತೆಗೆ ಭರ್ಜರಿ ಗಿಫ್ಟ್ ಕೊಟ್ಟಿದ್ದು, ಔಷಧಿ ಆಟೊಮೊಬೈಲ್ ಸೇರಿದಂತೆ ಹಲವು ವಸ್ತುಗಳ ಮೇಲಿನ ಜಿಎಸ್‌ಟಿ ದರ ಭಾರಿ ಇಳಿಕೆ ಮಾಡಿ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಈ ವಿಚಾರವಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಜಿಎಸ್‌ಟಿ ತೀರ್ಮಾನಗಳಿಂದ ರಾಜ್ಯಕ್ಕೆ ವಾರ್ಷಿಕ 70,000 ಕೋಟಿ ಖೋತಾ ಆಗಲಿದೆ. ರಾಜ್ಯಕ್ಕೆ ಆರ್ಥಿಕ ಹೊರೆ ಆಗಬಹುದು ಎಂದು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಕೇಂದ್ರದ ತೀರ್ಮಾನಗಳಿಂದ 2016-17 ಮತ್ತು 2024-25ರ ನಡುವೆ ಕರ್ನಾಟಕಕ್ಕೆ ಆಗಿರುವ ಆದಾಯದ ಖೋತಾ ಪ್ರಮಾಣ 70 ಸಾವಿರ ಕೋಟಿ. ಇದು ರಾಜ್ಯದ ಪರಿಸ್ಥಿತಿ ಆಗಿದ್ದು, ಬೇರೆ ಬೇರೆ ರಾಜ್ಯಗಳದ್ದು ಬೇರೆ ಬೇರೆ ರೀತಿ ಇರಬಹುದು. 2024 ಮತ್ತು 25ನೇ ಸಾಲಿಗೆ 70 ಸಾವಿರ ಕೋಟಿ ಒಂದು ವರ್ಷಕ್ಕೆ ಖೋತಾ ಆಗಲಿದೆ ಎಂದು ದರ ಸರಳೀಕರಣದಿಂದ ಆಗುವ ಪರಿಣಾಮದ ಬಗ್ಗೆ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು. ಆರ್ಥಿಕವಾಗಿ ಮತ್ತಷ್ಟು ಹೊರೆಯಾಗುವ ಆತಂಕವನ್ನು ಕೃಷ್ಣ ಬೈರೇಗೌಡ ವ್ಯಕ್ತಪಡಿಸಿದರು.
ಜಿಎಸ್‌ಟಿ ಸ್ಲ್ಯಾಬ್‌ಗಳಲ್ಲಿ ದೊಡ್ಡ ಮಟ್ಟದ ಪರಿಷ್ಕರಣೆ ಮಾಡಲಾಗಿದ್ದು, ಶೇ 12 ಮತ್ತು ಶೇ 28ರ ಸ್ಲ್ಯಾಬ್‌ಗಳನ್ನು ರದ್ದು ಮಾಡಲಾಗಿದೆ. ಶೇ 5 ಮತ್ತು ಶೇ 18ರ ತೆರಿಗೆ ಸ್ಲ್ಯಾಬ್‌ಗಳನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಇದರಿಂದ ಅನೇಕ ವಸ್ತುಗಳ ಬೆಲೆ ಇಳಿಕೆಯಾಗುತ್ತಿದೆ. ಮತ್ತೊಂದೆಡೆ, ಕೆಲವು ವಸ್ತುಗಳಿಗೆ ಜಿಎಸ್ಟಿಯಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.
ಯುಎಚ್ಟಿ ಮಿಲ್ಕ್, ಪ್ಯಾಕ್ ಮಾಡಿದ ಚೆನ್ನಾ, ಪನ್ನೀರ್, ಇಂಡಿಯನ್ ಬ್ರೆಡ್ಸ್, ರೋಟಿ, ಕಾಕ್ರಾ, ಚಪಾತಿ, ಪರೋಟ, ಪಿಜ್ಜಾ ಹಾಗೂ ಬ್ರೆಡ್ ಇವುಗಳು ಈವರೆಗೆ ಶೇ 5 ರ ಜಿಎಸ್‌ಟಿ ಸ್ಲ್ಯಾಬ್ ಅಡಿ ಬರುತ್ತಿದ್ದವು. ಈ ವಸ್ತುಗಳಿಗೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಆಹಾರ ವಸ್ತುಗಳು ಮಾತ್ರವಲ್ಲದೆ, ಮಕ್ಕಳ ಕಲಿಕಾಸಾಮಗ್ರಿಗಳ ಮೇಲಿನ ಜಿಎಸ್‌ಟಿಯನ್ನೂ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಮ್ಯಾಪ್ಸ್, ಚಾರ್ಟ್ಸ್ ಮತ್ತು ಗ್ಲೋಬ್ಸ್, ಪೆನ್ಸಿಲ್ಸ್, ಶಾರ್ಪರ್ನರ್ಸ್, ಎರೇಸರ್, ಕ್ರಯನ್ಸ್, ಮತ್ತು ಪ್ಯಾಸ್ಟೆಲ್‌ಗಳು, ಎಕ್ಸರ್‌ಸೈಸ್ ಬುಕ್ಸ್ ಮತ್ತು ನೋಟ್ ಪುಸ್ತಕಗಳು ಇವುಗಳ ಮೇಲೆ ಮೊದಲು ಶೇ 12ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿತ್ತು. ಇದನ್ನು ಸಂಪೂರ್ಣ ತೆರವು ಮಾಡಲಾಗಿದ್ದು, ಇನ್ಮುಂದೆ ಶೂನ್ಯ ತೆರಿಗೆ ವ್ಯಾಪ್ತಿಗೆ ಬರಲಿವೆ. ವೈಯಕ್ತಿಕ ವಿಮೆ ಮತ್ತು ಆರೋಗ್ಯ ವಿಮೆ ಮೇಲಿನ ಶೇ 18ರ ಜಿಎಸ್‌ಟಿಯನ್ನು ಶೂನ್ಯಕ್ಕೆ ಇಳಿಕೆ ಮಾಡಲಾಗಿದೆ. ವೈಯಕ್ತಿಕ ಜೀವವಿಮೆ ಮತ್ತು ಆರೋಗ್ಯ ವಿಮೆಗೆ ಕೇಂದ್ರಸರ್ಕಾರ ಬಹುದೊಡ್ಡ ರಿಯಾಯಿತಿ ನೀಡಿದೆ.

ನೋಡಿರಿ

