ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟ – ಫೇಲ್ ಆದವರಿಗೆ ಮತ್ತೊಂದು ಚಾನ್ಸ್!
ಬೆಂಗಳೂರು: 2022 -23 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಸೋಮವಾರ ಹೊರಬಿದ್ದಿದೆ.ಇದೀಗ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿರುವ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶವನ್ನು ಶಿಕ್ಷಣ ಇಲಾಖೆ ನೀಡಿದೆ. ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು ಮೇ 15 ರೊಳಗೆ ಸಪ್ಲಿಮೆಂಟರಿ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಲು ಶಿಕ್ಷಣ ಇಲಾಖೆ ಸೂಚಿಸಿದೆ.
ಇದನ್ನೂ ಓದಿ: ಎಸ್ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟ – ವಿದ್ಯಾರ್ಥಿನಿಯರೇ ಈ ಬಾರಿಯೂ ಬೆಸ್ಟ್ , ಚಿತ್ರದುರ್ಗ ಫಸ್ಟ್ – ಯಾದಗಿರಿ ಲಾಸ್ಟ್
ಇನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಂದುಕೊಂಡದ್ದಕ್ಕಿಂತ ಕಡಿಮೆ ಅಂಕಗಳು ಬಂದಿವೆ ಅಥವಾ ಅನುತ್ತೀರ್ಣರಾಗಿದ್ದ ಬಗ್ಗೆ ಅನುಮಾನಗಳಿದ್ದರೆ ನಿಮ್ಮ ಉತ್ತರ ಪತ್ರಿಕೆಗಳ ಫೋಟೋ ಕಾಪಿಗಳನ್ನು (ನಕಲು ಪ್ರತಿಗಳು) ಪಡೆಯಲು ಮೇ 8 ರಿಂದ ಮೇ 14ರೊಳಗೆ ಅರ್ಜಿ ಸಲ್ಲಿಕೆ ಮಾಡಬಹುದು. ಇನ್ನು ಮರು ಮೌಲ್ಯಮಾಪನಕ್ಕೆ ಮೇ 15 ರಿಂದ ಮೇ 21ರವರೆಗೆ ಅರ್ಜಿ ಸಲ್ಲಿಸಬಹುದು. ಜೊತೆಗೆ, ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು ಪೂರಕ ಪರೀಕ್ಷೆಯನ್ನು ತೆಗೆದುಕೊಳ್ಳಲು ಇಂದಿನಿಂದ (ಮೇ 8) ಮೇ 15ರೊಳಗೆ ನೋಂದಣಿ ಮಾಡಿಸಿಕೊಳ್ಳಲು ಅವಕಾಶ ನೀಡಲಾಗಿದೆ.
2022 – 23 ನೇ ಸಾಲಿನಲ್ಲಿ 8,35,102 ಮಂದಿ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 7,00,619 ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದು, 1,34,483 ಅನುತ್ತೀರ್ಣರಾಗಿದ್ದಾರೆ. ಸೋಮವಾರ ಮಧ್ಯಾಹ್ನದ ನಂತರ ಆಯಾ ಶಾಲೆಗಳಲ್ಲಿಯೇ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಲಾಗುತ್ತದೆ. ಅಷ್ಟೇ ಅಲ್ಲದೇ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಮೊಬೈಲ್ ನಂಬರ್ ಗೆ ಎಸ್ ಎಂ ಎಸ್ ಮೂಲಕ ಫಲಿತಾಂಶ ಕಳುಹಿಸಲಾಗುತ್ತಿದೆ.