ರಾಜ್ಯದಲ್ಲಿ ವರುಣನ ರೌದ್ರಾವತಾರ – ಆರು ಮಂದಿ ಸಾವು, ಹಲವೆಡೆ ಹಾನಿ

ರಾಜ್ಯದಲ್ಲಿ ವರುಣನ ರೌದ್ರಾವತಾರ – ಆರು ಮಂದಿ ಸಾವು, ಹಲವೆಡೆ ಹಾನಿ

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರು ಸೇರಿದಂತೆ, ರಾಜ್ಯದ ಹಲವೆಡೆ ಭಾನುವಾರ ಬಿರುಗಾಳಿ ಸಹಿತ ಸುರಿದ ರಣಮಳೆ ಭಾರಿ ಅನಾಹುತಗಳನ್ನೇ ಸೃಷ್ಟಿಸಿದೆ. ಮಳೆಯ ಆರ್ಭಟಕ್ಕೆ ರಾಜ್ಯದಲ್ಲಿ ಒಟ್ಟು ಆರು ಮಂದಿ ಮೃತಪಟ್ಟಿದ್ದಾರೆ.

ಭಾನುವಾರ ಮಧ್ಯಾಹ್ನದಿಂದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ಚಿಕ್ಕಮಗಳೂರು, ಮೈಸೂರು, ಕೊಡಗು, ಧಾರವಾಢ, ಕೊಪ್ಪಳ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ. ಏಕಾಏಕಿ ಸುರಿದ ಮಳೆಯಿಂದಾಗಿ ಬಹುತೇಕ ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಹಲವೆಡೆ ಬೃಹದಾಕಾರದ ಮರಗಳು ಧರೆಗೆ ಉರುಳಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡು ಸಮಸ್ಯೆಗಳು ಸೃಷ್ಟಿಗೊಂಡಿದ್ದವು.

ಇದನ್ನೂ ಓದಿ: ಭೂಮಿಯಂತಿರುವ ಮತ್ತೊಂದು ಗ್ರಹ ಪತ್ತೆ! – ಮಾನವನ ವಾಸಕ್ಕೆ ಯೋಗ್ಯವಾಗಿದ್ಯಾ ಈ ಗ್ರಹ?

ಇನ್ನು ಬೆಂಗಳೂರಿನ ಕೆ.ಆರ್. ವೃತ್ತದಲ್ಲಿರುವ ಅಂಡರ್‌ಪಾಸ್ ಮೂಲಕ ಕಾರನ್ನು ದಾಟಿಸಲು ಯತ್ನಿಸಿದಾಗ ಅಲ್ಲಿ ಸಂಗ್ರಹವಾಗಿದ್ದ ನೀರು ಕಾರಿನೊಳಗೆ ನುಗ್ಗಿ ಇನ್ಫೋಸಿಸ್ ಉದ್ಯೋಗಿ ಭಾನುರೇಖಾ (23) ಮೃತಪಟ್ಟಿದ್ದಾರೆ.

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಡಿ. ಸಿದ್ದಾಪುರದಲ್ಲಿ ಸಿಡಿಲು ಬಡಿದು ಅಪ್ಪೇನಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ಮಲ್ಲಿಕಾರ್ಜುನ (39) ಮೃತಪಟ್ಟರೆ, ಬೆಟ್ಟದಪುರ ಸಮೀಪದ ಬಾರಸೆ ಗ್ರಾಮದ ಜಮೀನಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಕೆ.ದೊಡ್ಡಕೊಪ್ಪಲಿನ ಸ್ವಾಮಿ (18) ಸಾವಿಗೀಡಾಗಿದ್ದಾರೆ. ಪಿರಿಯಾಪಟ್ಟಣ ತಾಲ್ಲೂಕಿನ ಅವರ್ತಿಯ ಲೋಕೇಶ್ (55) ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ಮರ ದ್ವಿಚಕ್ರ ವಾಹನದ ಮೇಲೆ ಉರುಳಿ, ಸವಾರ ವೇಣುಗೋಪಾಲ್ (58) ಸಾವಿಗೀಡಾಗಿದ್ದಾರೆ. ಕೊಪ್ಪಳ ತಾಲ್ಲೂಕಿನ ಶಿವಪುರದಲ್ಲಿ ಶ್ರೀಕಾಂತ್ ಮೇಟಿ (16) ಎಂಬ ಬಾಲಕ ಸಿಡಿಲು ಬಡಿದು ಮೃತಪಟ್ಟಿದ್ದಾನೆ. ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಮಂಟೆಕೊಪ್ಪಲಿನಲ್ಲಿ ಸಿಡಿಲು ಬಡಿದು ಹರೀಶ್ (42) ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮುಂದಿನ ಐದು ದಿನಗಳ ಕಾಲ ರಾಜ್ಯದ ಬಹುತೇಕ ಭಾಗಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೊದಲ ಮೂರು ದಿನಗಳಲ್ಲಿ ಭಾರಿ ಮಳೆ ಮತ್ತು ನಾಲ್ಕು ಮತ್ತು ಐದನೇ ದಿನದಲ್ಲಿ ಕ್ರಮೇಣ ಇಳಿಕೆಯಾಗಲಿದೆ ಎಂದು ತಿಳಿಸಿದೆ.

ಕಳೆದ ವರ್ಷ ಕೂಡ ಮೇ ತಿಂಗಳಿನಲ್ಲಿ ಇದೇ ರೀತಿಯ ಮಳೆಯಾಗಿತ್ತು. ಈ ವರ್ಷ ಕೂಡ ಅದೇ ಪರಿಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ನಗರದ ಹಲವೆಡೆ ಭಾರೀ ಮಳೆಯ ಎಚ್ಚರಿಕೆಯನ್ನು ನೀಡಲಾಗಿದೆ. ಡಿಸಿಗಳು ಸೇರಿದಂತೆ ಸರ್ಕಾರಿ ಇಲಾಖೆಗಳ ಅಧಿಕಾರಿಗಳಿಗೆ ಈ ಸಂಬಂಧ ಮಾಹಿತಿ ನೀಡಲಾಗಿದೆ ಎಂದು ಐಎಂಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

suddiyaana