ಮ್ಯೂಸಿಕಲ್ ಚೇರ್ ನಲ್ಲಿ ಗೆದ್ದ ಡಿಕೆಶಿ.. ಕುರ್ಚಿ ಬಿಡಲು ಸಿದ್ಧರಾದ ಸಿದ್ದು – ಸಚಿವರಿಗೆ ಈಗ ಢವಢವ!

ರಾಜ್ಯ ಕಾಂಗ್ರೆಸ್ ನಲ್ಲಿ ನಾ ಕೊಡೆ ನೀ ಬಿಡೆ ಎನ್ನುವಂತೆ ಕಳೆದ ಮೂರು ವರ್ಷಗಳಿಂದ ನಡೆಯುತ್ತಿದ್ದ ಸಿಎಂ ಕುರ್ಚಿ ಹಗ್ಗಜಗ್ಗಾಟಕ್ಕೆ ಕೊನೆಗೂ ತೆರೆ ಬೀಳೋ ಟೈಂ ಬಂದಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡೋದು ಪಕ್ಕಾ ಆಗಿದ್ದು ನಾಳೆ ರಾಜ್ಯಪಾಲರ ಭೇಟಿಗೂ ಅವಕಾಶ ಕೇಳಿದ್ದಾರೆ. ಒಂದು ಕಡೆ ಸಿದ್ದರಾಮಯ್ಯ ಕುರ್ಚಿಯಿಂದ ಕೆಳಗೆ ಇಳಿಯೋಕೆ ರೆಡಿಯಾಗಿದ್ರೆ ಅತ್ತ ಡಿಕೆ ಶಿವಕುಮಾರ್ ರಾಜ್ಯಭಾರ ಮಾಡೋಕೆ ಉತ್ಸುಕವಾಗಿ ಕಾಯುತ್ತಿದ್ದಾರೆ.
ಇದನ್ನೂ ಓದಿ : RCBಗೆ ಗೋಲ್ಡನ್ ಬಾಯ್ ಪಡಿಕ್ಕಲ್ – ನಂ.3ನಲ್ಲಿ ಪವರ್ ಹಿಟ್ಟರ್ ಆಗಿದ್ದೇಗೆ?
ಕಾಂಗ್ರೆಸ್ ನಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಡೆಲ್ಲಿ ಟು ಕರ್ನಾಟಕ.. ಕರ್ನಾಟಕ ಟು ಡೆಲ್ಲಿ ಮ್ಯಾರಥಾನ್ ಮೀಟಿಂಗ್ ನಡೆಯುತ್ತಿತ್ತು. ಶಾಸಕರು ಮತ್ತು ಸಚಿವರ ದಂಡು ಡೆಲ್ಲಿಗೆ ಹಾರಿ ಹೈಕಮಾಂಡ್ ಮುಂದೆ ತಮ್ಮ ಬೇಡಿಕೆಗಳನ್ನ ಇಟ್ಟು ಬರ್ತಿದ್ರು. ಇಷ್ಟು ದಿನ ಹೈಕಮಾಂಡ್ ಗೂ ಬಿಸಿತುಪ್ಪವಾಗಿದ್ದ ವಿಚಾರದಲ್ಲಿ ಕೊನೆಗೂ ಹೈಕಮಾಂಡ್ ದೃಢ ನಿರ್ಧಾರ ತೆಗೆದುಕೊಂಡಂತಿದೆ. ಮಂಗಳವಾರದ ದೆಹಲಿ ಸಭೆಯಲ್ಲಿ ಮಹತ್ವದ ಚರ್ಚೆಯಾಗಿರುವ ಬೆನ್ನಲ್ಲೇ ಬುಧವಾರ ರಾಜ್ಯದಲ್ಲಿ ರಾಜಕಾರಣದ ದಿಕ್ಕೇ ಬದಲಾಗಿದೆ.
ಸಿಎಂ ಬದಲಾವಣೆ ವಿಚಾರದಲ್ಲಿ ಕ್ಷಣಕ್ಕೊಂದು ಬೆಳವಣಿಗೆಗಳು ನಡೆಯುತ್ತಿರೋ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯರೇ ಈ ಬಗ್ಗೆ ಮಾತನಾಡಿದ್ದಾರೆ. ವಿಧಾನಸೌಧದಲ್ಲಿ ನಡೆದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ಸಿಎಂ, ದೆಹಲಿಗೆ ಹೋಗಿದ್ದ ವಿಚಾರದ ಬಗ್ಗೆ ನಾಳೆ (ಗುರುವಾರ) ಎಲ್ಲವನ್ನೂ ಮುಕ್ತವಾಗಿ ಮಾತನಾಡುತ್ತೇನೆ ಎಂದಿದ್ದಾರೆ. ಈ ಮೂಲಕ ಗುಟ್ಟು ಬಿಟ್ಟುಕೊಡದೆ ಕುತೂಹಲ ಹೆಚ್ಚಿಸಿದ್ದಾರೆ.
ಕಾಂಗ್ರೆಸ್ ನಲ್ಲಿನ ಈ ದಿಢೀರ್ ಬೆಳವಣಿಗೆಯಿಂದ ಸಚಿವರೂ ಈಗ ಆತಂಕಗೊಂಡಿದ್ದಾರೆ. ಯಾಕಂದರೆ ಮೊದಲಿಂದಲೂ ಒಂದು ಬಣ ಡಿಕೆಶಿ ಪರ ಮತ್ತೊಂದು ಬಣ ಸಿದ್ದು ಪರ ಇತ್ತು. ಆದರೀಗ ದೆಹಲಿಯಿಂದ ಮರಳಿದ ನಂತರ ಹೈಕಮಾಂಡ್ ಸೂಚನೆಯಂತೆ ಸಿದ್ದರಾಮಯ್ಯ ಅವರು ತಮ್ಮ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬದ್ಧರಾಗಿದ್ದಾರೆ. ಇದು ಕೆಲವು ಆಪ್ತ ಸಚಿವರು ಮತ್ತು ಶಾಸಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಇಲಾಖೆಗಳಲ್ಲಿ ಬಾಕಿ ಉಳಿದಿರುವ ಹಲವಾರು ಅನುದಾನದ ಆದೇಶಗಳು ಮತ್ತು ಯೋಜನೆಗಳಿಗೆ ಸಿಎಂ ಸಮ್ಮತಿ ಅಗತ್ಯವಿದೆ. ಸಿದ್ದರಾಮಯ್ಯ ಅವರು ತಕ್ಷಣವೇ ರಾಜೀನಾಮೆ ನೀಡಿದರೆ ಈ ಕೆಲಸಗಳು ನಿಂತುಹೋಗುವ ಭೀತಿ ಸಚಿವರನ್ನು ಕಾಡುತ್ತಿದೆ. ಆದ್ದರಿಂದ, ಸಚಿವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಕನಿಷ್ಠ ರಾಜ್ಯಸಭೆ ಚುನಾವಣೆ ಮುಗಿಯುವ ಜೂನ್ 18ರವರೆಗೆ ರಾಜೀನಾಮೆಯನ್ನು ಮುಂದೂಡುವಂತೆ ಮನವಿ ಮಾಡಿದ್ದಾರೆ. ಆದರೆ, ಹೈಕಮಾಂಡ್ ನಾಯಕರ ಸೂಚನೆಯನ್ನು ಒಪ್ಪಿಕೊಂಡಿರುವ ಸಿದ್ದರಾಮಯ್ಯ, ತಮ್ಮ ನಿರ್ಧಾರದಿಂದ ಹಿಂದೆ ಸರಿಯಲು ನಿರಾಕರಿಸಿದ್ದಾರೆ. ಯಾವುದೇ ಒತ್ತಡಕ್ಕೂ ಮಣಿಯದೆ ನಾಳೆಯೇ ರಾಜೀನಾಮೆ ನೀಡುವ ತಮ್ಮ ದೃಢ ನಿಲುವನ್ನು ಅವರು ಸಚಿವರುಗಳಿಗೆ ಸ್ಪಷ್ಟಪಡಿಸಿದ್ದಾರೆ. ಹೊಸ ಫೈಲ್‌ಗಳನ್ನು ಚಲಿಸದಂತೆ ಸೂಚಿಸಿದ್ದಾರೆ. ರಣದೀಪ್ ಸಿಂಗ್ ಸುರ್ಜೆವಾಲಾ ಅವರು ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಈ ಕುರಿತು ಮತ್ತಷ್ಟು ಚರ್ಚೆ ನಡೆಯುವ ನಿರೀಕ್ಷೆ ಇದೆ. ಇದೆಲ್ಲದರ ನಡುವೆ ಕೆಲ ಸಚಿವರಿಗೆ ಸ್ಥಾನ ಕಳೆದುಕೊಳ್ಳುವ ಆತಂಕವೂ ಇದೆ. ಸಿಎಂ ಬದಲಾದರೆ ಸಂಪುಟ ಕೂಡ ಪುನಾರಚನೆ ಆಗಬೇಕಾಗುತ್ತೆ.

ನೋಡಿರಿ

