‘ಇದೇ ನನ್ನ ಕೊನೇ ಚುನಾವಣೆ.. ಹುಟ್ಟೂರಿನಲ್ಲೇ ಸ್ಪರ್ಧಿಸಿ ನಿವೃತ್ತಿ’ – ಸಿದ್ದರಾಮಯ್ಯ ‘ಎರಡು ಕನಸು’!

‘ಇದೇ ನನ್ನ ಕೊನೇ ಚುನಾವಣೆ.. ಹುಟ್ಟೂರಿನಲ್ಲೇ ಸ್ಪರ್ಧಿಸಿ ನಿವೃತ್ತಿ’ – ಸಿದ್ದರಾಮಯ್ಯ ‘ಎರಡು ಕನಸು’!

ಇಷ್ಟು ದಿನ ಕ್ಷೇತ್ರದ ವಿಚಾರವಾಗಿ ಸುದ್ದಿಯಾಗಿದ್ದ ಸಿದ್ದರಾಮಯ್ಯ ಈಗ ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡ್ತೀನಿ ಅಂತಾ ಹೇಳುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಮತ್ತೊಂದೆಡೆ ಇದೇ ನನ್ನ ಕೊನೆಯ ಚುನಾವಣೆ ಎಂಬುದನ್ನೂ ಪುನರುಚ್ಚರಿಸಿದ್ದಾರೆ.

ಇದನ್ನೂ ಓದಿ: ಚುನಾವಣಾ ದಿನಾಂಕ ಘೋಷಣೆ ಬಳಿಕ ನೀತಿ ಸಂಹಿತೆ ಜಾರಿ – ಸಿಎಂ ಸರ್ಕಾರಿ ಕಾರ್ಯಕ್ರಮಗಳು ರದ್ದು

ತಿಂಗಳಿಂದ ಕ್ಷೇತ್ರ ಹುಡುಕಾಟದಲ್ಲಿದ್ದ ಸಿದ್ದರಾಮಯ್ಯಗೆ ಕೊನೆಗೂ ವರುಣಾ ಕ್ಷೇತ್ರದಿಂದ ಟಿಕೆಟ್ ಘೋಷಣೆಯಾಗಿದೆ. ಆದರೆ ವರುಣಾದಲ್ಲಿ ಮ್ಯಾಚ್ ಫಿಕ್ಸಿಂಗ್ ಬಾಂಬ್ ಸಿಡಿಸಿರುವ ಸಿದ್ದು, ಕೋಲಾರ ಕ್ಷೇತ್ರದಿಂದಲೂ ಸ್ಪರ್ಧೆ ಮಾಡುತ್ತೇನೆ ಎಂದು ಮಂಗಳವಾರ ಘೋಷಣೆ ಮಾಡಿದ್ದರು. ಬುಧವಾರ (ಮಾರ್ಚ್ 29)ದಂದು ಮೈಸೂರಿನಲ್ಲಿ (Mysore) ಮಾತನಾಡಿದ ಕಾಂಗ್ರೆಸ್ (Congress)​ ನಾಯಕ ಸಿದ್ದರಾಮಯ್ಯ ಇದೇ ನನ್ನ ಕೊನೆ ಚುನಾವಣೆ, ಇದೇ ಕೊನೆ ಚುನಾವಣೆ ಎಂದು ‌ಎರಡೆರೆಡು ಬಾರಿ ಉಚ್ಚರಿಸಿದ್ದಾರೆ. ಈ ಚುನಾವಣೆ ನಂತರ ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುತ್ತಿದ್ದೇನೆ. ಹುಟ್ಟೂರಿನ ಕ್ಷೇತ್ರದಿಂದಲೇ ಸ್ಪರ್ಧಿಸಿ ನಿವೃತ್ತಿಯಾಗಬೇಕೆಂಬುದು ನನ್ನ ಬಯಕೆ. ಹೀಗಾಗಿ ನಾನು ವರುಣ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದೇನೆ ಎಂದಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ ಕಳೆದ ಬಾರಿ ಚಾಮುಂಡೇಶ್ವರಿ ಕ್ಷೇತ್ರದ ಬಗ್ಗೆ ನನಗೆ ಸ್ವಲ್ಪ ಅನುಮಾನ ಇತ್ತು. ಹೀಗಾಗಿ ಬಾದಾಮಿ ಕ್ಷೇತ್ರದಲ್ಲೂ ಸ್ಪರ್ಧೆ ಮಾಡಿದೆ. ಈ ಬಾರಿ ನನಗೆ ಯಾವ ಅನುಮಾನಗಳು ಇಲ್ಲ. ಆದರೇ ಕೋಲಾರದ ಜನ ಒತ್ತಾಯದಿಂದ ಕರೆಯುತ್ತಿರುವ ಕಾರಣ ಅಲ್ಲೂ ನಿಲ್ಲಲೂ ಟಿಕೆಟ್ ಕೊಡಿ ಎಂದು ಕೇಳಿದ್ದೇನೆ. ಅಂತಿಮ ತೀರ್ಮಾನ ಹೈ ಕಮಾಂಡ್​ಗೆ ಬಿಟ್ಟದ್ದು‌ ಎಂದಿದ್ದಾರೆ. ನನಗೆ ಕ್ಷೇತ್ರ ಇಲ್ಲ ಎನ್ನುವುದೆಲ್ಲಾ ಅರ್ಥ ಇಲ್ಲದ ಮಾತು. ನನಗೆ 25 ಕ್ಷೇತ್ರದಲ್ಲೂ ಗೆಲ್ಲುವ ಅವಕಾಶ ಇರುವ ಕಾರಣ ನನಗೆ ಆಹ್ವಾನಿಸುತ್ತಿದ್ದಾರೆ. ನನ್ನ ಎದುರಾಳಿ ಬಗ್ಗೆ ನಾನು ಯೋಚನೆ ಮಾಡುವುದಿಲ್ಲ. ಜನರ ಆಶೀರ್ವಾದದಿಂದ ನಮ್ಮ ಗೆಲುವು ನಿರ್ಧಾರವಾಗುತ್ತೆ. ಇಂದು ರಾಜ್ಯ ವಿಧಾನಸಭೆಗೆ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಕಾಂಗ್ರೆಸ್ ಪಕ್ಷ ಚುನಾವಣೆಗೆ ಸಿದ್ಧವಾಗಿದೆ. ಚುನಾವಣೆ ಮುಕ್ತ, ಪಾರದರ್ಶಕವಾಗಿ ನಡೆಯಬೇಕು. ಚುನಾವಣೆಯ ವೇಳೆ ನಡೆಯುವ ಅಕ್ರಮಗಳನ್ನು ತಡೆಯಬೇಕು. ಆಡಳಿತದ ಪಕ್ಷ ಸೇರಿ ಯಾರೇ ಅಕ್ರಮ ನಡೆಸಿದ್ರೂ ಕ್ರಮಕೈಗೊಳ್ಳಬೇಕು. ಆಡಳಿತ ಪಕ್ಷದವರು ಪ್ರಭಾವ ಬೀರುವ ಅವಕಾಶ ಇರುತ್ತೆ. ಅಕ್ರಮಗಳನ್ನು ತಡೆಯುವ ಕೆಲಸ ಆಗಬೇಕು ಎಂದು ಒತ್ತಾಯಿಸಿದರು.

suddiyaana