ಆವರಿಸಿಕೊಂಡಿದೆ ಚಳಿ.. ಆಗಾಗ ಬೀಳುತ್ತಿದೆ ಮಳೆ – ಕರ್ನಾಟಕ ಈಗ ಥಂಡಾ ಥಂಡಾ ಕೂಲ್.. ಕೂಲ್..
ಸಂಜೆ ವೇಳೆ ತಂಪಾದ ಗಾಳಿ.. ರಾತ್ರಿ ವೇಳೆ ಮೈಕೊರೆಯುವ ಚಳಿ.. ಹಗಲಲ್ಲಿ ಆಗಾಗ ಬೀಳುವ ತುಂತುರು ಮಳೆ.. ರಾಜ್ಯದಲ್ಲಿ ಈಗ ಕೂಲ್ ಕೂಲ್ ವಾತವರಣ.. ಕರ್ನಾಟಕದಲ್ಲಿ ಚಳಿ ಆರಂಭವಾಗಿದ್ದು, ಡಿಸೆಂಬರ್ 17 ರಿಂದ ಎರಡು ದಿನಗಳ ಕಾಲ ಕರಾವಳಿಯಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ: ಕೊಬ್ಬರಿ ಬೆಲೆ ಏರಿಕೆಗೆ ಆಗ್ರಹಿಸಿ ಪಾದಯಾತ್ರೆಗೆ ಸಜ್ಜಾದ ಹೆಚ್.ಡಿಕೆ – ಕುಮಾರಣ್ಣದ ಯಾತ್ರೆ ಹಿಂದಿರುವ ಗಿಮಿಕ್ ಏನು?
ಕರ್ನಾಟಕದಾದ್ಯಂತ ಮೈಕೊರೆವ ಚಳಿ ಆರಂಭವಾಗಿದ್ದು, ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಡಿಸೆಂಬರ್ 17 ರಿಂದ ಎರಡು ದಿನಗಳ ಕಾಲ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಮಳೆಯಾಗಲಿದೆ. ಹಾಗೆಯೇ ಬೆಳಗಾವಿ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗದಲ್ಲೂ ಮಳೆಯಾಗುವ ಸಾಧ್ಯತೆ ಇದೆ. ಸುಳ್ಯದಲ್ಲಿ ಬುಧವಾರ ಮಳೆಯಾಗಿದೆ, ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ, ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆಯಲಿದೆ. ವಿಜಯಪುರದಲ್ಲಿ 12.6 ಡಿಗ್ರಿ ಸೆಲ್ಸಿಯಸ್ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿರಲಿದ್ದು, ಮಳೆಬರುವ ಸಾಧ್ಯತೆ ಕಡಿಮೆ ಇದೆ.
ಬೆಳಗಾವಿ ವಿಮಾನ ನಿಲ್ದಾಣ, ವಿಜಯಪುರ, ಧಾರವಾಡ, ಹಾವೇರಿ, ಗದಗ, ಕಲಬುರಗಿ, ಕೊಪ್ಪಳ ರಾಯಚೂರು ಭಾಗದಲ್ಲಿ 17 ಡಿಗ್ರಿ ಸೆಲ್ಸಿಯಸ್ಗಿಂತಲೂ ಕಡಿಮೆ ತಾಪಮಾನ ದಾಖಲಾಗಿದೆ. ವಿಜಯಪುರದಲ್ಲಿ 12, ಚಿಕ್ಕಮಗಳೂರಿನಲ್ಲಿ 15 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಈ ಮೂಲಕ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಒಳನಾಡು ಭಾಗದಲ್ಲಿ ಚಳಿ ಆವರಿಸುತ್ತಿದೆ. ದಿನೇ ದಿನೇ ವಾತಾವರಣದಲ್ಲಿನ ತಂಪು ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿ ಅಲ್ಲಲ್ಲಿ ಹಿಂಗಾರು ಮಳೆ ಚುರುಕುಗೊಳ್ಳುವ ಜೊತೆಗೆ ಚಳಿ ಹೆಚ್ಚಾಗುವ ಮುನ್ಸೂಚನೆ ದೊರೆತಿದೆ. ಉತ್ತರ ಒಳನಾಡಿನಲ್ಲಿ ಈ ವಾರಪೂರ್ತಿ ಶುಷ್ಕ ವಾತಾವರಣವೇ ಇರಲಿದೆ.