ಇಂದು ರಾತ್ರಿಯೊಳಗೆ ಮುಖ್ಯಮಂತ್ರಿ ಆಯ್ಕೆ – ಯಾರಿಗೆ ಸಿಗಲಿದೆ ಸಿಎಂ ಪಟ್ಟ?

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿ ಆಯ್ಕೆ ಇಂದು ರಾತ್ರಿಯೊಳಗೆ ನಡೆಯುವ ನಿರೀಕ್ಷೆ ಇದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾನುವಾರ ರಾತ್ರಿ ನೂತನ ಸಿಎಲ್ ಪಿ ಲೀಡರ್ ಆಯ್ಕೆಯ ಜವಾಬ್ದಾರಿಯನ್ನು ಕಾಂಗ್ರೆಸ್ ಹೈಕಮಾಂಡ್ ಗೆ ಬಿಟ್ಟು ಕೊಡುವ ತೀರ್ಮಾನ ಕೈಗೊಳ್ಳಲಾಗಿತ್ತು.
ಇದನ್ನೂ ಓದಿ:ಈ ಮಂಚದ ಬೆಲೆ ಬರೋಬ್ಬರಿ 1,12,075 ರೂಪಾಯಿ – ಅಂತಹ ವಿಶೇಷತೆ ಏನೀದೆ ಗೊತ್ತಾ?
ಎಐಸಿಸಿ ನೇಮಿಸಿದ್ದ ಸುಶೀಲ್ ಕುಮಾರ್ ಶಿಂಧೆ ನೇತೃತ್ವದ ವೀಕ್ಷಕರ ಸಮಿತಿ ರಾಜ್ಯದ ಕಾಂಗ್ರೆಸ್ ಶಾಸಕರ ಅಭಿಪ್ರಾಯ ಸಂಗ್ರಹಿಸಿದೆ. ವೀಕ್ಷಕರ ಸಮಿತಿ ತನ್ನ ವರದಿಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಲ್ಲಿಕೆ ಮಾಡಿದ ನಂತರ ಸಿಎಂ ಆಯ್ಕೆ ಪ್ರಕ್ರಿಯೆ ದೆಹಲಿಯಲ್ಲಿ ನಡೆಯಲಿದೆ. ಅದಕ್ಕೂ ಮುಂಚಿತವಾಗಿ ಕರ್ನಾಟಕದಲ್ಲಿ ಆಗಿರುವ ಬೆಳವಣಿಗೆಯ ಬಗ್ಗೆ ಖರ್ಗೆಯವರು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ವಿವರಿಸಿ ಸಲಹೆ ಪಡೆಯುವ ನಿರೀಕ್ಷೆ ಇದೆ.
ಇಂದು ಮಧ್ಯಾಹ್ನ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಮಧ್ಯಾಹ್ನ 1 ಗಂಟೆ ಬಳಿಕ ದೆಹಲಿಗೆ ತೆರಳಲಿದ್ದಾರೆ. ಬಹುತೇಕ ಅಧಿಕಾರ ಹಂಚಿಕೆ ಸೂತ್ರಕ್ಕೆ ಹೈಕಮಾಂಡ್ ಮೊರೆ ಹೋಗುವ ಸಾಧ್ಯತೆ ಇದೆ. ಲೋಕಸಭೆ ಚುನಾವಣೆ ದೃಷ್ಟಿಯಿಂದ ಅಧಿಕಾರ ಹಂಚಿಕೆ ಸೂತ್ರ ಪಾಲನೆಗೆ ಹೆಚ್ಚಿನ ಒತ್ತು ಕೊಡುವ ಸಾಧ್ಯತೆ ಇದೆ. ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಇಬ್ಬರನ್ನೂ ಕೂರಿಸಿಕೊಂಡು ಮಲ್ಲಿಕಾರ್ಜುನ ಖರ್ಗೆ ಮಾತುಕತೆ ನಡೆಸಲಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಗೆದ್ದು ಬೀಗಿದ ನಂತರ ನೂತನ ಸಿಎಂ ಯಾರಾಗುತ್ತಾರೆ ಎಂಬ ಕುತೂಹಲ ಎಲ್ಲೆಡೆ ಮನೆಮಾಡಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಾರಾ ಅಥವಾ ಡಿ.ಕೆ. ಶಿವಕುಮಾರ್ ಸಿಎಂ ಆಗುತ್ತಾರಾ ಎನ್ನುವ ಪ್ರಶ್ನೆಗೆ ಇಂದು ರಾತ್ರಿ ಒಳಗೆ ಸ್ಪಷ್ಟ ಉತ್ತರ ಸಿಗಲಿದೆ.