ಮುಜರಾಯಿ ಜಮೀನು ಏನಾಯ್ತು?- ದೇವಸ್ಥಾನಗಳ ಹೆಸರಿಗೆ ಬಂದಿದ್ದೆಷ್ಟು ಆಸ್ತಿ?
ರಾಮಲಿಂಗಾ ರೆಡ್ಡಿ ಪ್ಲ್ಯಾನ್ ಏನು?
ರಾಜ್ಯದ ಮುಜರಾಯಿ ದೇವಸ್ಥಾನಗಳ ವ್ಯಾಪ್ತಿಯಲ್ಲಿ ಬರುವ ಸಾವಿರಾರು ಎಕರೆ ಜಮೀನು ಖಾಸಗಿ ಒತ್ತುವರಿದಾರರ ಪಾಲಾಗಿದ್ದವು. ದೇವಸ್ಥಾನದ ಆಸ್ತಿಯನ್ನು ಬೇರೆ ಬೇರೆ ಸಂಸ್ಥೆಗಳು, ಟ್ರಸ್ಟ್ಗಳು ಹಾಗೂ ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದರು. ಇದನ್ನು ವಾಪಸ್ ಮುಜರಾಯಿ ದೇಗುಲಗಳ ತೆಕ್ಕೆಗೆ ತೆಗೆದುಕೊಳ್ಳುವ ಗೋಜಿಗೆ ಹಿಂದಿನ ಸರ್ಕಾರಗಳು ಹೋಗಿರಲಿಲ್ಲ.. ಯಾಕಂದ್ರೆ ಹೆಚ್ಚಿನ ಮುಜರಾಯಿ ಸಚಿವರಿಗೆ ಮುಜರಾಯಿ ಇಲಾಖೆ ಅಂದ್ರೆ ಏನೂ ಕೆಲಸವಿಲ್ಲದ ಇಲಾಖೆ ಎಂಬಂತಾಗಿತ್ತು.. ಆದ್ರೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಮುಜರಾಯಿ ಇಲಾಖೆ ಖಾತೆಯನ್ನು ವಹಿಸಿಕೊಂಡ ರಾಮಲಿಂಗಾ ರೆಡ್ಡಿ ಮಾತ್ರ ಮುಜರಾಯಿ ಖಾತೆಯಲ್ಲೂ ಹೇಗೆ ಕೆಲಸ ಮಾಡಿ ತೋರಿಸಬಹುದು ಎನ್ನುವುದನ್ನು ಈಗ ಜನರೆದುರು ಸಾಬೀತುಪಡಿಸಿದ್ದಾರೆ.. ಹಲವು ಸರ್ಕಾರಗಳಲ್ಲಿ ವಿವಿಧ ಖಾತೆಗಳನ್ನು ನಿಭಾಯಿಸಿದ್ದ ರಾಮಲಿಂಗಾ ರೆಡ್ಡಿಯವರು ಈ ಬಾರಿ ಸಾರಿಗೆಯ ಜೊತೆ ಮುಜರಾಯಿ ಖಾತೆ ಸಿಕ್ಕಾಗ, ಅಲ್ಲೂ ತನ್ನ ಛಾಪು ಮೂಡಿಸವಲ್ಲಿ ಯಶಸ್ವಿಯಾಗಿದ್ದಾರೆ.. 2008ರಿಂದ ಕೆಲವೇ ಕೆಲವು ಎಕರೆಗಳನ್ನು ಮಾತ್ರ ಖಾಸಗಿ ಒತ್ತುವರಿಯಿಂದ ರಕ್ಷಿಸಲಾಗುತ್ತಿತ್ತು.. ಅಂದರೆ ಸಹಜ ಪ್ರಕ್ರಿಯೆ ಮೂಲಕ ಒತ್ತುವರಿ ತೆರವು ನಡೀತಿತ್ತೆ ವಿನಃ ಅದನ್ನೊಂದು ಸ್ವೆಷಲ್ ಡ್ರೈವ್ ರೀತಿಯಲ್ಲಿ ಮಾಡಿರಲಿಲ್ಲ.. ಆದ್ರೆ 2023ರ ನಂತರ ಮುಜರಾಯಿ ಆಸ್ತಿಗಳ ಒತ್ತುವರಿ ತೆರವಿನ ವೇಗವೇ ಬದಲಾಗಿ ಹೋಗಿದೆ.. 2023ರಲ್ಲಿ 6052 ಎಕರೆ ಜಮೀನಿನ ಒತ್ತುವರಿ ತೆರವು ಮಾಡಿಸಿದ ರೆಡ್ಡಿಯವರು, 2024ರಲ್ಲಿ 5446 ಎಕರೆಯಷ್ಟು ಜಮೀನುಗಳನ್ನು ವಾಪಸ್ ಮುಜರಾಯಿ ದೇವಸ್ಥಾನಗಳ ವ್ಯಾಪ್ತಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.. ಅಂದರೆ ಎಱಡೇ ವರ್ಷಗಳ ಅಂತರದಲ್ಲಿ ಸರಿಸುಮಾರು 12 ಸಾವಿರ ಎಕರೆಯಷ್ಟು ದೇಗುಲಗಳ ಆಸ್ತಿ ವಾಪಸ್ ದೇಗುಲಗಳ ಹೆಸರಿಗೆ ಸೇರಿದೆ.. 2008ರಿಂದ 2024ರವರೆಗೆ ಲೆಕ್ಕ ಹಾಕಿ ನೋಡಿದರೆ, 15,413 ಎಕರೆ 17.08 ಗುಂಟೆಯಷ್ಟು ಜಮೀನನ್ನು ಸರ್ಕಾರ ವಾಪಸ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.. ಅಂದರೆ ಒಟ್ಟು ಒತ್ತುವರಿ ತೆರವುಗೊಳಿಸಿದ ದೇಗುಲಗಳ ಜಮೀನುಗಳಲ್ಲಿ ಕಳೆದ ಕೇವಲ ಎರಡು ವರ್ಷಗಳಲ್ಲಿ ಒಟ್ಟು ಶೇ.75ಕ್ಕೂ ಹೆಚ್ಚು ಪಾಲಿನ ಒತ್ತುವರಿಯನ್ನು ತೆರವು ಮಾಡಲಾಗಿದೆ.. ಅಷ್ಟೇ ಅಲ್ಲ ದೇವಸ್ಥಾನ ಆಸ್ತಿಗಳಿಗೆ ಕಂದಾಯ ಇಲಾಖೆಯಿಂದ ಸೂಕ್ತ ದಾಖಲೆಗಳನ್ನು ಸೃಷ್ಟಿಸಿ, ದೇವಸ್ಥಾನಗಳ ಅಧೀನಕ್ಕೆ ನೀಡಲಾಗಿದೆ. ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿದ 34,564 ದೇವಸ್ಥಾನಗಳ ಪೈಕಿ ಬಹುತೇಕ ದೇವಸ್ಥಾನಗಳಿಗೆ ಸರ್ಕಾರ ಮತ್ತು ದಾನಿಗಳು ನೀಡಿದ ಆಸ್ತಿಯಿದೆ. ಆದರೆ, ಬಹುತೇಕ ದೇವಸ್ಥಾನಗಳ ಆಸ್ತಿ ಖಾಸಗಿ ವ್ಯಕ್ತಿಗಳ ಪಾಲಾಗಿದ್ದವು. ಇದೀಗ ಸರ್ವೆ ನಡೆಸಿ, ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಸುಮಾರು 12 ಸಾವಿರ ಎಕರೆಯಷ್ಟು ಜಮೀನುಗಳನ್ನು ಮರು ವಶಪಡಿಸಿಕೊಳ್ಳಲಾಗಿದೆ. ಅಷ್ಟೇ ಅಲ್ಲದೆ ದಾಖಲೆಗಳು ಇಲ್ಲದೇ ಇದ್ದ ಜಮೀನುಗಳಿಗೆ ಸೂಕ್ತ ದಾಖಲೆ ಸೃಷ್ಟಿಸಿಕೊಡುವಲ್ಲಿ ಕಂದಾಯ ಇಲಾಖೆ ಮತ್ತು ಮುಜರಾಯಿ ಇಲಾಖೆ ಸಕ್ಸಸ್ ಆಗಿದೆ.
ಬಿಜೆಪಿಗೆ ಟಕ್ಕರ್ ಕೊಟ್ಟ ರಾಮಲಿಂಗ ರೆಡ್ಡಿ !
ದೇವರು, ಧರ್ಮದ ರಕ್ಷಣೆಯೇ ನಮ್ಮ ಅಜೆಂಡಾ ಎಂದು ಬಿಜೆಪಿ ನಾಯಕರು ಸದಾ ಕಾಲ ಹೇಳ್ತಿರುತ್ತಾರೆ.. ಅದೇ ತಮ್ಮ ಬದ್ಧತೆ ಎಂದು ಹೇಳಿಕೊಳ್ತಾರೆ.. ಆದರೆ ಬಿಜೆಪಿಯಿಂದಲೂ ಮಾಡಲು ಆಗದ ಕೆಲಸವನ್ನು ನಾವು ಮಾಡಿದ್ದೇವೆ. ಧರ್ಮ ಬೇರೆ ರಾಜಕೀಯ ಬೇರೆ, ಧರ್ಮ ಭಾವನೆಗೆ ಸಂಬಂಧಿಸಿದ್ದು ಅದರೊಡನೆ ರಾಜಕೀಯ ಬೆರೆಸಿ, ಕಿಚ್ಚು ಹಚ್ಚಿಸುವ ಕೆಲಸವನ್ನು ಇನ್ನಾದರೂ ಬಿ.ಜೆ.ಪಿಯವರು ಬಿಡಬೇಕು” ಎಂದು ದೇಗುಲಗಳ ಜಮೀನು ತೆರವುಗೊಳಿಸಿದ್ದರ ಬಗ್ಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ವಕ್ಸ್ ಮಂಡಳಿ ರೈತರ ಜಮೀನುಗಳಿಗೆ ವಕ್ಸ್ ಆಸ್ತಿ ಎಂದು ನೋಟಿಸ್ ನೀಡಿತ್ತು.. ಅದನ್ನು ವಿರೋಧಿಸಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ.. ಹೋರಾಟ ಈಗಲೂ ಮುಂದವರೆದಿದೆ.. ಇದರ ನಡುವೆ ಸದ್ದಿಲ್ಲದೆ ಮುಜರಾಯಿ ಇಲಾಖೆಯ ಸಚಿವರಾದ ರಾಮಲಿಂಗಾರೆಡ್ಡಿ, ಅಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ಕೊಟ್ಟು ಮುಜರಾಯಿ ವ್ಯಾಪ್ತಿಯ ದೇವಾಲಯಗಳ ಸಾವಿರಾರು ಎಕರೆ ಜಮೀನು ಒತ್ತುವರಿಯಾಗಿದ್ದು, ಅವುಗಳ ತೆರವುಗೊಳಿಸಲು ಸ್ಪಷ್ಟ ನಿರ್ದೇಶನ ನೀಡಿದ್ದರು. ದೇವಾಲಯಗಳ ಜಾಗವನ್ನು ಒತ್ತುವರಿ ಮಾಡಲಾಗಿದ್ದು, ಹಲವು ವರ್ಷಗಳಿಂದ ಮನೆ, ಕಟ್ಟಡಗಳನ್ನು ನಿರ್ಮಿಸಿ ಹಲವರು ವಾಸವಾಗಿದ್ದರೆೃು. ಮೊದಲಿಗೆ ಆಸ್ತಿಗಳ ಪತ್ತೆ ಕಾರ್ಯ ನಡೆಸಿ, ಮುಜರಾಯಿ ದೇವಾಲಯಗಳ ಆಸ್ತಿಗೆ ಬೇಲಿ ಹಾಕಿ ರಕ್ಷಿಸುವಂತೆ ಇಲಾಖೆ ಆಯುಕ್ತರು ಸೂಚನೆ ನೀಡಿದ್ದರು. ಬಳಿಕ ಒತ್ತುವರಿ ಭೂಮಿಯನ್ನು ತೆರವು ಮಾಡುವ ನಿಟ್ಟಿನಲ್ಲಿ ಕಾನೂನು ಹೋರಾಟ ನಡೆಸುವ ಸಂಬಂಧ ದಾಖಲೆಗಳನ್ನು ಕ್ರೋಡೀಕರಿಸುವಂತೆ ಸೂಚಿಸಿದ್ದರು. ಸದ್ಯ ಎಲ್ಲ ಮಾಹಿತಿ ಇದೀಗ ಮುಜರಾಯಿ ಅಧಿಕಾರಿಗಳಿಗೆ ಲಭ್ಯವಾಗಿದ್ದು, ಒಟ್ಟಾರೆಯಾಗಿ ಇದುವರೆಗೆ 15,413 ಎಕರೆ ದೇವಸ್ಥಾನದ ಆಸ್ತಿ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಿದ್ರೆ ಯವ್ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ದೇವರ ಆಸ್ತಿಯನ್ನ ರಕ್ಷಣೆ ಮಾಡಿದ್ದಾರೆ ಅನ್ನೋದನ್ನೂ ಹೇಳ್ತೀನಿ..
ದೇವರ ಸ್ವತ್ತು ರಕ್ಷಣೆ
ಜಿಲ್ಲೆ ವಶಕ್ಕೆ ಪಡೆದ ಆಸ್ತಿ (ಎಕರೆ)
ಬೆಳಗಾವಿ 868 ಎಕರೆ 36 ಗುಂಟೆ
ಬಾಗಲಕೋಟೆ 8 ಎಕರೆ 37 ಗುಂಟೆ.
ಕಲಬುರಗಿ 1172 ಎಕರೆ 13 ಗುಂಟ.
ಬೀದರ್ 446 ಎಕರೆ 11 ಗುಂಟೆ.
ಗದಗ 613 ಎಕ್ಕರೆ 13 ಗುಂಟೆ.
ಧಾರವಾಡ 7 ಎಕರೆ 22ಗುಂಟೆ
ಉತ್ತರ ಕನ್ನಡ 372 ಎಕರೆ 22 ಗುಂಟೆ
ಹಾವೇರಿ 758 ಎಕರೆ
ಬಳ್ಳಾರಿ 50 ಎಕರೆ 38.8 ಗುಂಟೆ
ಚಿತ್ರದುರ್ಗ 86 ಎಕರೆ 24 ಗುಂಟೆ
ದಾವಣಗೆರೆ 18 ಎಕರೆ 11 ಗುಂಟೆ
ಶಿವಮೊಗ್ಗ 552 ಎಕರೆ 7.08 ಗುಂಟೆ
ಉಡುಪಿ 271 ಎಕರೆ 32 ಕುಂಟೆ
ಚಿಕ್ಕಮಂಗಳೂರು 1435 ಎಕರೆ 12 ಗುಂಟೆ
ತುಮಕೂರು 1123 ಎಕರೆ 30 ಗುಂಟೆ
ಕೋಲಾರ 616 ಎಕರೆ 16 ಗುಂಟೆ
ಬೆಂಗಳೂರು ನಗರ 30 ಎಕರೆ
ಬೆಂಗಳೂರು ಗ್ರಾಮಾಂತರ 522 ಎಕರೆ 24 ಗುಂಟೆ
ಮಂಡ್ಯ 1070 ಎಕರೆ 10 ಗುಂಟೆ
ಹಾಸನ 1633 ಎಕರೆ 31 ಗುಂಟೆ
ದಕ್ಷಿಣ ಕನ್ನಡ 58 ಎಕರೆ 26.6 ಗುಂಟೆ
ಕೊಡಗು 469 ಎಕರೆ 31.2 ಗುಂಟೆ
ಮೈಸೂರು 1164 ಎಕರೆ 17 ಗುಂಟೆ
ಚಾಮರಾಜನಗರ 436 ಎಕರೆ 25 ಗುಂಟೆ
ರಾಮನಗರ 843 ಎಕರೆ 25 ಗುಂಟೆ
ಯಾದಗಿರಿ 387 ಎಕರೆ 8 ಗುಂಟೆ
ರಾಯಚೂರು 78 ಎಕರೆ 14 ಗುಂಟೆ
ವಿಜಯನಗರ 314 ಎಕರೆ 36.4 ಗುಂಟೆ.
ಹೀಗೆ ಒಟ್ಟು ಕರ್ನಾಟಕದಲ್ಲಿ ಒತ್ತುವರಿ ಮಾಡಿಕೊಂಡು ದೇವಸ್ಥಾನ ಕೈಬಿಟ್ಟು ಹೋಗಿದ್ದ ಜಮೀನುಗಳನ್ನು ಹಂತ ಹಂತವಾಗಿ ರಕ್ಷಣೆ ಮಾಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ.. ರಕ್ಷಣೆ ಮಾಡಿದ ಜಮೀನನ್ನು, ದೇವಸ್ಥಾನದ ಹೆಸರಿಗೆ ಮಾಡಿಕೊಡಲಾಗಿದೆ.. ಸರ್ಕಾರದ ಈ ಸಾಧನೆಗೆ ಅರ್ಚಕರು ಸೇರಿದಂತೆ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.