ವರುಣನ ಅಬ್ಬರಕ್ಕೆ ರಾಜ್ಯದಲ್ಲಿ ಇಬ್ಬರು ಬಲಿ – ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿ ,ಹೈ ಅಲರ್ಟ್!

ರಾಜ್ಯದ ಹಲವು ಜಿಲ್ಲೆಗಳಲ್ಲಿ ಸೋಮವಾರ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಇಬ್ಬರು ಬಲಿಯಾಗಿದ್ದಾರೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಜಿ. ಬೆಂಚಮಟ್ಟಿ ಗ್ರಾಮದಲ್ಲಿ ನಿನ್ನೆ ಸಂಜೆ ಸಿಡಿಲು ಬಡಿದು ದೇವರಾಯನಗೌಡ ಪಾಟೀಲ (50) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಸಮೀಪದ ಅರಹತೊಳಲು ಗ್ರಾಮದಲ್ಲಿ ಮಳೆಯ ಅಬ್ಬರಕ್ಕೆ ಅಡಿಕೆ ತೋಟದ ಮನೆಗೆ ಹಾಕಿದ್ದ ಹಂಚುಗಳು ಹಾರಿ ಹೋಗಿವೆ. ಇದನ್ನು ಕಂಡು ಗಾಬರಿಗೊಂಡ ಆರ್. ಲೋಕೇಶ (52) ಎಂಬುವವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: LPG ಬಳಕೆದಾರರಿಗೆ ಬಿಗ್ ಶಾಕ್! – ಮೇ 1 ರಿಂದ ಹೊಸ ರೂಲ್ಸ್ ಜಾರಿ!
ರಾಯಚೂರು ಜಿಲ್ಲೆಯ ಹಳೆ ಕೆರೆ ಎಂಬಲ್ಲಿ ಸಿಡಿಲು ಬಡಿದು 8 ಕುರಿಗಳು ಹಾಗೂ 3 ಕುರಿಮರಿಗಳು ಮೃತಪಟ್ಟಿವೆ. ಗದಗ ಜಿಲ್ಲೆಯ ಮುಂಡರಗಿಯಲ್ಲಿ ಬಿರುಗಾಳಿ ಸಹಿತ ಮಳೆಗೆ ಖಾಸಗಿ ಕಂಪನಿಯ ಮೊಬೈಲ್ ಟವರ್ ಕಂಬ ಮುರಿದು ಬಿದ್ದಿದೆ. ಶಿವಮೊಗ್ಗ ಜಿಲ್ಲೆಯಾದ್ಯಂತ ಸಾವಿರಾರು ಅಡಿಕೆ ಮರಗಳು ನೆಲಸಮವಾಗಿವೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ ಮುಂದಿನ ಮೂರು ದಿನಗಳ ಕಾಲ ರಾಜ್ಯದ ಹಲವೆಡೆ ಭಾರೀ ಮಳೆ ಹಾಗೂ ಬಿರುಗಾಳಿ ಸಂಭವಿಸಲಿದೆ. ವಿಶೇಷವಾಗಿ ಆಲಿಕಲ್ಲು ಮಳೆ ಬೀಳುವ ಸಾಧ್ಯತೆ ಇರುವುದರಿಂದ ಜನರು ತೀವ್ರ ಮುನ್ನೆಚ್ಚರಿಕೆ ವಹಿಸಬೇಕೆಂದು ಎಚ್ಚರಿಸಲಾಗಿದೆ.
ಗಾಳಿಯ ವೇಗವು ಗಂಟೆಗೆ 40 ರಿಂದ 50 ಕಿಲೋಮೀಟರ್ ತಲುಪುವ ಸಾಧ್ಯತೆಯಿದ್ದು, ಆಲಿಕಲ್ಲು ಮಳೆಯ ಮುನ್ಸೂಚನೆ ಇರುವುದರಿಂದ ಹವಾಮಾನ ಇಲಾಖೆಯು ಆರೆಂಜ್ ಅಲರ್ಟ್ ಘೋಷಿಸಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಲ್ಲಿ ಏಪ್ರಿಲ್ 28 ರಿಂದ 30 ರವರೆಗೆ ಮಳೆಯ ತೀವ್ರತೆ ಹೆಚ್ಚಿರಲಿದೆ. ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಏಪ್ರಿಲ್ 29 ಮತ್ತು 30 ರಂದು ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ನೋಡಿರಿ

