ವಿಧಾನಪರಿಷತ್ ಉಪಚುನಾವಣೆ – ಜಗದೀಶ್ ಶೆಟ್ಟರ್ ಸೇರಿ ಮೂವರಿಗೆ ಕಾಂಗ್ರೆಸ್ ಟಿಕೆಟ್!
ನವದೆಹಲಿ: ಕರ್ನಾಟಕ ರಾಜ್ಯ ವಿಧಾನಪರಿಷತ್ ಉಪಚುನಾವಣೆಗೆ ಸಂಬಂಧಿಸಿದಂತೆ ತೆರವಾಗಿದ್ದ ಸ್ಥಾನಗಳಿಗೆ ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳನ್ನು ಘೋಷಿಸಿದೆ.
ಸೋಮವಾರ ಸಂಜೆ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಿರುವ ಕಾಂಗ್ರೆಸ್ ಹೈಕಮಾಂಡ್ ಜಗದೀಶ್ ಶೆಟ್ಟರ್, ಬೋಸರಾಜು ಮತ್ತು ತಿಪ್ಪಣ್ಣಪ್ಪ ಕಮಕನೂರುಗೆ ಟಿಕೆಟ್ ನೀಡಿದೆ. ವಿಧಾನಸಭೆಯಿಂದ ವಿಧಾನಪರಿಷತ್‌ನ ಮೂರು ಸ್ಥಾನಗಳಿಗೆ ಇದೇ 30ರಂದು ಉಪ ಚುನಾವಣೆ ನಡೆಯಲಿದೆ. ಮಂಗಳವಾರ ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕ ಹಿನ್ನಲೆ ಸೋಮವಾರ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.
ಇದನ್ನೂ ಓದಿ: ಬೀದಿಗೆ ಬಂತು ಎಟಿಎಂ ಸರ್ಕಾರದ ಗುದ್ದಾಟ! – ನಾರದನ ತುತ್ತೂರಿ ಊದುತ್ತಿರುವುದು ಯಾರು? – ಬಿಜೆಪಿ ಟ್ವೀಟ್
ಬಿಜೆಪಿಯಿಂದ ಕಾಂಗ್ರೆಸ್ ಸೇರ್ಪಡೆಗೊಂಡು ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮೇಲೆ ಕಾಂಗ್ರೆಸ್ ವಿಶೇಷ ಕಾಳಜಿ ತೋರಿದ್ದು ಐದು ವರ್ಷದ ಅವಧಿಯ ಸ್ಥಾನವನ್ನು ಅವರಿಗೆ ಬಿಟ್ಟುಕೊಟ್ಟಿದೆ. ಜೂನ್ 2028 ವರೆಗೂ ಅವಧಿ ಇರುವ ಸ್ಥಾನಕ್ಕೆ ಸ್ಪರ್ಧೆ ಮಾಡಲು ಹೈಕಮಾಂಡ್ ಸೂಚನೆ ನೀಡಿದೆ.
ಇನ್ನು ಸಚಿವ ಬೋಸರಾಜು ಅವರಿಗೆ ಜೂನ್ 2024 ವರೆಗೂ ಇರುವ ಸ್ಥಾನಕ್ಕೆ, ಕೊಲಿ ಸಮಾಜದ ಮುಖಂಡ ತಿಪ್ಪಣ್ಣ ಕಮಕನೂರು ಅವರಿಗೆ ಜೂನ್ 2026 ವರೆಗೂ ಇರುವ ಸ್ಥಾನಗಳಿಗೆ ಟಿಕೆಟ್ ನೀಡಿದೆ. ಸಣ್ಣ ನೀರಾವರಿ ಸಚಿವರಾಗಿರುವ ಬೋಸರಾಜು ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಹೀಗಾಗಿ ಅವರಿಗೆ ವಿಧಾನ ಪರಿಷತ್ ಟಿಕೆಟ್ ಸಿಗುವುದು ಖಚಿತವಾಗಿತ್ತು.
ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ ಬಾಬುರಾವ್ ಚಿಂಚನಸೂರು, ಆರ್. ಶಂಕರ್ ಮತ್ತು ಲಕ್ಷ್ಮಣ ಸವದಿ ಅವರು ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರಿಂದ ಸ್ಥಾನಗಳು ತೆರವಾಗಿತ್ತು. ಈ ಮೂರು ಸ್ಥಾನಗಳ ಅಧಿಕಾರಾವಧಿ ಬೇರೆ ಬೇರೆ ಆಗಿರುವುದರಿಂದ ಪ್ರತ್ಯೇಕವಾಗಿ ಚುನಾವಣೆ ನಡೆಯಲಿದೆ. ಜೂನ್ 21ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಜೂನ್ 23 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಜೂನ್ 30ರಂದು ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯ ತನಕ ಮತದಾನ ನಡೆಯಲಿದೆ.