ಕಾರು ನಿಲ್ಲಿಸಲು 100*100 ಸೈಟು! – ಅಬ್ಬಬ್ಬಾ.. ಸರ್ಕಾರಿ ಕಾಲೇಜು ಉಪನ್ಯಾಸಕನ ಹೆಸರಲ್ಲಿ ಕೋಟಿ-ಕೋಟಿ ಆಸ್ತಿ!
ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ರಾಜ್ಯದ ಹಲವೆಡೆ ದಾಳಿ ನಡೆಸಿದ್ದಾರೆ. ಭ್ರಷ್ಟರ ಹೆಡೆಮುರಿ ಕಟ್ಟಲು ಸನ್ನದ್ಧರಾಗಿರುವ ಅಧಿಕಾರಿಗಳು ಮೈಸೂರು ಜಿಲ್ಲೆಯಲ್ಲಿ ನಂಜನಗೂಡಿನ ಸರ್ಕಾರಿ ಕಾಲೇಜು ಉಪನ್ಯಾಸಕ ಮಹದೇವಸ್ವಾಮಿ ಮನೆ ಮೇಲೆ ದಾಳಿ ನಡೆಸಿದ್ದು, ಭರ್ಜರಿ ಕಾರ್ಯಾಚರಣೆ ನಡೆಯುತ್ತಿದೆ.
ಇದನ್ನೂ ಓದಿ: ಬೆಳ್ಳಂಬೆಳಗ್ಗೆ ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ – ಸುಖ ನಿದ್ರೆಯಲ್ಲಿದ್ದ ಸರ್ಕಾರಿ ಅಧಿಕಾರಿಗಳಿಗೆ ಶಾಕ್!
ನಂಜನಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಮಹದೇವಸ್ವಾಮಿ ವಿರುದ್ಧ ಕುಟುಂಬದ ಹೆಸರಿನಲ್ಲಿ MS Group ಕಂಪನಿ ನಡೆಸುತ್ತಿದೆ. ಆದಾಯಕ್ಕೂ ಮೀರಿ ಅಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಮೈಸೂರಿನ ಗುರುಕುಲ ಬಡಾವಣೆ ನಿವಾಸ ಸೇರಿ 12 ಕಡೆ ದಾಳಿ ನಡೆಸಿ, ಆಸ್ತಿ ಪರಿಶೀಲನೆ ನಡೆಸಲಾಗುತ್ತಿದೆ.
ಹೆಸರಿಗೆ ಮಾತ್ರ ಸರ್ಕಾರಿ ಕಾಲೇಜು ಉಪನ್ಯಾಸಕ
ನಂಜನಗೂಡಿನ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕನಾಗಿರುವ ಮಹದೇವಸ್ವಾಮಿ ಹೆಸರಿಗಷ್ಟೆ ಉಪನ್ಯಾಸಕ, ಮಾಡೊದೆಲ್ಲ ಬೇರೆ ವ್ಯವಹಾರ ಎಂಬುದು ಸ್ಪಷ್ಟವಾಗಿದೆ. ಲೋಕಾಯುಕ್ತ ಅಧಿಕಾರಿಗಳ ತಂಡ ಮಹದೇವಸ್ವಾಮಿಗೆ ಸೇರಿದ ಮನೆ, ಕಚೇರಿ, ಶಾಲೆ, ವಾಣಿಜ್ಯ ಕಟ್ಟಡದ ಮೇಲೆ ದಾಳಿ ನಡೆಸಿದೆ. ಮೈಸೂರಿನ ಜೆ.ಪಿ ನಗರಲ್ಲಿ ವಾಸವಿದ್ದ ಮಹದೇವಸ್ವಾಮಿಗೆ ಸೇರಿದ ಮೈಸೂರಿನ ಗುರುಕುಲ ವಿದ್ಯಾಸಂಸ್ಥೆ, ಸ್ಟೀಲ್ ಅಂಗಡಿಗಳು ಹಾಗೂ ಕಚೇರಿ ಮೇಲೆ ಏಕ ಕಾಲದಲ್ಲಿ ದಾಳಿಯಾಗಿದೆ. ಮೈಸೂರಿನಲ್ಲಿ ಸ್ಟೀಲ್ ಹಾಗೂ ಬಟ್ಟೆ ಅಂಗಡಿ, ನಂಜನಗೂಡು ಸ್ಟೀಲ್ ಅಂಗಡಿ, ಕೆ.ಆರ್.ನಗರದ ಸ್ಟೀಲ್ ಅಂಗಡಿ ಮೇಲೆ ದಾಳಿಯಾಗಿದೆ. ಅಲ್ಲದೇ ಈತ ತನ್ನ ಕಾರುಗಳನ್ನ ನಿಲ್ಲಿಸೋದಕ್ಕೆ 100*100 ಜಾಗ ಮಾಡಿಕೊಂಡಿದ್ದ ಅನ್ನೋದು ಬೆಳಕಿಗೆ ಬಂದಿದೆ.
ಲೋಕಾಯುಕ್ತ ADGP ಪ್ರಶಾಂತ್ ಕುಮಾರ್ ಹಾಗೂ IGP ಸುಬ್ರಮಣ್ಣೀಶ್ವರ ರಾವ್, ಎಸ್ಪಿ ಸುರೇಶ್ ಬಾಬು ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯುತ್ತಿದ್ದು, ಡಿಎಸ್‌ಪಿ ಕೃಷ್ಣಯ್ಯ ನೇತೃತ್ವದಲ್ಲಿ 12 ತಂಡಗಳಿಂದ ವಿವಿಧ ಕಡೆಗಳಲ್ಲಿ ದಾಳಿ ನಡೆದಿದೆ.