ರಾಜ್ಯದ ಜನರನ್ನು ಕಾಡುತ್ತಿದೆ ಹೊಸ ಮಾದರಿಯ ಸೋಂಕು! – ಭಯಾನಕ ಬ್ಯಾಕ್ಟೀರಿಯಾದಿಂದ ಬಚಾವ್ ಆಗೋದು ಹೇಗೆ?

ಬೇಸಿಗೆಗಾಲ ಶುರುವಾಗ್ತಿದ್ದಂತೆ ನೀರಿನ ಅಭಾವ ಕೂಡ ಹೆಚ್ಚಾಗುತ್ತಿದೆ. ಮತ್ತೊಂದ್ಕಡೆ ಜನರಿಗೆ ಕೆಲ ರೋಗಗಳ ಭೀತಿ ಕೂಡ ಶುರುವಾಗ್ತಿದೆ. ಕರ್ನಾಟಕದಲ್ಲಿ ಕಳೆದ 5 ವರ್ಷಗಳಿಂದ ಲೆಪ್ಟೋಸ್ಪೈರೋಸಿಸ್ ಸೋಂಕಿನ ಪ್ರಕರಣಗಳು ಆತಂಕಕಾರಿ ರೀತಿಯಲ್ಲಿ ಹೆಚ್ಚುತ್ತಿವೆ. ಇದೀಗ ಈ ಸೋಂಕಿನ ಲಕ್ಷಣಗಳೇನು? ಇದ್ರಿಂದ ಪಾರಾಗುವುದು ಹೇಗೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಅಬ್ಬಬ್ಬಾ.. ಮಗುವಿನ ಕೈಯಲ್ಲೇ ಸ್ಪೋಟವಾಯ್ತು ಮೊಬೈಲ್! – ಪುಟ್ಟ ಕಂದನಿಗೆ ಏನಾಯ್ತು?
ಕರ್ನಾಟಕದಲ್ಲಿ ವರದಿಗಳ ಪ್ರಕಾರ, ಕಳೆದ ಐದು ವರ್ಷದ ಅವಧಿಯಲ್ಲಿ 16 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ. ಇದ್ರಲ್ಲಿ ಸುಮಾರು 30 ಮಂದಿ ಮೃತಪಟ್ಟಿದ್ದಾರೆ. ಪ್ರತಿ ವರ್ಷವೂ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ವರ್ಷವಾರು ಅಂಕಿಅಂಶಗಳನ್ನು ಗಮನಿಸಿದರೆ 2020ರಲ್ಲಿ 544 ಪ್ರಕರಣಗಳು ದಾಖಲಾಗಿದ್ದರೆ, 2021ರಲ್ಲಿ 906 ಪ್ರಕರಣಗಳು ಕಂಡುಬಂದಿವೆ. ಬಳಿಕ 2022ರಲ್ಲಿ 3,174 ಪ್ರಕರಣಗಳು, 2023ರಲ್ಲಿ 5,404 ಪ್ರಕರಣಗಳು ದಾಖಲಾಗಿವೆ. 2024ರಲ್ಲಿ 5,088 ಪ್ರಕರಣಗಳು ವರದಿಯಾಗಿದ್ದು, 2025ರಲ್ಲಿ ಈ ಸಂಖ್ಯೆ 6,525ಕ್ಕೆ ಏರಿಕೆಯಾಗಿದೆ. ಕಳೆದ ವರ್ಷ ಮಾತ್ರವೇ 19 ಮಂದಿ ಈ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದೀಗ ಈ ಸೋಂಕು ದಿನೇ ದಿನೆ ಹೆಚ್ಚುತ್ತಿರುವುದರಿಂದ ಆರೋಗ್ಯ ಇಲಾಖೆಯಲ್ಲಿ ಆತಂಕ ಎಬ್ಬಿಸಿದೆ.
ಲೆಪ್ಟೋಸ್ಪೈರೋಸಿಸ್ ಎಂದರೆ ಏನು?
ಲೆಪ್ಟೋಸ್ಪೈರೋಸಿಸ್ ಒಂದು ಝೂನೋಟಿಕ್ ಬ್ಯಾಕ್ಟೀರಿಯಾ ಸೋಂಕಾಗಿದ್ದು, ಸೋಂಕಿತ ಪ್ರಾಣಿಗಳ ಮೂತ್ರದ ಸಂಪರ್ಕದಿಂದ ಅಥವಾ ಅದರಿಂದ ಮಾಲಿನ್ಯಗೊಂಡ ನೀರು ಮತ್ತು ಮಣ್ಣಿನ ಸಂಪರ್ಕದಿಂದ ಹರಡುತ್ತದೆ. ಆರಂಭಿಕ ಲಕ್ಷಣಗಳು ಸಾಮಾನ್ಯವಾಗಿರುವುದರಿಂದ ಇದನ್ನು ಡೆಂಗ್ಯೂ ಅಥವಾ ಮಲೇರಿಯಾ ಎಂದು ತಪ್ಪಾಗಿ ಗುರುತಿಸುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದಾರೆ. ಸೋಂಕು ತಗುಲಿದ ನಂತರ ಸಾಮಾನ್ಯವಾಗಿ 2 ರಿಂದ 14 ದಿನಗಳೊಳಗೆ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಆರಂಭಿಕ ಲಕ್ಷಣಗಳು
ಆರಂಭದಲ್ಲಿ ಜ್ವರ, ತೀವ್ರ ತಲೆನೋವು, ದೇಹ ನೋವು, ವಿಶೇಷವಾಗಿ ಕಾಲು ಮತ್ತು ಬೆನ್ನು ಭಾಗದಲ್ಲಿ ನೋವು, ಚಳಿ ಅಥವಾ ನಡುಕ, ವಾಂತಿ ಅಥವಾ ಅಸ್ವಸ್ಥತೆ, ಕಣ್ಣು ಕೆಂಪಾಗುವುದು, ದೌರ್ಬಲ್ಯ ಮತ್ತು ದೇಹ ಸೊರಗು, ಹೊಟ್ಟೆ ನೋವು ಕಾಣಿಸಿಕೊಳ್ಳುತ್ತವೆ.
ಗಂಭೀರ ಲಕ್ಷಣಗಳು
- ಮೂತ್ರಪಿಂಡ ಸಮಸ್ಯೆ (ಕಿಡ್ನಿ ಫೇಲ್ಯರ್)
- ಯಕೃತ್ ಹಾನಿಯಿಂದ ಕಾಮಳೆ (ಜಾಂಡಿಸ್)
- ಉಸಿರಾಟದ ತೊಂದರೆ ಅಥವಾ ಶ್ವಾಸಕೋಶ ಸಮಸ್ಯೆಗಳು
- ಮೆದುಳಿನ ಸೋಂಕು (ಮೆನಿಂಜೈಟಿಸ್)
- ಒಳರಕ್ತಸ್ರಾವ
ಹೇಗೆ ತಡೆಗಟ್ಟಬಹುದು?
- ನೆರೆ ನೀರು ಅಥವಾ ಕಲುಷಿತ ನೀರಿನಲ್ಲಿ ಬರಿಗಾಲಿನಲ್ಲಿ ನಡೆಯುವುದನ್ನು ತಪ್ಪಿಸಬೇಕು.
- ಕೃಷಿ ಕೆಲಸ ಅಥವಾ ಕಸ ವಿಲೇವಾರಿ ಮಾಡುವಾಗ ಬೂಟು, ಕೈಗವಸು ಧರಿಸಬೇಕು.
- ಕಲುಷಿತ ನೀರಿನ ಸಂಪರ್ಕದ ನಂತರ ಕೈ ಕಾಲುಗಳನ್ನು ಚೆನ್ನಾಗಿ ತೊಳೆಯಬೇಕು.
- ಗಾಯ ಅಥವಾ ಕತ್ತರಿದ ಜಾಗಗಳನ್ನು ಮುಚ್ಚಿಕೊಂಡಿರಬೇಕು.
- ಮನೆ ಸುತ್ತಮುತ್ತ ಸ್ವಚ್ಛತೆ ಕಾಪಾಡಿ ಇಲಿಗಳ ನಿಯಂತ್ರಣ ಮಾಡಬೇಕು.
- ಶುದ್ಧವಾದ ನೀರನ್ನೇ ಕುಡಿಯಬೇಕು.
- ಕಲುಷಿತ ನೀರಿನ ಸಂಪರ್ಕದ ನಂತರ ಜ್ವರ ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
ರೋಗದ ಈ ಎಲ್ಲಾ ಲಕ್ಷಣಗಳ ಹೊರತಾಗಿಯೂ ಸರಿಯಾದ ನಿರ್ಧಾರಕ್ಕೆ ಲ್ಯಾಬ್ ಪರೀಕ್ಷೆಗಳು ಅಗತ್ಯ. ಐಜಿಎಂ ಎಲಿಸಾ ಪರೀಕ್ಷೆ ಮೂಲಕ ಆರಂಭಿಕ ತಪಾಸಣೆ ನಡೆಸಲಾಗುತ್ತದೆ. ಮೈಕ್ರೋಸ್ಕೋಪಿಕ್ ಅಗ್ಗ್ಲುಟಿನೇಶನ್ ಟೆಸ್ಟ್ (MAT) ಮುಖ್ಯ ಪರೀಕ್ಷೆಯಾಗಿದ್ದು, ವಿಶೇಷ ಪ್ರಯೋಗಾಲಯಗಳಲ್ಲಿ ನಡೆಸಲಾಗುತ್ತದೆ. ಆರಂಭಿಕ ಹಂತದಲ್ಲಿ ಪಿಸಿಆರ್ ಪರೀಕ್ಷೆಯಿಂದ ಬ್ಯಾಕ್ಟೀರಿಯಾ ಡಿಎನ್ಎ ಪತ್ತೆ ಮಾಡಬಹುದು. ಚಿಕಿತ್ಸೆ ವಿಳಂಬವಾದರೆ ಈ ಸೋಂಕು ಪ್ರಾಣಾಪಾಯಕ್ಕೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ನೋಡಿರಿ

