ನಟ ಉಪೇಂದ್ರಗೆ ಬಿಗ್‌ ರಿಲೀಫ್‌ – ನಟನ ವಿರುದ್ದ ದಾಖಲಾಗಿದ್ದ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆ

ನಟ ಉಪೇಂದ್ರಗೆ ಬಿಗ್‌ ರಿಲೀಫ್‌ – ನಟನ ವಿರುದ್ದ ದಾಖಲಾಗಿದ್ದ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆ

ಸ್ಯಾಂಡಲ್‌ವುಡ್‌ ನಟ ಉಪೇಂದ್ರ ಅವರು ಸೋಶಿಯಲ್‌ ಮೀಡಿಯಾದಲ್ಲಿ ಜಾತಿ ನಿಂದನೆ ಪದ ಬಳಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅವರ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಇದೀಗ ಉಪೇಂದ್ರ ಅವರು ನಿಟ್ಟುಸಿರು ಬಿಡುವಂತೆ ಆಗಿದೆ. ಅವರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ಗೆ ತಡೆ ನೀಡಿ ಹೈಕೋರ್ಟ್‌ ಆದೇಶಿಸಿದೆ.

ಉಪೇಂದ್ರ ವಿರುದ್ಧ ಬೆಂಗಳೂರಿನ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿತ್ತು. ತಮ್ಮ ವಿರುದ್ಧ ಹಾಕಲಾಗಿದ್ದ ಎಫ್​ಐಆರ್​ಗೆ ತಡೆ ನೀಡಬೇಕು ಎಂದು ಕೋರಿ ಉಪೇಂದ್ರ ಅವರು ಹೈಕೋರ್ಟ್​ ಮೆಟ್ಟಿಲು ಏರಿದ್ದರು. ಈಗ ಅವರ ಪರವಾಗಿ ಕೋರ್ಟ್​ ಆದೇಶ ನೀಡಿದೆ. ‘ಗಾದೆ ಮಾತು ಉಲ್ಲೇಖಿಸಿ ಉಪೇಂದ್ರ ಹೇಳಿಕೆ ನೀಡಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಇದಕ್ಕೆ ಅನ್ವಯವಾಗುವುದಿಲ್ಲ’ ಎಂದು ಉಪೇಂದ್ರ ಪರವಾಗಿ ಹಿರಿಯ ವಕೀಲ ಉದಯ್ ಹೊಳ್ಳ ವಾದ ಮಂಡನೆ ಮಾಡಿದ್ದಾರೆ.

ಇದನ್ನೂ ಓದಿ: ತಾನು ಆಡಿದ ಮಾತೇ ಉಪೇಂದ್ರಗೆ ಮುಳುವಾಯ್ತು –  ನಟನ ವಿರುದ್ಧ ಎಫ್‌ಐಆರ್‌ ದಾಖಲು

ಇನ್ನು ಜಾತಿ ನಿಂದನೆ ಆರೋಪ ಎದುರಾದ ಬಳಿಕ ಉಪೇಂದ್ರ ಅವರ ವಿರುದ್ಧ ಸೋಶಿಯಲ್​ ಮೀಡಿಯಾದಲ್ಲಿ ಅನೇಕರು ಕಿಡಿಕಾರಲು ಆರಂಭಿಸಿದರು. ಈಗ ಉಪೇಂದ್ರ ಅವರ ಮನೆಗೆ ಪೊಲೀಸರು ಬಿಗಿ ಭದ್ರತೆ ನೀಡಿದ್ದಾರೆ. ಬೆಂಗಳೂರಿನ ಕತ್ತರಿಗುಪ್ಪೆ ಮತ್ತು ಸದಾಶಿವ ನಗರದ ತಮ್ಮ ನಿವಾಸದಲ್ಲಿ ಉಪೇಂದ್ರ ಇಲ್ಲ ಎಂದು ಹೇಳಲಾಗುತ್ತಿದೆ. ಆದರೂ ಮುಂಜಾಗೃತ ಕ್ರಮವಾಗಿ ಪೊಲೀಸರು ಭದ್ರತೆ ಒದಗಿಸಿದ್ದಾರೆ.

ಇತ್ತೀಚೆಗೆ ಪ್ರಜಾಕೀಯದ ಬಗ್ಗೆ ಮಾತನಾಡಲು ಸೋಶಿಯಲ್​ ಮೀಡಿಯಾದಲ್ಲಿ ಉಪೇಂದ್ರ ಅವರು ಲೈವ್​ ಬಂದಿದ್ದರು. ಈ ವೇಳೆ ಅವರು ಬಳಸಿದ್ದ ಗಾದೆ ಮಾತಿನಿಂದ ಜಾತಿ ನಿಂದನೆ ಆಗಿದೆ ಎಂಬ ಆರೋಪ ಕೇಳಿಬಂತು. ಹಾಗಾಗಿ ಅವರ ವಿರುದ್ಧ ದೂರು ದಾಖಲಿಸಲಾಯಿತು. ಜನರಿಂದ ತೀವ್ರ ಆಕ್ಷೇಪ ಎದುರಾದ ಹಿನ್ನೆಲೆಯಲ್ಲಿ ಉಪೇಂದ್ರ ಅವರು ಕ್ಷಮೆ ಕೇಳಿದ್ದರು ಮತ್ತು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದರು.

suddiyaana