ವಿಧಾನಸಭೆ ಚುನಾವಣೆ ವೇಳೆ ಗ್ಯಾರಂಟಿ ಆಮಿಷವೊಡ್ಡಿ ಗೆದ್ದ ಆರೋಪ – ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್‌ ನಿಂದ ನೋಟಿಸ್ ಜಾರಿ

ವಿಧಾನಸಭೆ ಚುನಾವಣೆ ವೇಳೆ ಗ್ಯಾರಂಟಿ ಆಮಿಷವೊಡ್ಡಿ ಗೆದ್ದ ಆರೋಪ – ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್‌ ನಿಂದ ನೋಟಿಸ್ ಜಾರಿ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ಯಾರಂಟಿಗಳ ಮೂಲಕ ಮತದಾರರಿಗೆ ಆಮಿಷವೊಡ್ಡಿದ್ದಾರೆ ಗೆದ್ದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅವರ ಶಾಸಕರಾಗಿ ಆಯ್ಕೆಯಾಗಿರುವುದನ್ನು ಅಸಿಂಧುಗೊಳಿಸುವಂತೆ ಕೋರಿ ಕರ್ನಾಟಕ ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಲಾಗಿತ್ತು. ಇದೀಗ ಈ ಅರ್ಜಿಯನ್ನು ವಿಚಾರಣೆ ಮಾಡಿದ ಹೈಕೋರ್ಟ್‌ ಏಕಸದಸ್ಯ ಪೀಠದಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ಎಮರ್ಜೆಂಟ್‌ ನೋಟಿಸ್‌ ಜಾರಿ ಮಾಡಲಾಗಿದೆ.

ಇದನ್ನೂಓದಿ: ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣ – ಸಿಎಂ ಕುಟುಂಬದ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಹಾಕಿದ ಬಿಜೆಪಿ ಕಾರ್ಯಕರ್ತೆ ಪೊಲೀಸ್‌ ವಶಕ್ಕೆ

ರಾಜ್ಯ ವಿಧಾನಸಭೆ ಚುನಾವಣೆ ಮೂಲಕ ಕಾಂಗ್ರೆಸ್‌ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿ ಮತದಾರರನ್ನು ತನ್ನತ್ತ ಸೆಳೆದಿತ್ತು. ಪ್ರಜಾಪ್ರತಿನಿಧಿ ಕಾಯ್ದೆ ಸೆಕ್ಷನ್ 123 (1) ಪ್ರಕಾರ ಆಮಿಷ ಒಡ್ಡುವಂತಿಲ್ಲ. ಇದನ್ನು ಉಲ್ಲಂಘಿಸಿ ಮತದಾರರಿಗೆ ಗ್ಯಾರಂಟಿ‌ ಕಾರ್ಡ್ ವಿತರಿಸಿ ಆಮಿಷ ಒಡ್ಡಲಾಗಿದೆ. ಹೀಗಾಗಿ ಸಿದ್ದರಾಮಯ್ಯ ಅವರು ಶಾಸಕರಾಗಿ ಆಯ್ಕೆಯಾಗಿರುವುದನ್ನು ಅಸಿಂಧುಗೊಳಿಸುವಂತೆ ಕೆ.ಎಂ.ಶಂಕರ ಎಂಬುವರು ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಕರ್ನಾಟಕ ಹೈಕೋರ್ಟ್ ಸಿದ್ದರಾಮಯ್ಯ ಅವರಿಗೆ ಎಮರ್ಜೆಂಟ್‌ ನೋಟಿಸ್‌ ಜಾರಿ ಮಾಡಿದೆ.

ಹಿರಿಯ ನ್ಯಾಯವಾದಿ ಪ್ರಮೀಳಾ ನೇಸರ್ಗಿ ಮೂಲಕ ಸಲ್ಲಿಸಲಾದ ಮನವಿಯಲ್ಲಿ, ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 100 (1) (ಬಿ), (ಡಿ) (i), (ಡಿ) (ii), (ಡಿ) (iii), ಮತ್ತು (ಡಿ) (iv) ಅಡಿಯಲ್ಲಿ ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಿದ್ದನ್ನು ಪ್ರಶ್ನೆ ಮಾಡಲಾಗಿದೆ. ಕಾಯ್ದೆಯ ಸೆಕ್ಷನ್ 123(1)(ಎ)(ಬಿ)(ii), 123(1)(ಬಿ)(ಬಿ), 123(2), 123(4) ಮತ್ತು 123(6) ಅಡಿಯಲ್ಲಿ ಸಿಎಂ ಸಿದ್ಧರಾಮಯ್ಯ ವಿವಿಧ ಭ್ರಷ್ಟ ಕೃತ್ಯಗಳನ್ನು ಎಸಗಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.  ಸಿದ್ದರಾಮಯ್ಯ ಅವರ ಆಯ್ಕೆಯನ್ನು ಅನೂರ್ಜಿತಗೊಳಿಸಬೇಕು ಮತ್ತು ಅವರು ಕಾಯಿದೆ ಮತ್ತು ಸಂವಿಧಾನದ ನಿಬಂಧನೆಗಳನ್ನು ಉಲ್ಲಂಘಿಸಿರುವುದರಿಂದ ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಅವರನ್ನು ಅನರ್ಹ ಮಾಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

suddiyaana