ವಿದ್ಯಾರ್ಥಿನಿ ಸೌಜನ್ಯ ಹತ್ಯೆ ಕೇಸ್‌ಗೆ ಮರುಜೀವ – ಸರ್ಕಾರ ಮತ್ತು ಸಿಬಿಐಗೆ ನೋಟಿಸ್ ಜಾರಿ ಮಾಡಿದ ಕರ್ನಾಟಕ ಹೈಕೋರ್ಟ್

ವಿದ್ಯಾರ್ಥಿನಿ ಸೌಜನ್ಯ ಹತ್ಯೆ ಕೇಸ್‌ಗೆ ಮರುಜೀವ – ಸರ್ಕಾರ ಮತ್ತು ಸಿಬಿಐಗೆ ನೋಟಿಸ್ ಜಾರಿ ಮಾಡಿದ ಕರ್ನಾಟಕ ಹೈಕೋರ್ಟ್

ರಾಜ್ಯಾದ್ಯಂತ ನಡೆದ ಹೋರಾಟಗಳೆಷ್ಟೋ.. ಆ ತಾಯಿ ಹಾಕಿದ ಶಾಪಗಳೆಷ್ಟೋ.. ಹರಿದ ಕಣ್ಣೀರೆಷ್ಟೋ.. ಲೆಕ್ಕವಿಲ್ಲ. ಇಂದಿಗೂ ಸಾವಿರಾರು ಕುಟುಂಬಗಳು ಮರುಗುತ್ತಲೇ ಇವೆ. ಆದ್ರೆ ದಶಕವೇ ಕಳೆದ್ರೂ ಆ ಹೆಣ್ಣುಮಗಳ ಸಾವಿಗೆ ನ್ಯಾಯ ಸಿಕ್ಕಿಲ್ಲ. ವಿದ್ಯಾರ್ಥಿನಿಯನ್ನು ಹುರಿದು ಮುಕ್ಕಿದ್ದ ಮೃಗಗಳಿಗೆ ಶಿಕ್ಷೆಯಾಗಲಿಲ್ಲ. ಇಂದಿಗೂ ನಿಗೂಢವಾಗೇ ಉಳಿದಿರುವ ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣ ಇನ್ನೇನು ಮುಚ್ಚೇ ಹೋಯ್ತು ಎನ್ನುವಂತಾಗಿತ್ತು. ಆದ್ರೆ ಅಷ್ಟರಲ್ಲೇ ಪ್ರಕರಣಕ್ಕೆ ಹೈಕೋರ್ಟ್ ಟ್ವಿಸ್ಟ್ ಕೊಟ್ಟಿದೆ. ರಾಜ್ಯ ಸರ್ಕಾರ ಮತ್ತು ಸಿಬಿಐಗೆ ನೋಟಿಸ್ ಜಾರಿಗೊಳಿಸಿದೆ. ಹಾಗಾದ್ರೆ ಸೌಜನ್ಯ ಪ್ರಕರಣಕ್ಕೆ ಸಿಕ್ಕ ತಿರುವು ಏನು..? ಮರುತನಿಖೆಯಾಗುತ್ತಾ..? ಹೈಕೋರ್ಟ್ ನೋಟಿಸ್ ಕೊಟ್ಟಿದ್ದೇಕೆ..? ಇದೆಲ್ಲದರ ಬಗ್ಗೆ ವಿವರ ಇಲ್ಲಿದೆ.

ಇದನ್ನೂ ಓದಿ: ಸೌಜನ್ಯ ಕೇಸ್‌ಗೆ ಟ್ವಿಸ್ಟ್ – ಸಿಬಿಐ ಮೇಲ್ಮನವಿ ಸಲ್ಲಿಸಿರುವ ಉದ್ದೇಶವೇನು? – ಈ ಪ್ರಕರಣ ಇನ್ನೆಷ್ಟು ವರ್ಷ ಮುಂದೂಡಿಕೆ ಆಗಬಹುದು?

ಸೌಜನ್ಯ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ವಿದ್ಯಾರ್ಥಿನಿ. ಕಾಲೇಜು ಮುಗಿಸಿ ಮನೆಗೆ ಮರಳುತ್ತಿದ್ದ ಸೌಜನ್ಯಳನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಲಾಗಿತ್ತು. ಸೌಜನ್ಯ ಸಾವನ್ನಪ್ಪಿ ವರ್ಷಗಳೇ ಕಳೆದ್ರೂ ನ್ಯಾಯ ಮಾತ್ರ ಸಿಕ್ಕಿಲ್ಲ. ಇದೇ ವಿಚಾರವಾಗಿ ಸಾಕಷ್ಟು ಹೋರಾಟಗಳು ನಡೆದಿವೆ. ಸಂತೋಷ್ ರಾವ್ ಖುಲಾಸೆ ಬಳಿಕವೂ ಜಸ್ಟೀಸ್ ಫಾರ್ ಸೌಜನ್ಯ ಹೆಸರಲ್ಲಿ ದೊಡ್ಡ ಮಟ್ಟದ ಅಭಿಯಾನ ನಡೆದಿತ್ತು. ಬಳಿಕ ಪ್ರಕರಣ ತಣ್ಣಗಾಗಿತ್ತು. ಇದೀಗ ಹೈಕೋರ್ಟ್ ಮತ್ತೆ ಪ್ರಕರಣಕ್ಕೆ ಮರುಜೀವ ನೀಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ವಿದ್ಯಾರ್ಥಿನಿ ಸೌಜನ್ಯ ಹತ್ಯೆ ಕೇಸ್​ನಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಪ್ರಕರಣದ ಕುರಿತು ಮರು ತನಿಖೆಗೆ ಆದೇಶಿಸುವಂತೆ ಕೋರಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಮತ್ತು ಸಿಬಿಐಗೆ ಕರ್ನಾಟಕ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ. ಮೃತ ಸೌಜನ್ಯಳ ಸಂಬಂಧಿ ಚಂದಪ್ಪಗೌಡ ಸಲ್ಲಿಸಿದ್ದ ತಕರಾರು ಅರ್ಜಿ ಕುರಿತು ನ್ಯಾಯಮೂರ್ತಿ ಕೆ.ನಟರಾಜನ್‌ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನಂತರ ಅರ್ಜಿಯಲ್ಲಿ ಪ್ರತಿವಾದಿಯಾಗಿರುವರಿಗೆ ನೋಟಿಸ್ ಜಾರಿಗೊಳಿಸಿತು. ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ, ರಾಜ್ಯ ಪೊಲೀಸ್‌ ಮಹಾನಿರ್ದೇಶಕರು, ಸಿಐಡಿ ಎಡಿಜಿಪಿ, ಅಪರಾಧ ಮತ್ತು ತಾಂತ್ರಿಕ ಸೇವೆಗಳ ವಿಭಾಗದ ಎಡಿಜಿಪಿ, ದಕ್ಷಿಣ ಕನ್ನಡ ಪೊಲೀಸ್‌ ವರಿಷ್ಠಾಧಿಕಾರಿ, ಸಿಐಡಿ ಉಪ ಪೊಲೀಸ್‌ ವರಿಷ್ಠಾಧಿಕಾರಿ, ಬೆಳ್ತಂಗಡಿ ಪೊಲೀಸ್‌ ಠಾಣಾಧಿಕಾರಿ ಮತ್ತು ಸಿಬಿಐ ಪ್ರತಿವಾದಿಗಳಾಗಿದ್ದಾರೆ. ಅಲ್ಲದೆ ಪ್ರಕರಣದಿಂದ ಸಂತೋಷ್‌ ರಾವ್‌ ಅವರನ್ನು ಖುಲಾಸೆಗೊಳಿಸಿ ವಿಚಾರಣಾ ನ್ಯಾಯಾಲಯ ನೀಡಿರುವ ತೀರ್ಪು ಪ್ರಶ್ನಿಸಿ ಸಿಬಿಐ ಸಲ್ಲಿಸಿರುವ ಕ್ರಿಮಿನಲ್‌ ಮೇಲ್ಮನವಿ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಾಕಿಯಿದೆ. ಮೇಲ್ಮನವಿಯೊಂದಿಗೆ ವಿಭಾಗೀಯ ಪೀಠದ ಮುಂದೆ ಈ ಅರ್ಜಿಯನ್ನು ವಿಚಾರಣೆಗೆ ನಿಗದಿಪಡಿಸಬೇಕು ಎಂದು ತಕರಾರು ಅರ್ಜಿಯಲ್ಲಿ ಮನವಿ ಮಾಡಿದ್ದರು.  ಇದನ್ನೂ ಪರಿಗಣಿಸಿರುವ ನ್ಯಾಯಪೀಠ, ರೋಸ್ಟರ್‌ ಪ್ರಕಾರ ಸೂಕ್ತ ವಿಭಾಗೀಯ ಪೀಠದ ಮುಂದೆ ಈ ಅರ್ಜಿಯನ್ನು ವಿಚಾರಣೆಗೆ ನಿಗದಿಪಡಿಸಲು ಮುಖ್ಯ ನ್ಯಾಯಮೂರ್ತಿಗಳಿಂದ ಅನುಮತಿ ಪಡೆಯುವಂತೆ ರಿಜಿಸ್ಟ್ರಿಗೆ ಸೂಚಿಸಿದೆ. ಪ್ರಕರಣದಿಂದ ಖುಲಾಸೆಯಾಗಿರುವ ಸಂತೋಷ್‌ರಾವ್‌ ಅವರನ್ನು ಸಹ ಪ್ರಕರಣದಲ್ಲಿ ಪ್ರತಿವಾದಿ ಮಾಡಲಾಗಿದೆ.

ಸಂತೋಷ್ ರಾವ್ ಅವರನ್ನು ಖುಲಾಸೆಗೊಳಿಸುವ ಸಂದರ್ಭದಲ್ಲಿ ಪ್ರಕರಣದ ಅಪರಾಧಿಗಳನ್ನು ಪತ್ತೆಹಚ್ಚಲು ವಿಫಲರಾದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೆಷನ್ಸ್ ನ್ಯಾಯಾಲಯವು ಶಿಫಾರಸು ಮಾಡಿದೆ. ಈ ಸಂಬಂಧ ಅಗತ್ಯ ಆದೇಶ ನೀಡಲು ಸಮಿತಿಗೆ ನಿರ್ದೇಶನ ನೀಡುವಂತೆ ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದು, ಹೈಕೋರ್ಟ್ ನ್ಯಾಯಾಲಯವು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ, ಖುಲಾಸೆ ಸಮಿತಿಯ ಮುಖ್ಯಸ್ಥರಿಗೆ ಸೂಚನೆ ನೀಡಿದೆ. ಅಷ್ಟಕ್ಕೂ ಏನಿದು ಸೌಜನ್ಯ ಪ್ರಕರಣ ಅನ್ನೋದನ್ನ ನೋಡೋದಾದ್ರೆ..

ಸೌಜನ್ಯ ಹತ್ಯೆಗೆ ಇನ್ನಾದರೂ ಸಿಗುವುದೇ ನ್ಯಾಯ?

2012ರ ಅಕ್ಟೋಬರ್ 9 ರಂದು ಸೌಜನ್ಯ ಕಾಲೇಜು ಮುಗಿಸಿ ಮನೆಗೆ ಮರಳುವಾಗ ಅಪಹರಿಸಿ ಸಾಮೂಹಿಕ ದೌರ್ಜನ್ಯ ಎಸಗಿ ಕೊಲೆ ಮಾಡಲಾಗಿತ್ತು. ಬೆಳ್ತಂಗಡಿ ಠಾಣಾ ಪೊಲೀಸರು ಸಂತೋಷ್‌ ರಾವ್‌ ಅವರನ್ನು ಬಂಧಿಸಿದ್ದರು. ನಂತರ ಪ್ರಕರಣದ ತನಿಖೆಯನ್ನು ಸಿಐಡಿ, ಆ ಬಳಿಕ ಸಿಬಿಐಗೆ ವರ್ಗಾಯಿಸಲಾಗಿತ್ತು. ಸಿಬಿಐ ತನಿಖೆ ಪೂರ್ಣಗೊಳಿಸಿ ಸಂತೋಷ್‌ ರಾವ್‌ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು. ಸೆಷನ್ಸ್‌ ನ್ಯಾಯಾಲಯ ಸೂಕ್ತ ಸಾಕ್ಷ್ಯಾಧಾರಗಳಿಲ್ಲಎಂದು ಸಂತೋಷ್‌ರಾವ್‌ನನ್ನು ಖುಲಾಸೆಗೊಳಿಸಿ 2023ರ ಜೂನ್ 16ರಂದು ಆದೇಶಿಸಿತ್ತು. ಸಂತೋಷ್ ರಾವ್ ಖುಲಾಸೆ ಬಳಿಕ ರಾಜ್ಯಾದ್ಯಂತ ಹೋರಾಟಗಳು ನಡೆದಿದ್ದವು. ಸಂತೋಷ್ ಆರೋಪಿ ಅಲ್ಲ ಅಂದ್ರೆ ನಿಜವಾದ ಆರೋಪಿಗಳು ಯಾರು ಅನ್ನೋದನ್ನ ಪತ್ತೆ ಹಚ್ಚಬೇಕೆಂದು ಜಸ್ಟೀಸ್ ಫಾಸ್ ಸೌಜನ್ಯ ಹೆಸರಲ್ಲಿ ಅಭಿಯಾನಗಳೂ ಕೂಡ ನಡೆದಿದ್ದವು.

ಸಿಬಿಐ ವಿಶೇಷ ನ್ಯಾಯಾಲಯವು ಆರೋಪಿ ಸಂತೋಷ್ ರಾವ್ ನಿರ್ದೋಷಿ ಎಂದು ತೀರ್ಪು ನೀಡಿದ್ದು, ಆತನನ್ನು ನಿರಾಪರಾಧಿ ಎಂದು ಬಿಡುಗಡೆ ಮಾಡಲಾಗಿದೆ. ಆದ್ರೆ ಸಿಬಿಐ ವಿಶೇಷ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮರು ಪರಿಶೀಲನೆ ಮಾಡುವಂತೆ ಮೇಲ್ಮನವಿ ಸಲ್ಲಿಸಲಾಗಿದೆ. ಸಿಬಿಐ ಮೇಲ್ಮನವಿಯಲ್ಲಿ ಸಂತೋಷ್ ರಾವ್ ಅವರೇ ಆರೋಪಿ ಅಂತ ಹೇಳಲಾಗಿದೆ. ಇದರೊಂದಿಗೆ ಸಂತೋಷ್‌ ರಾವ್‌ನೇ ಅರೋಪಿ ಎಂಬ ಬಗ್ಗೆ ಪೂರ್ಣ ಸಾಕ್ಷ್ಯ ನೀಡಲು ವಿಫಲವಾಗಿದ್ದ ಸಿಬಿಐ ಮತ್ತೆ ಆತನನ್ನು ಆರೋಪಿ ಎಂದು ಹೇಗೆ ಸಾಬೀತುಪಡಿಸುತ್ತದೆ ಎಂಬುದು ಕುತೂಹಲಕಾರಿ.

Sulekha