ಅಕ್ಟೋಬರ್ ತಿಂಗಳ GST ಕಲೆಕ್ಷನ್‌ನಲ್ಲಿ ಕರ್ನಾಟಕವೇ ನಂಬರ್ -1

ಅಕ್ಟೋಬರ್ ತಿಂಗಳ GST  ಕಲೆಕ್ಷನ್‌ನಲ್ಲಿ ಕರ್ನಾಟಕವೇ ನಂಬರ್ -1

2025ರ ಅಕ್ಟೋಬರ್ ತಿಂಗಳ ರಾಜ್ಯವಾರು ಸರಕು ಮತ್ತು ಸೇವಾ ತೆರಿಗೆ  ಆದಾಯ ವರದಿ ಬಿಡುಗಡೆಯಾಗಿದ್ದು, ಬೆಳವಣಿಗೆ ದರದಲ್ಲಿ ಕರ್ನಾಟಕ  ಪ್ರಥಮ ಸ್ಥಾನದಲ್ಲಿ ಇದೆ. ದಸರಾ ಹಬ್ಬದ ಸಮಯದಲ್ಲಿ ಕರ್ನಾಟಕ ಜಿಎಸ್ಟಿ ಸಂಗ್ರಹದಲ್ಲಿ   ಹೆಚ್ಚಿನ ಸಂಗ್ರಹ ಮಾಡಿದ್ದು, ಸೆಪ್ಟೆಂಬರ್‌ನಿಂದ ತೆರಿಗೆ ಆದಾಯದಲ್ಲಿ 10% ಬೆಳವಣಿಗೆ ದಾಖಲಾಗಿದೆ. ಕರ್ನಾಟಕದ GST ಸಂಗ್ರಹ 14,395 ಕೋಟಿ ರೂ. ಆಗಿದೆ. ಹಬ್ಬದ ಖರೀದಿಗಳನ್ನು ಮಾಡುವ ಗ್ರಾಹಕರಲ್ಲಿನ ಉತ್ಸಾಹವನ್ನು ಇದು ತೋರಿಸಿದೆ ಎಂದು ಭಾವಿಸಲಾಗಿದೆ.

2024ರ ಅಕ್ಟೋಬರ್​ಗೆ ಹೋಲಿಸಿದರೆ 2025ರ ಅಕ್ಟೋಬರ್​ ಆಂತರಿಕ ಜಿಎಸ್​​ಟಿ 1,45,052 ಕೋಟಿ ರೂ. ಸಂಗ್ರಹವಾಗಿದೆ. ಅಂದರೆ ಶೇ.2ರಷ್ಟು ಬೆಳವಣಿಗೆ ಹೊಂದಿದೆ. ಹಣಕಾಸು ಸಚಿವಾಲಯ ರಾಜ್ಯಗಳ ಜಿಎಸ್​​ಟಿ ಆದಾಯದ ಸಂಗ್ರಹ ಮತ್ತು ಬೆಳವಣಿಗೆ ದರ ಮಾಹಿತಿ ಬಿಡುಗಡೆ ಮಾಡಿದ್ದು, ಆ ಪೈಕಿ ಅಕ್ಟೋಬರ್ ತಿಂಗಳ ಜಿಎಸ್‌ಟಿ ಆದಾಯ 1.95 ಲಕ್ಷ ಕೋಟಿ ರೂ ಸಂಗ್ರಹವಾಗಿದೆ. ತೆರಿಗೆ ಕಡಿತದ ಹೊರತಾಗಿಯೂ ಶೇ. 4.6 ರಷ್ಟು ಏರಿಕೆ ಕಂಡಿದೆ.

ಹಣಕಾಸು ಸಚಿವಾಲಯದ ಮಾಹಿತಿಯ ಪ್ರಕಾರ, ಕೇಂದ್ರ ಜಿಎಸ್‌ಟಿ (ಸಿಜಿಎಸ್‌ಟಿ) 36,547 ಕೋಟಿ ರೂ., ರಾಜ್ಯ ಜಿಎಸ್‌ಟಿ (ಎಸ್‌ಜಿಎಸ್‌ಟಿ) 45,134 ಕೋಟಿ ರೂ. ಮತ್ತು ಇಂಟಿಗ್ರೇಟೆಡ್ ಜಿಎಸ್‌ಟಿ (ಐಜಿಎಸ್‌ಟಿ) 1,06,443 ಕೋಟಿ ರೂ ಸೇರಿದಂತೆ ಹೆಚ್ಚುವರಿಯಾಗಿ ಸರ್ಕಾರವು ಸೆಸ್‌ನಿಂದ 7,812 ಕೋಟಿ ರೂ. ಸಂಗ್ರಹಿಸಿದೆ.

ಅಕ್ಟೋಬರ್ ತಿಂಗಳ ಜಿಎಸ್‌ಟಿ ಸಂಗ್ರಹದ ಕುರಿತು  ಬಿಡುಗಡೆಯಾದ ಹೇಳಿಕೆಯ ಪ್ರಕಾರ, ಸೆಪ್ಟೆಂಬರ್‌ನಲ್ಲಿ ನಡೆದ ವಹಿವಾಟುಗಳಲ್ಲಿ ಕರ್ನಾಟಕ ರಾಜ್ಯ 14,395 ಕೋಟಿ ರೂ.ಗಳನ್ನು ಸಂಗ್ರಹಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಸುಮಾರು 13,080 ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿತ್ತು. ಕೇಂದ್ರ ಜಿಎಸ್‌ಟಿಯ ಅಂಶಗಳು, ಅಂತರರಾಜ್ಯ ವಹಿವಾಟಿನ ಮೇಲಿನ ತೆರಿಗೆ, ಸಂಯೋಜಿತ ಜಿಎಸ್‌ಟಿ ಮತ್ತು ಸೆಸ್ ಸೇರಿದಂತೆ ಒಟ್ಟು ಸಂಗ್ರಹ ಇದಾಗಿದೆ. ಈ ಘಟಕಗಳನ್ನು ಕಡಿತಗೊಳಿಸಿದ ನಂತರ ರಾಜ್ಯ ಖಜಾನೆಗೆ ನಿವ್ವಳ 7,065 ಕೋಟಿ ರೂ.ಗಳನ್ನು ಪಡೆಯಲಿದೆ. ಜಿಎಸ್‌ಟಿ ಸಂಗ್ರಹದಲ್ಲಿ ಟಾಪ್ -5 ರಾಜ್ಯಗಳೆಂದು ಪರಿಗಣಿಸಲಾದ ರಾಜ್ಯಗಳಲ್ಲಿ ಕರ್ನಾಟಕದ ಕಾರ್ಯಕ್ಷಮತೆ ಅತ್ಯುತ್ತಮವಾಗಿದೆ. ರಾಷ್ಟ್ರೀಯ ಸರಾಸರಿ 2% ಬೆಳವಣಿಗೆ ದರ ಇದೆ. ಅದನ್ನೂ ಮೀರಿಸುವುದರಿಂದ ರಾಜ್ಯದ ಕಾರ್ಯಕ್ಷಮತೆ ಗಮನಾರ್ಹವಾಗಿದೆ. ದೇಶದಲ್ಲಿ ದಾಖಲೆಯ 1.96 ಲಕ್ಷ ಕೋಟಿ ರೂ.ಗಳನ್ನು ಸಂಗ್ರಹಿಸಿದೆ.

Kishor KV