ಮದ್ಯ ಖರೀದಿ ಮತ್ತು ಸೇವನೆ ವಯಸ್ಸಿನ ಮಿತಿ ಇಳಿಕೆ – ಅಬಕಾರಿ ಸಚಿವ ಹೇಳಿದ್ದೇನು?

ಮದ್ಯ ಖರೀದಿ ಮತ್ತು ಸೇವನೆ ವಯಸ್ಸಿನ ಮಿತಿ ಇಳಿಕೆ – ಅಬಕಾರಿ ಸಚಿವ ಹೇಳಿದ್ದೇನು?

ಬೆಂಗಳೂರು: ರಾಜ್ಯ ಸರ್ಕಾರ ಮದ್ಯ ಸೇವನೆ ಮತ್ತು ಖರೀದಿಯ ವಯಸ್ಸಿನ ಮಿತಿಯನ್ನು 21 ರಿಂದ 19ಕ್ಕೆ ಇಳಿಸಬೇಕೆಂದು ಪ್ರಸ್ತಾವನೆ ಮಾಡಿತ್ತು. ಇದೀಗ ಮದ್ಯ ಸೇವನೆ ಮತ್ತು ಖರೀದಿಯ ವಯಸ್ಸಿನ ಮಿತಿಯನ್ನು ಇಳಿಸದಿರಲು ತೀರ್ಮಾನ ಕೈಗೊಳ್ಳಲಾಗಿದೆ.

ಕರ್ನಾಟಕ ಅಬಕಾರಿ ಕಾಯ್ದೆ-1965 ರ ನಿಬಂಧನೆಗಳ ಪ್ರಕಾರ, ಮದ್ಯದ ಖರೀದಿ ಮತ್ತು ಸೇವನೆಗೆ ಕನಿಷ್ಠ 18 ವರ್ಷ. ಆದರೆ ಕರ್ನಾಟಕ ಅಬಕಾರಿ ಪರವಾನಗಿ (ಸಾಮಾನ್ಯ ಷರತ್ತುಗಳು) ನಿಯಮ 1967 ರ ಪ್ರಕಾರ, ಕನಿಷ್ಠ ಕಾನೂನು ವಯಸ್ಸು 21 ಇದೆ.  ಹೀಗಾಗಿ ಈ ಗೊಂದಲಗಳಿಗೆ ತೆರೆ ಎಳೆಯಲು ರಾಜ್ಯ ಸರ್ಕಾರ ಮದ್ಯ ಸೇವನೆ ಮತ್ತು ಖರೀದಿ ವಯಸ್ಸನ್ನು 21 ರಿಂದ 18 ವರ್ಷಕ್ಕೆ ಇಳಿಸಲು ಚಿಂತನೆ ನಡೆಸಿತ್ತು. ಈ ಬಗ್ಗೆ ರಾಜ್ಯ ಅಬಕಾರಿ ಇಲಾಖೆ ಜನವರಿ 9 ರಂದು ಕರಡು ಪ್ರಕಟಿಸಿತ್ತು. ಅಲ್ಲದೇ  30 ದಿನಗಳಲ್ಲಿ ಸಾರ್ವಜನಿಕರು ಈ ಬಗ್ಗೆ ಆಕ್ಷೇಪಣೆ ಸಲ್ಲಿಸಬಹುದು ಎಂದು ಅಧಿಕಾರಿಗಳು ಸೂಚಿಸಿದ್ದರು.

ಇದನ್ನೂ ಓದಿ: ಕರ್ನಾಟಕದ ಮೇಲೆ ಕಣ್ಣಿಟ್ಟ ಮೋದಿ – ಬಿಎಸ್​ವೈ ಜೊತೆ ಗುಟ್ಟಾಗಿ ಮಾತನಾಡಿದ್ದೇನು..?

ಈ ನಿರ್ಧಾರದ ಬಗ್ಗೆ ಜನರಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಹಾಗಾಗಿ ವಯಸ್ಸಿನ ಮಿತಿಗೆ ಸಂಬಂಧಿಸಿದಂತೆ ಯಾವುದೇ ತಿದ್ದುಪಡಿ ಮಾಡದಿರಲು ಅಬಕಾರಿ ಇಲಾಖೆ ನಿರ್ಧರಿಸಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅಬಕಾರಿ ಸಚಿವ ಕೆ. ಗೋಪಾಲಯ್ಯ ‘ಕೆಲವು ವಿಚಾರಗಳಿಗೆ ಸಂಬಂಧಿಸಿದಂತೆ ಅಬಕಾರಿ ಕಾಯ್ದೆ ಮತ್ತು ನಿಯಮಗಳಲ್ಲಿ ವ್ಯತ್ಯಾಸವಿದೆ. ಅವುಗಳನ್ನು ಸರಿಪಡಿಸಲು ತಿದ್ದುಪಡಿ ತರುವ ಪ್ರಸ್ತಾವನೆ ಸಿದ್ದಪಡಿಸಲಾಗಿದೆ. ಅದರಲ್ಲಿ ವಯಸ್ಸಿನ ಮಿತಿ ಇಳಿಕೆಯೂ ಸೇರಿತ್ತು. ಆದರೆ ಜನರಿಂದ ವಿರೋಧ ವ್ಯಕ್ತವಾಗಿದೆ. ಹಾಗಾಗಿ ಮದ್ಯ ಖರೀದಿ ಹಾಗೂ ಸೇವನೆಯ ಮಿತಿಯನ್ನು ಬದಲಾವಣೆ ಮಾಡದಂತೆ ಇಲಾಖೆಗೆ ನಿರ್ದೇಶನ ನೀಡಿದ್ದೇನೆ. ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ನಿಯಮ ತಿದ್ದುಪಡಿಗೆ ಸಂಬಂಧಿಸಿದಂತೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಮದ್ಯ ಮಾರಾಟದಿಂದ 2019-20ರಲ್ಲಿ 21,583 ಕೋಟಿ ರೂ., 2021-22ರಲ್ಲಿ 26,377 ಕೋಟಿ ರೂ. ಆದಾಯ ಸರ್ಕಾರದ ಬೊಕ್ಕಸಕ್ಕೆ ಬಂದಿದೆ. ಗೋವಾ, ಹಿಮಾಚಲ ಪ್ರದೇಶ, ಸಿಕ್ಕಿಂ ಮತ್ತು ಪುದುಚೇರಿಯಂತಹ ಕೆಲವು ರಾಜ್ಯಗಳು ವಯಸ್ಸಿನ ಮಿತಿಯನ್ನು 18 ವರ್ಷಕ್ಕೆ ಇಳಿಸಿವೆ.

suddiyaana