ಮತದಾರರು ಕೈ ಕೊಟ್ರೆ ಚುನಾವಣೆ ಬಳಿಕ ಗ್ಯಾರಂಟಿ ಯೋಜನೆಗಳು ಬಂದ್? – ಕಾಂಗ್ರೆಸ್‌ ಗಿಮಿಕ್‌ ಏನು?

ಮತದಾರರು ಕೈ ಕೊಟ್ರೆ ಚುನಾವಣೆ ಬಳಿಕ ಗ್ಯಾರಂಟಿ ಯೋಜನೆಗಳು ಬಂದ್? – ಕಾಂಗ್ರೆಸ್‌ ಗಿಮಿಕ್‌ ಏನು?

ಲೋಕಸಭಾ ಚುನಾವಣೆ ಹತ್ತಿರವಾದಂತೆಲ್ಲಾ ಪ್ರಚಾರದ ಅಬ್ಬರವೂ ಜೋರಾಗುತ್ತಿದೆ. ಕರ್ನಾಟಕದಲ್ಲಂತೂ ಮೂರೂ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದೆ. ಒಂದ್ಕಡೆ ಬಿಜೆಪಿ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ರೆ ಮತ್ತೊಂದೆಡೆ ಕಾಂಗ್ರೆಸ್ ಏಕಾಂಗಿ ಹೋರಾಟದ ಕಹಳೆ ಮೊಳಗಿಸಿದೆ. ಆದ್ರೆ ಈ ಬಾರಿಯ ಚುನಾವಣೆಯಲ್ಲಿ ಅತೀ ಹೆಚ್ಚು ಸುದ್ದಿಯಾಗ್ತಿರೋ ವಿಚಾರ ಅಂದ್ರೆ ಗ್ಯಾರಂಟಿ ಯೋಜನೆಗಳು. ಹೋದಲ್ಲಿ ಬಂದಲ್ಲೆಲ್ಲಾ ಕಾಂಗ್ರೆಸ್ ನಾಯಕರು ಗ್ಯಾರಂಟಿ ಯೋಜನೆಗಳನ್ನೇ ಮುಂದೆ ಮಾಡಿ ಜನರ ಬಳಿ ವೋಟ್ ಕೇಳುತ್ತಿದ್ದಾರೆ. ಆದ್ರೆ ಬಿಜೆಪಿ ನಾಯಕರು ಅದೇ ಯೋಜನೆಗಳನ್ನ ತಿರುಗುಬಾಣವಾಗಿ ಪ್ರಯೋಗ ಮಾಡ್ತಿದ್ದಾರೆ. ಚುನಾವಣೆ ಬಳಿಕ ಗ್ಯಾರಂಟಿ ಸ್ಕೀಮ್​ಗಳು ಸ್ಥಗಿತವಾಗುತ್ತವೆ ಎಂದೇ ಚರ್ಚೆಯಾಗ್ತಿದೆ. ಹಾಗಾದ್ರೆ ಎಲೆಕ್ಷನ್ ರಿಸಲ್ಟ್ ಬಳಿಕ ಕರ್ನಾಟಕದಲ್ಲಿ ಫ್ರೀ ಬಸ್ ಸಂಚಾರ ಇರಲ್ವಾ..? ಗೃಹಲಕ್ಷ್ಮೀ ಹಣ ಬರಲ್ವಾ..? ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿ ಯೋಜನೆಗಳ ಕಥೆ ಏನು ಅನ್ನೋ ಮಾಹಿತಿ ಇಲ್ಲಿದೆ..

ಇದನ್ನೂ ಓದಿ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ.. – ದಕ್ಷಿಣ ಕನ್ನಡ ಪ್ರಥಮ ಸ್ಥಾನ

ಗ್ಯಾರಂಟಿ ಯೋಜನೆಗಳನ್ನೇ ಅಸ್ತ್ರ ಮಾಡಿಕೊಂಡು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್  ಭರ್ಜರಿ ಜಯ ಗಳಿಸಿತ್ತು. ಅದೇ ಜೋಶ್ ನಲ್ಲೇ ಲೋಕಸಭಾ ಚುನಾವಣೆಯಲ್ಲೂ ಹೆಚ್ಚು ಸ್ಥಾನಗಳನ್ನ ಗೆಲ್ಲೋ ವಿಶ್ವಾಸದಲ್ಲಿದೆ. ಸಿಎಂ ಸಿದ್ದರಾಮಯ್ಯರಂತೂ ಪ್ರಚಾರದ ವೇಳೆ ಗ್ಯಾರಂಟಿ ಯೋಜನೆಗಳನ್ನ ಪ್ರಸ್ತಾಪ ಮಾಡುತ್ತಿದ್ದಾರೆ. ನುಡಿದಂತೆ ನಡೆದಿದ್ದೇವೆ. ನಮ್ಮ ಗ್ಯಾರಂಟಿ ಯೋಜನೆಗಳನ್ನೇ ಕದ್ದು ಬಿಜೆಪಿ ಮೋದಿ ಗ್ಯಾರಂಟಿ ಮೋದಿ ಗ್ಯಾರಂಟಿ ಎನ್ನುತ್ತಿದೆ ಎಂದು ಲೇವಡಿ ಮಾಡುತ್ತಿದ್ದಾರೆ. ಇದೇ ಗ್ಯಾರಂಟಿ ಸ್ಕೀಮ್​ಗಳ ವಿಚಾರವಾಗಿ ಆಡಳಿತ ಮತ್ತು ವಿಪಕ್ಷಗಳ ನಡುವೆ ವಾಗ್ವಾದವೇ ನಡೆಯುತ್ತಿದೆ.

ಗ್ಯಾರಂಟಿ ಯುದ್ಧ! 

ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಲೋಕಸಭೆ ಚುನಾವಣೆಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನೀಡಿದ ಗ್ಯಾರಂಟಿ ಯೋಜನೆಗಳು ಸ್ಥಗಿತವಾಗಲಿವೆ ಎಂದು ಭವಿಷ್ಯ ನುಡಿದಿದ್ದಾರೆ. ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಚುನಾವಣೆ ಮುಗಿದ ಮೇಲೆ ಯಾವ ಗ್ಯಾರಂಟಿ ಯೋಜನೆಗಳೂ ಇರೋದಿಲ್ಲ ಎಂದು ಕಿಡಿ ಕಾರಿದ್ದಾರೆ. ಇನ್ನು ಇತ್ತೀಚೆಗಷ್ಟೇ ಬಿಜೆಪಿಗೆ ಸೇರ್ಪಡೆಯಾಗಿರುವ ಗಣಿಧಣಿ ಜನಾರ್ದನ ರೆಡ್ಡಿ, ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ನಿಲ್ಲಿಸ್ತೇನೆ ಅಂದ್ರೆ ನಾವು ಸುಲಭವಾಗಿ ಬಿಡಲ್ಲ ಅಂತಾ ಸವಾಲು ಹಾಕಿದ್ದಾರೆ. ಆದ್ರೆ ಕಾಂಗ್ರೆಸ್ ನಾಯಕರು ಮಾತ್ರ ಐದು ವರ್ಷವೂ ಐದೂ ಯೋಜನೆಗಳು ಇರಲಿವೆ ಎಂದು ಅಭಯ ನೀಡಿದ್ದಾರೆ.  ಈ ಬಗ್ಗೆ ಮಾತನಾಡಿರುವ ಸಿದ್ದರಾಮಯ್ಯ, ‘ನಾವು ಘೋಷಣೆ ಮಾಡಿದ್ದ 5 ಗ್ಯಾರಂಟಿಗಳನ್ನೂ ಅನುಷ್ಠಾನಗೊಳಿಸಿದ್ದೇವೆ. ಜೊತೆಗೆ ನಮ್ಮ ಗ್ಯಾರಂಟಿ ಯೋಜನೆಗಳು 5 ವರ್ಷವೂ ಮುಂದುವರಿಯುತ್ತೆ ಎನ್ನುವ ಮೂಲಕ ಊಹಾಪೋಹಗಳಿಗೆ ಉತ್ತರ ಕೊಟ್ಟಿದ್ದಾರೆ. ನಾವು ಮುಂದಿನ ವರ್ಷಕ್ಕೂ ಗ್ಯಾರಂಟಿ ಯೋಜನೆಗೆ ಹಣ ಮೀಸಲಿಟ್ಟಿದ್ದೇವೆ. ಬಿಜೆಪಿಯವರು ಹೇಳಿದ್ದು ಎಲ್ಲವೂ ಸುಳ್ಳು, ಲೋಕಸಭಾ ಚುನಾವಣೆಯ ನಂತರವೂ ನಮ್ಮ ಗ್ಯಾರಂಟಿ ಯೋಜನೆಗಳು 5 ವರ್ಷವೂ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಗ್ಯಾರಂಟಿಗಳ ವಿಚಾರದಲ್ಲಿ ಇನ್ನೊಂದು ಅಚ್ಚರಿ ಅಂದ್ರೆ ಕಾಂಗ್ರೆಸ್ ನಾಯಕರು ಕೂಡ ಗ್ಯಾರಂಟಿ ಯೋಜನೆಗಳ ಸ್ಥಗಿತದ ಬಗ್ಗೆ ಮಾತನಾಡಿದ್ದಾರೆ. ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌, ಬಿಜೆಪಿಗೆ ಮತ ನೀಡಿದರೆ ರಾಜ್ಯ ಕಾಂಗ್ರೆಸ್ ಸರ್ಕಾರದ ‘ಗ್ಯಾರಂಟಿ ಯೋಜನೆಗಳು ರದ್ದಾಗಬಹುದು ಎಂದಿದ್ರು.  ಹಾಗೇ ಮಾಗಡಿ ಶಾಸಕ ಬಾಲಕೃಷ್ಣ ಹೇಳಿಕೆಯೂ ಕೋಲಾಹಲ ಎಬ್ಬಿಸಿತ್ತು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಗ್ಯಾರಂಟಿ ಯೋಜನೆಗಳು ರದ್ದುಗೊಳ್ಳಲಿದೆ ಎಂದಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗೆ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಗ್ಯಾರಂಟಿ ಯೋಜನೆಗಳ ಗುದ್ದಾಟ ನಡೆಯುತ್ತಿದೆ. ಜನ ಕೂಡ ಗೊಂದಲದಲ್ಲಿದ್ದಾರೆ.

Shwetha M