ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಬ್ರೇಕ್! ಸರ್ಜರಿ ದರಕ್ಕೆ ಸರ್ಕಾರದಿಂದ ಕಡಿವಾಣ?

ಔಷಧಿಗಳ ಬೆಲೆ ನಿಯಂತ್ರಣದ ಬೆನ್ನಲ್ಲೇ, ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಂದ ಮನಬಂದಂತೆ ಹಣ ವಸೂಲಿ ಮಾಡುವುದಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಡಲು ಮುಂದಾಗಿದೆ. ಒಂದೇ ರೀತಿಯ ಶಸ್ತ್ರಚಿಕಿತ್ಸೆಗೆ ಒಂದು ಆಸ್ಪತ್ರೆಯಲ್ಲಿ ಕಡಿಮೆ ಬಿಲ್ ವಿಧಿಸಿದರೆ, ಮತ್ತೊಂದು ಆಸ್ಪತ್ರೆಯಲ್ಲಿ ದುಬಾರಿ ಮೊತ್ತ ವಸೂಲಿ ಮಾಡುತ್ತಿರುವ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚ ನಿಯಂತ್ರಣಕ್ಕೆ ಮುಂದಾಗಿದೆ.
ಸದ್ಯ ಖಾಸಗಿ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ, ವೈದ್ಯರ ಶುಲ್ಕ, ಕೊಠಡಿ ಬಾಡಿಗೆ, ಔಷಧಿ ಹಾಗೂ ಇತರೆ ವೈದ್ಯಕೀಯ ಸೇವೆಗಳಿಗೆ ವಿಧಿಸುವ ದರಗಳಲ್ಲಿ ಸಾಕಷ್ಟು ವ್ಯತ್ಯಾಸ ಕಂಡುಬರುತ್ತದೆ. ಇದರಿಂದ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳು ಮತ್ತು ಅವರ ಕುಟುಂಬದವರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ಎದುರಾಗುತ್ತಿದೆ.
ಇದನ್ನೂ ಓದಿ: ಈ ಆಹಾರಗಳನ್ನ ಸೇವಿಸಿದ್ರೆ ಬ್ಯಾಡ್ ಕೊಲೆಸ್ಟ್ರಾಲ್ ಬರಲ್ಲ! – ಮನೆಯಲ್ಲೇ ಟ್ರೈ ಮಾಡಿ ಈ ರೆಸಿಪಿ!
ವಿಶೇಷವಾಗಿ ಹೃದಯ ಶಸ್ತ್ರಚಿಕಿತ್ಸೆ, ಮೂಳೆ ಚಿಕಿತ್ಸೆ ಹಾಗೂ ಇತರೆ ಪ್ರಮುಖ ಸರ್ಜರಿಗಳಿಗೆ ಲಕ್ಷಾಂತರ ರೂಪಾಯಿ ವೆಚ್ಚವಾಗುವ ಸಂದರ್ಭಗಳಿವೆ. ಇಂತಹ ಸಂದರ್ಭದಲ್ಲಿ ಆಸ್ಪತ್ರೆಗಳು ವಿಧಿಸುವ ಬಿಲ್ಗಳಲ್ಲಿ ಪಾರದರ್ಶಕತೆ ಇರಬೇಕು ಎಂಬುದು ಸಾರ್ವಜನಿಕರ ಪ್ರಮುಖ ಬೇಡಿಕೆಯಾಗಿದೆ.
ಈ ಅನ್ಯಾಯ ತಪ್ಪಿಸಲು ಮತ್ತು ಚಿಕಿತ್ಸಾ ವೆಚ್ಚದಲ್ಲಿ ಏಕರೂಪತೆ ತರಲು ಆರೋಗ್ಯ ಇಲಾಖೆ ಗಂಭೀರ ಚಿಂತನೆ ನಡೆಸಿದೆ. ಖಾಸಗಿ ಆಸ್ಪತ್ರೆಗಳ ದರ ನಿಯಂತ್ರಣಕ್ಕೆ ಹೊಸ ನೀತಿಯನ್ನು ರೂಪಿಸುವ ನಿಟ್ಟಿನಲ್ಲಿ ಈಗಾಗಲೇ ‘ಫನಾ’ (PHANA – Private Hospitals and Nursing Homes Association) ಖಾಸಗಿ ಆಸ್ಪತ್ರೆಗಳ ಒಕ್ಕೂಟದ ಜೊತೆ ಪ್ರಾಥಮಿಕ ಹಂತದ ಸಭೆಯನ್ನು ನಡೆಸಲಾಗಿದೆ. ಮುಂದಿನ ವಾರದಲ್ಲೇ ಚಿಕಿತ್ಸಾ ವೆಚ್ಚಕ್ಕೆ ಸಂಬಂಧಿಸಿದಂತೆ ಏಕರೂಪದ ದರ ನಿಗದಿಪಡಿಸುವ ಸಾಧ್ಯತೆಯಿದೆ.
ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಒಂದೇ ರೀತಿಯ ಚಿಕಿತ್ಸೆಗೆ ಆಸ್ಪತ್ರೆಗಳು ವಿಧಿಸುವ ದರಗಳನ್ನು ಪರಿಶೀಲಿಸಿ, ಸೂಕ್ತ ನಿಯಂತ್ರಣ ಕ್ರಮಗಳನ್ನು ರೂಪಿಸುವತ್ತ ಗಮನಹರಿಸಿದೆ ಎಂದು ವರದಿಯಾಗಿದೆ.

ನೋಡಿರಿ

