ಶಾಲಾ ವಿದ್ಯಾರ್ಥಿಗಳ ಶೂ, ಸಾಕ್ಸ್ ಖರೀದಿಗೆ ಅನುದಾನ ಬಿಡುಗಡೆ – ಮಕ್ಕಳ ಹಣಕ್ಕೂ ಸರ್ಕಾರ ಕತ್ತರಿ!

ಶಾಲಾ ವಿದ್ಯಾರ್ಥಿಗಳ ಶೂ, ಸಾಕ್ಸ್ ಖರೀದಿಗೆ ಅನುದಾನ ಬಿಡುಗಡೆ – ಮಕ್ಕಳ ಹಣಕ್ಕೂ ಸರ್ಕಾರ ಕತ್ತರಿ!

ಬೆಂಗಳೂರು: ಶಾಲೆ ಪ್ರಾರಂಭವಾಗಿ ತಿಂಗಳುಗಳೇ ಕಳೆದಿದ್ದು, ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಶೂ, ಸಾಕ್ಸ್ ಖರೀದಿಗೆ ಕರ್ನಾಟಕ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ. ಆದ್ರೆ ಮಕ್ಕಳಿಗೆ ನೀಡುವ ಶೂ, ಸಾಕ್ಸ್‌ ಗೆ ನೀಡುತ್ತಿರುವ ಹಣಕ್ಕೂ ಸರ್ಕಾರ ಕತ್ತರಿ ಹಾಕಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ 2022-23ನೇ ಸಾಲಿನಲ್ಲಿ ಶೂ, ಸಾಕ್ಸ್ ಖರೀದಿಗೆ 132 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿತ್ತು. ಆದ್ರೆ, ಇದೀಗ ಕಾಂಗ್ರೆಸ್ ಸರ್ಕಾರ 2023-24ನೇ ಸಾಲಿನಲ್ಲಿ ಮಕ್ಕಳಿಗೆ ನೀಡುವ ಶೂ, ಸಾಕ್ಸ್‌ ಅನುದಾನದಲ್ಲಿ ಸರ್ಕಾರ ಬರೋಬ್ಬರಿ 7 ಕೋಟಿ ರೂಪಾಯಿ ಕಡಿತ ಮಾಡಿದ್ದು, ಈ ಬಾರಿ 125 ಕೋಟಿ ರೂ. ಬಿಡುಗಡೆಗೊಳಿಸಿದೆ.

ಇದನ್ನೂ ಓದಿ: ಡೆತ್ ವೇ ಆಗುತ್ತಿದೆ ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ವೇ – ಎಡಿಜಿಪಿ ಅಲೋಕ್ ಕುಮಾರ್ ಪರಿಶೀಲನೆ, ಅಧಿಕಾರಿಗಳಿಗೆ ಖಡಕ್ ಸೂಚನೆ

BJP ಅವಧಿಯಲ್ಲಿ ಶೂಗೆ ನಿಗದಿ ಮಾಡಿದ್ದ ದರವೇ ಈ ವರ್ಷವೂ ಫಿಕ್ಸ್ ಆಗಿದ್ದು, ಕಳೆದ ವರ್ಷದ ದರದಲ್ಲೇ ಶೂ, ಸಾಕ್ಸ್ ಖರೀದಿ ಮಾಡುವಂತೆ ಸೂಚನೆ ನೀಡಲಾಗಿದೆ. 1ರಿಂದ 10ನೇ ತರಗತಿ ಮಕ್ಕಳಿಗೆ 1 ಜತೆ ಶೂ, 2 ಜತೆ ಸಾಕ್ಸ್ ಖರೀದಿಗೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.

ಯಾವ ತರಗತಿಗೆ ಎಷ್ಟು ದರದ ಶೂ ವಿತರಣೆ ಮಾಡಬೇಕೆಂದು ಸರ್ಕಾರ ತಿಳಿಸಿದೆ. 1 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ 265 ರೂಪಾಯಿ ಬೆಲೆಯ ಶೂ, 6 ರಿಂದ 8 ನೇ ತರಗತಿಯ ವಿದ್ರಾರ್ಥಿಗಳಿಗೆ 295 ರೂಪಾಯಿ ಬೆಲೆಯ ಶೂ ಹಾಗೇ 9, 10 ನೇ ತರಗತಿ ವಿದ್ಯಾರ್ಥಿಗಳಿಗೆ 325 ರೂ.ನಲ್ಲಿ ಖರೀದಿ ಮಾಡಬೇಕು ಎಂದು ಸರ್ಕಾರ ಹೇಳಿದೆ.

ಕಡಿಮೆ ಹಣದಲ್ಲಿ ಗುಣಮಟ್ಟದ ಶೂ ಕೊಡಬೇಕು ಎಂದು ಎಲ್ಲಾ ಶಾಲೆಗಳಿಗೂ ಸರ್ಕಾರ ಸೂಚನೆ ನೀಡಿದೆ. ಸರ್ಕಾರ ನಿಗದಿ ಮಾಡಿರುವ ಹಣದಲ್ಲಿ ಹೆಸರಾಂತ ಕಂಪನಿಗಳ ಶೂ ಕೊಡಬೇಕು ಎಂದು ಹೇಳಿ ಈಗ ಅನುದಾನ ಕಡಿತ ಮಾಡಿದೆ. ಶೂ ಖರೀದಿಗೆ ಹಣ ಸಾಕಾಗದೇ ಹೋದರೆ ಏನು ಮಾಡಬೇಕು ಎಂಬ ಬಗ್ಗೆಯೂ ಸರ್ಕಾರ ಸಲಹೆ ನೀಡಿದೆ.

ಸರ್ಕಾರದ ಈ ಆದೇಶ  ಶಿಕ್ಷಕರು ಹಾಗೂ ಶಾಲಾ ಆಡಳಿತ ಮಂಡಳಿಗೆ ತಲೆ ನೋವಾಗಿ ಪರಿಣಮಿಸಿದೆ. ಶಿಕ್ಷಕರು ಹಾಗೂ ಶಾಲಾ ಆಡಳಿತ ಮಂಡಳಿ ಅನಿವಾರ್ಯವಾಗಿ ಸಂಘ ಸಂಸ್ಥೆಗಳು, ದಾನಿಗಳ ಮೊರೆ ಹೋಗಬೇಕಾಗಿದೆ. ಸರ್ಕಾರದ ಆದೇಶದಿಂದ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಕಂಗಾಲಾಗಿದ್ದಾರೆ.

suddiyaana