ಬೆಂಗಳೂರಿನ ಮೆಟ್ರೋ ನಿಲ್ದಾಣಗಳಲ್ಲಿ ಪ್ರಿಪೇಯ್ಡ್ ಆಟೋ ಸೇವೆ?
ಬೆಂಗಳೂರು: ರಾಜ್ಯದಲ್ಲಿ ಶಕ್ತಿಯೋಜನೆ ಆರಂಭವಾದ ಮೇಲೆ ಆಟೋಗಳತ್ತ ಪ್ರಯಾಣಿಕರು ಮುಖಮಾಡುತ್ತಿಲ್ಲ. ಇದರಿಂದಾಗಿ ಆದಾಯ ಗಳಿಕೆ ಆಗುತ್ತಿಲ್ಲ. ಕುಟುಂಬ ನಡೆಸಲು ಕಷ್ಟವಾಗುತ್ತಿದೆ ಎಂದು ಆಟೋ ಚಾಲಕರು ಕೊರಗುತ್ತಿದ್ದಾರೆ. ಇದೀಗ ಆಟೋ ಚಾಲಕರ ನೋವು ಸರ್ಕಾರಕ್ಕೆ ಕೇಳಿಸಿದಂತಿದೆ. ಆಟೋ ಚಾಲಕರ ನೋವಿಗೆ ಸ್ಪಂದಿಸೋ ನಿಟ್ಟಿನಲ್ಲಿ ಸರ್ಕಾರ ಹೊಸ ಐಡಿಯಾ ರೂಪಿಸುತ್ತಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸದ್ಯ ಬರೊಬ್ಬರಿ 2 ಲಕ್ಷ 10 ಸಾವಿರಕ್ಕೂ ಅಧಿಕ ಆಟೋಗಳಿವೆ. ಕ್ಯಾಬ್, ಮೆಟ್ರೋ, ರಾಪಿಡೋ ಬೈಕ್ ಬಂದ ಮೇಲೆ ಜನರು ಆಟೋದಲ್ಲಿ ಪ್ರಯಾಣಿಸುವುದನ್ನು ಕಡಿಮೆ ಮಾಡಿದ್ದರು, ಶಕ್ತಿ ಯೋಜನೆ ಆರಂಭವಾದ ಮೇಲಂತೂ ಜನರು ಆಟೋದಲ್ಲಿ ಪ್ರಯಾಣ ಮಾಡುತ್ತಿಲ್ಲ ಅನ್ನೋ ಕೂಗು ಜಾಸ್ತಿಯಾಗಿದೆ. ವ್ಯಾಪಾರದಲ್ಲಿ ನಷ್ಟ ಎದುರಿಸುತ್ತಿರೋ ಆಟೋ ಚಾಲಕರ ಮನವಿ ಈಗ ಸಾರಿಗೆ ಸಚಿವರ ಗಮನಕ್ಕೆ ತರಲಾಗಿದೆ. ನಗರದಲ್ಲಿರೋ ಪ್ರಮುಖ ಮೆಟ್ರೋ ನಿಲ್ದಾಣಗಳ ಬಳಿ ಆಟೋ ಸ್ಟಾಂಡ್ ನಿರ್ಮಿಸಿ ಕೊಡೋದಕ್ಕೆ ಮನವಿಯನ್ನು ಅವರ ಮುಂದಿಡಲಾಗಿದೆ.
ಇದನ್ನೂ ಓದಿ: ಆಗಸ್ಟ್ 1 ರಿಂದ ದುಬಾರಿ ದುನಿಯಾ – ಬಾಯಿ ಸುಡಲಿದೆ ಹೋಟೆಲ್‌ನ ಊಟ, ತಿಂಡಿ
ಆಟೋ ಚಾಲಕರ ಸಂಕಷ್ಟವನ್ನು ಪರಿಹರಿಸಲು ಸಾರಿಗೆ ಸಚಿವರು ಪ್ಲಾನ್ ಮಾಡಿದ್ದಾರೆ. ನಗರದಲ್ಲಿರೋ ಬಹುತೇಕ ಎಲ್ಲ ಪ್ರಮುಖ ಮೆಟ್ರೋ ನಿಲ್ದಾಣಗಳ ಬಳಿ ಆಟೋ ಸ್ಟಾಂಡ್ ನಿರ್ಮಿಸಿಕೊಡಲು ಚಿಂತನೆ ನಡೆಸಲಾಗ್ತಿದೆ. ಸರ್ಕಾರ ಅಥವಾ ಬಿಬಿಎಂಪಿ ವತಿಯಿಂದ ಸುಮಾರು 10ರಿಂದ 20 ಆಟೋಗಳನ್ನು ನಿಲ್ಲಿಸುವಷ್ಟು ಜಾಗದಲ್ಲಿ ಸ್ಟಾಂಡ್ ನಿರ್ಮಿಸಲು ಯೋಜನೆ ರೂಪಿಸಲಾಗೋ ಮುನ್ಸೂಚನೆ ಈಗಾಗಲೇ ಲಭಿಸಿದೆ. ಇನ್ನು ಮೊದಲ ಎರಡು ಕಿಲೋಮೀಟರ್‌ಗಳಿಗೆ 30 ರೂ. ಮತ್ತು ನಂತರದ ಪ್ರತಿ ಕಿಲೋಮೀಟರ್‌ಗೆ 15 ರೂ. ಜೊತೆಗೆ 10 ರೂ. ಇತರೆ ಚಾರ್ಜಸ್ಗೆ ಎಂದು ದರ ನಿಗದಿಪಡಿಸಲು ಚಿಂತನೆ ನಡೆದಿದೆ.
ಕಳೆದ 8 -10 ವರ್ಷಗಳ ಹಿಂದೆ ಪ್ರೀಪೇಯ್ಡ್ ಆಟೋ ಸ್ಟಾಂಡ್‌ಗಳು ನಗರದಲ್ಲಿ ತಲೆಯೆತ್ತಿತ್ತು. ಎಲ್ಲಿಂದ ಎಲ್ಲಿಗೇ ಹೋಗಬೇಕಿದ್ರೂ ಮೊದಲೇ ನಿಗದಿಪಡಿಸಿರೋ ಮೊತ್ತವನ್ನು ನೀಡಿ ಪ್ರಯಾಣ ಬೆಳೆಸಬಹುದಾಗಿತ್ತು. ಆಟೋ ಚಾಲಕರು ವಸೂಲಿ ಮಾಡ್ತಾರೆ ಅನ್ನೋ ಆರೋಪ ತಳ್ಳಿಹಾಕಲು ಈ ಯೋಜನೆಯನ್ನು ಚಾಲ್ತಿಗೆ ತರಲಾಗಿತ್ತು. ಆದ್ರೆ, ಇವುಗಳ ಸದ್ಬಳಕೆ ಆಗದೇ ಇವು ಮೂಲೆಗುಂಪಾಗಿದ್ದು ಈ ಪದ್ದತಿಯನ್ನು ವಾಪಸ್ ತರಲು ಚಿಂತನೆ ನಡೆಸಲಾಗಿದೆ. ಪ್ರಮುಖ ಮೆಟ್ರೋ ನಿಲ್ದಾಣಗಳ ಬಳಿ ಪ್ರಿಪೇಯ್ಡ್ ಹಾಗೂ ಸಾಮಾನ್ಯ ಆಟೋ ಸ್ಟಾಂಡ್‌ಗಳನ್ನು ನಿರ್ಮಿಸುವುದರಿಂದ ಆಟೋ ಚಾಲಕರಿಗೆ ಎಷ್ಟು ಅನುಕೂಲವಾಗುತ್ತೋ, ಅಷ್ಟೇ ಅನುಕೂಲ ಪ್ರಯಾಣಿಕರಿಗೂ ಆಗಲಿದೆ.