ಸ್ವಿಗ್ಗಿ, ಝೋಮಾಟೊನಂತಹ ಗಿಗ್‌ ಕಾರ್ಮಿಕರಿಗೆ ಜೀವ, ಅಪಘಾತ ವಿಮೆ ಜಾರಿಗೊಳಿಸಿದ ಸರ್ಕಾರ

ಸ್ವಿಗ್ಗಿ, ಝೋಮಾಟೊನಂತಹ ಗಿಗ್‌ ಕಾರ್ಮಿಕರಿಗೆ ಜೀವ, ಅಪಘಾತ ವಿಮೆ ಜಾರಿಗೊಳಿಸಿದ ಸರ್ಕಾರ

ಬೆಂಗಳೂರು: 2023-24ನೇ ಸಾಲಿನ ಆಯವ್ಯಯ ಘೋಷಣೆಯಂತೆ ಇ-ಕಾಮರ್ಸ್ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗಿಗ್ ಕಾರ್ಮಿಕರಿಗೆ ಅಂದರೆ ಸ್ವಿಗ್ಗಿ,ಝೋಮಾಟೊ ಮತ್ತು ಅಮೆಜಾನ್‌ನಂತಹ ಇ – ಕಾಮರ್ಸ್‌ ಡೆಲವರಿ ಬಾಯ್‌ಗಳಿಗೆ ಜೀವ ವಿಮೆ ಹಾಗೂ ಅಪಘಾತ ವಿಮಾ ಯೋಜನೆ ಅನುಷ್ಠಾನಗೊಳಿಸುವ ಬಗ್ಗೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ ತಿಂಗಳಲ್ಲಿ 2023-24ನೇ ಸಾಲಿನ ಬಜೆಟ್ ಮಾಡಿದ್ದರು. ಈ ಆಯವ್ಯಯದಲ್ಲಿ ಗಿಗ್​ ಕೆಲಸಗಾರರಿಗೆ ಅಂದರೇ ಸ್ವಿಗ್ಗಿ, ಜೊಮಾಟೊ ಮತ್ತು ಅಮೆಜಾನ್​​ನಂತಹ ಇ-ಕಾಮರ್ಸ್​​ ಡೆವಲರಿ ಬಾಯ್​​ಗಳಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ 2 ಲಕ್ಷ ರೂ. ಜೀವ ವಿಮೆ ಹಾಗೂ 2 ಲಕ್ಷ ರೂ. ಅಪಘಾತ ವಿಮೆ ಸೇರಿದಂತೆ 4 ಲಕ್ಷ ರೂ. ವಿಮೆ ದೊರೆಯಲಿದೆ.

ಇದನ್ನೂ ಓದಿ: ಚಲಿಸುವ ಕಾರಿನ ಸನ್‌ರೂಫ್‌ನಿಂದ ಹೊರಗೆ ಇಣುಕಿ ನೋಡುತ್ತೀರಾ? ಎಚ್ಚರ.. ನಿಮಗೂ ಬೀಳುತ್ತೆ ಭಾರಿ ದಂಡ!

2022 ರ ನೀತಿ ಆಯೋಗದ ವರದಿ ಪ್ರಕಾರ ರಾಜ್ಯದಲ್ಲಿ ಅಂದಾಜು 2.3 ಲಕ್ಷ ಗಿಗ್ ಕೆಲಸಗಾರರಿದ್ದಾರೆ. ಆದರೆ ರಾಜ್ಯ ಕಾರ್ಮಿಕ ಇಲಾಖೆಯು ಈ ಬಗ್ಗೆ ಯಾವುದೇ ನಿಖರ ಅಂಕಿ-ಸಂಖ್ಯೆ ಹೊಂದಿಲ್ಲ. ಸರಕು ಮತ್ತು ಸೇವೆಗಳನ್ನು ನಿಗದಿತ ಸಮಯದಲ್ಲಿ ತಲುಪಿಸಲು ಜೀವವನ್ನು ಪಣಕ್ಕಿಟ್ಟು ಕೆಲಸ ಮಾಡುವ ಕಾರ್ಮಿಕರ ಭದ್ರತೆಗೆ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಪ್ರಯೋಜನ ಪಡೆಯಬೇಕಾದರೇ ಕೆಲವು ಷರತ್ತುಗಳನ್ನು ಸರ್ಕಾರ ವಿಧಿಸಿದೆ. ಅವು ಈ ಕೆಳಗಿನಂತಿದೆ.

ಜೀವ, ಅಪಘಾತ ಜೀವ ವಿಮೆ ಷರತ್ತುಗಳು

  • 18-60 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ಮತ್ತು ಕನಿಷ್ಠ ಒಂದು ವರ್ಷದ ಅವಧಿಯವರೆಗೆ ಯಾವುದೇ ಆನ್‌ಲೈನ್ ಆಹಾರ ವಿತರಣೆ ಅಥವಾ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಕಂಪನಿಯಲ್ಲಿ ಗಿಗ್ ಕೆಲಸಗಾರರಾಗಿ ಕೆಲಸ ಮಾಡುತ್ತಿರಬೇಕು.
  • ಅಪಘಾತದಲ್ಲಿ ಮೃತಪಟ್ಟರೇ 4 ಲಕ್ಷ ರೂಪಾಯಿಗಳನ್ನು ಒದಗಿಸಲಾಗುತ್ತದೆ. ಇದರಲ್ಲಿ 2 ಲಕ್ಷ ರೂಪಾಯಿ ಅಪಘಾತ ಕವರೇಜ್ ಕೂಡ ಸೇರಿದೆ.
  • ಒಂದು ವೇಳೆ ಅಪಘಾತದಿಂದ ಗಾಯ ಮತ್ತು ಅಂಗವೈಕಲ್ಯರಾದರೆ ಅದರ ಪ್ರಮಾಣವನ್ನು ಆಧರಿಸಿ ಗಿಗ್ ಕೆಲಸಗಾರರಿಗೆ ಹಣ ನೀಡಲಾಗುತ್ತದೆ.
  • ಆಸ್ಪತ್ರೆಗೆ ದಾಖಲಾದರೆ, 1 ಲಕ್ಷದವರೆಗಿನ ಮೊತ್ತವನ್ನು ಮರುಪಾವತಿ ಮಾಡಲಾಗುತ್ತದೆ. ಗಿಗ್ ಕಾರ್ಮಿಕರು ಆದಾಯ ತೆರಿಗೆ ಪಾವತಿಸುತ್ತಿದ್ದರೆ, ಭವಿಷ್ಯ ನಿಧಿ ಅಥವಾ ಇಎಸ್‌ಐ ಹೊಂದಿದ್ದರೆ ಹಂತವರು ಯೋಜನೆಗೆ ಅರ್ಹರಾಗಿರುವುದಿಲ್ಲ.
  • ಕೆಲಸದಲ್ಲಿರುವಾಗ ಗಿಗ್  ಕಾರ್ಮಿಕ ಮದ್ಯಪಾನ ಅಥವಾ ಡ್ರಗ್ಸ್‌ನ ಅಮಲಿನಲ್ಲಿ ಅಪಘಾತ ಅಥವಾ ಮೃತಪಟ್ಟರೆ ಯೋಜನೆಯ ಪ್ರಯೋಜನಗಳಿಗೆ ಅರ್ಹರಾಗಿರುವುದಿಲ್ಲ.
  • ಗಿಗ್ ಕಾರ್ಮಿಕ ಆತ್ಮಹತ್ಯೆಯಿಂದ ಸತ್ತರೆ, ಉದ್ದೇಶಪೂರ್ವಕವಾಗಿ ಯಾರನ್ನಾದರೂ ನೋಯಿಸಲು ಅಪಘಾತದ ಕೃತ್ಯವನ್ನು ಮಾಡಿದರೆ ಅಥವಾ ಮಾನಸಿಕ ಅಸ್ಥಿರತೆಯಿಂದ ಅಪಘಾತ ಸಂಭವಿಸಿದಲ್ಲಿ ಯೋಜನೆಯ ಪ್ರಯೋಜನೆ ಪಡೆಯಲು ಸಾಧ್ಯವಿಲ್ಲ. ಅಪಘಾತ ಅಥವಾ ಸಾವಿನ ಒಂದು ವರ್ಷದೊಳಗೆ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವುದು ಹೇಗೆ?

  • ರಾಜ್ಯ ಸರ್ಕಾರದ ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕು.
  • ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ ಮತ್ತು ಇ-ಲೇಬರ್ ಐಡೆಂಟಿಟಿ ಕಾರ್ಡ್ ಸೇರಿದಂತೆ ವೈಯಕ್ತಿಕ ದಾಖಲೆ ಮತ್ತು ಬ್ಯಾಂಕ್ ಖಾತೆ ವಿವರ ನೀಡಿ ನೋಂದಾಯಿಸಿಬೇಕು.

suddiyaana