SSLC ವಿದ್ಯಾರ್ಥಿಗಳಿಗೆ ಶಾಕ್‌ ಕೊಟ್ಟ ಶಿಕ್ಷಣ ಇಲಾಖೆ – ಪರಿಕ್ಷಾ ಶುಲ್ಕ 5% ಹೆಚ್ಚಳ!

SSLC ವಿದ್ಯಾರ್ಥಿಗಳಿಗೆ ಶಾಕ್‌ ಕೊಟ್ಟ ಶಿಕ್ಷಣ ಇಲಾಖೆ – ಪರಿಕ್ಷಾ ಶುಲ್ಕ 5% ಹೆಚ್ಚಳ!

ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ರಾಜ್ಯದ ಜನರು ಹೈರಾಣಾಗಿದ್ದಾರೆ. ಬಸ್‌ ಟಿಕೆಟ್‌ ದರ, ಮೆಟ್ರೋ ದರ ಕೂಡ ಹೆಚ್ಚಳವಾಗಿದೆ. ಇದೀಗ ರಾಜ್ಯ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ಶಾಕ್‌ ನೀಡಿದೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ  ಹೆಚ್ಚಳ ಮಾಡಲಾಗಿದೆ.

ಇದನ್ನೂ ಓದಿ: ಮಾರ್ಕ್ ಫಸ್ಟ್ ಲಿರಿಕಲ್ ವಿಡಿಯೋ ರಿಲೀಸ್ – ಸೈಕ್ ಸೈತಾನ್ ಅಂತ ಅಬ್ಬರಿಸಿದ ಕಿಚ್ಚ ಸುದೀಪ್

ಈ ಬಾರಿ 10ನೇ ತರಗತಿ ವಾರ್ಷಿಕ ಪರೀಕ್ಷಾ ಶುಲ್ಕವನ್ನು 5% ಏರಿಕೆ ಮಾಡಿ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಆದೇಶ ಹೊರಡಿಸಿದೆ. ಅದರನ್ವಯ 2025-26ನೇ ಸಾಲಿನಲ್ಲಿ ನಡೆಯಲಿರುವ ಎಲ್ಲಾ ಪರೀಕ್ಷೆಗಳಿಗೆ ಪ್ರಸ್ತುತ ಇರುವ ದರಕ್ಕೆ ಶೇ.5 ರಷ್ಟು ಸೇರಿಸಿ ಶುಲ್ಕ ವಿಧಿಸಲಾಗುತ್ತದೆ. ಅಂದರೆ 676 ರೂಪಾಯಿ ಇದ್ದ SSLC ಪರೀಕ್ಷಾ ಶುಲ್ಕವನ್ನು ಇದೀಗ 710 ರೂ.ಗೆ ಹೆಚ್ಚಿಸಿಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.  ಪರೀಕ್ಷಾ ಶುಲ್ಕ ಏರಿಕೆಗೆ ವಿರೋಧ ವ್ಯಕ್ತವಾಗಿದೆ. ಶಿಕ್ಷಣ ಇಲಾಖೆಯ ಈ ನಿರ್ಧಾರದಿಂದ ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಎಂದು ಪೋಷಕರು ಅಸಮಾಧಾನ ಹೊರಹಾಕಿದ್ದಾರೆ.

ಈ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸಮಜಾಯಿಷಿ ನೀಡಿದ್ದು, ಉತ್ತರಪತ್ರಿಕೆಗಳ ಮೌಲ್ಯಮಾಪನ, ಮತ್ತು ಇತರ ಸಂಬಂಧಿತ ಆಡಳಿತಾತ್ಮಕ ವೆಚ್ಚಗಳು ಕಾಲಕಾಲಕ್ಕೆ ಏರುತ್ತಿರುವುದರಿಂದ ಈ ಕ್ರಮ ಅಗತ್ಯವೆಂದು ಪರಿಗಣಿಸಲಾಗಿದೆ. ಹಲವು ವರ್ಷಗಳಿಂದ ಪರೀಕ್ಷಾ ಶುಲ್ಕವನ್ನು ಪರಿಷ್ಕರಣೆ ಮಾಡಿರಲಿಲ್ಲ. ಆದ್ರೆ, ಇದೀಗ ವೆಚ್ಚಗಳು ಹೆಚ್ಚಳವಾಗುತ್ತಿರುವುದರಿಂದ ಪರೀಕ್ಷಾ ಶುಲ್ಕ ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದಿದೆ.

ಪರೀಕ್ಷಾ ಶುಲ್ಕ ದರ ಎಷ್ಟಿದೆ?

ಪ್ರಥಮ ಬಾರಿ ಹಾಜರಾಗುವ SSLC ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ – 676 ರೂ. ನಿಂದ 710 ರೂ.ಗೆ ಹೆಚ್ಚಳ.

ಹೊಸದಾಗಿ ನೋಂದಣಿಯಾಗುವ ಖಾಸಗಿ ಅಭ್ಯರ್ಥಿಗಳ ನೋಂದಣಿ ಶುಲ್ಕ ಹಾಗೂ ಅರ್ಜಿ ಶುಲ್ಕ 236 ರೂ. ನಿಂದ 248 ರೂ.ಗೆ ಹೆಚ್ಚಳ.

ಈಗಾಗಲೇ ಖಾಸಗಿ ಅಭ್ಯರ್ಥಿಯಾಗಿ ನೋಂದಣಿಯಾಗಿ ಪರೀಕ್ಷಾ ಶುಲ್ಕ ಪಾವತಿಸಿದ ಅಭ್ಯರ್ಥಿಗಳ ನೋಂದಣಿ ನವೀಕರಣ ಶುಲ್ಕ – 69 ರೂ. ನಿಂದ 72 ರೂ.ಗೆ ಹೆಚ್ಚಳ.

ಪುನರಾವರ್ತಿತ ಶಾಲಾ/ ಖಾಸಗಿ ಅಭ್ಯರ್ಥಿಗಳ ಪರೀಕ್ಷಾ ಶುಲ್ಕ

ಒಂದು ವಿಷಯಕ್ಕೆ- 427 ರೂ ನಿಂದ 448 ರೂಗೆ ಹೆಚ್ಚಳ.

ಎರಡು ವಿಷಯಕ್ಕೆ -532 ರೂನಿಂದ 559 ರೂಗೆ ಹೆಚ್ಚಳ.

ಮೂರು ಮತ್ತು ಮೂರಕ್ಕಿಂತ ಜಾಸ್ತಿ ವಿಷಯಗಳು – 716 ರೂ. ನಿಂದ 752 ರೂ.ಗೆ ಹೆಚ್ಚಳ.

Shwetha M