ಚಿನ್ನಸ್ವಾಮಿಯಲ್ಲೇ ನಡೆಯಲಿದೆ 2026ರ IPL ಫೈನಲ್! – ಬೆಂಗಳೂರಿನಲ್ಲಿ RCB ಎಷ್ಟು ಪಂದ್ಯಗಳನ್ನು ಆಡಲಿದೆ?

ಆರ್‌ಸಿಬಿ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಇದೀಗ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಪಂದ್ಯ ಆಯೋಜನೆಗೆ ಕರ್ನಾಟಕ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ.
ಇದನ್ನೂ ಓದಿ: ಯುವತಿ ಮದುವೆ ನಿರಾಕರಿಸಿದ್ದಕ್ಕೆ HIV ಸೋಂಕಿತ ರಕ್ತ ಇಂಜೆಕ್ಟ್ ಮಾಡಿದ ಭೂಪ! – ಆಮೇಲೆ ಏನಾಯ್ತು?
ಕಳೆದ ವರ್ಷ ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ ದುರಂತಕ್ಕೆ 11 ಫ್ಯಾನ್ಸ್ ಬಲಿಯಾಗಿದ್ರು. ಈ ದುರಂತದ ಬಳಿಕ ಚಿನ್ನಸ್ವಾಮಿಯಲ್ಲಿ ಪಂದ್ಯ ಆಯೋಜನೆ ಬಂದ್ ಮಾಡಲಾಗಿತ್ತು. ಭದ್ರತಾ ದೃಷ್ಠಿಯಿಂದ ಎಲ್ಲಾ ಟೂರ್ನಿಗಳನ್ನ ಸ್ಥಗಿತಗೊಳಿಸಲಾಗಿತ್ತು. ಇದೀಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂಬರುವ ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ರಾಜ್ಯ ಸರ್ಕಾರದಿಂದ ಅಧಿಕೃತ ಅನುಮತಿ ದೊರೆತಿದೆ. ಭದ್ರತಾ ದೃಷ್ಟಿಯಿಂದ ಪಂದ್ಯಗಳ ಆಯೋಜನೆ ಬಗ್ಗೆ ಇದ್ದ ಗೊಂದಲಗಳಿಗೆ ಇದೀಗ ತೆರೆಬಿದ್ದಿದ್ದು, ಪ್ಲೇ-ಆಫ್ ಹಾಗೂ ಫೈನಲ್ ಪಂದ್ಯಗಳಿಗೂ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ ವಹಿಸಲಿದೆ ಎಂಬ ಬಂಪರ್ ಸುದ್ದಿಯನ್ನು ಕೆಎಸ್‌ಸಿಎ ನೀಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕೆಎಸ್‌ಸಿಎ ಉಪಾಧ್ಯಕ್ಷ ವಿನಯ್ ಮೃತ್ಯುಂಜಯ ಅವರು, ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳನ್ನು ನಡೆಸಲು ಸರ್ಕಾರದಿಂದ ಅಧಿಕೃತ ಒಪ್ಪಿಗೆ ಸಿಕ್ಕಿರುವುದನ್ನು ಖಚಿತಪಡಿಸಿದ್ದಾರೆ.
ಇತ್ತೀಚಿನ ವಿದ್ಯಮಾನಗಳ ಹಿನ್ನೆಲೆಯಲ್ಲಿ ಕ್ರೀಡಾಂಗಣದ ಭದ್ರತೆ ಹಾಗೂ ವ್ಯವಸ್ಥೆಗಳ ಪರಿಶೀಲನೆಗಾಗಿ ಗೃಹ ಸಚಿವರು ನ್ಯಾಯಮೂರ್ತಿ ಮೈಕಲ್ ಡಿ ಕುನ್ಹಾ ನೇತೃತ್ವದಲ್ಲಿ ತಜ್ಞರ ಸಮಿತಿಯೊಂದನ್ನು ರಚಿಸಿದ್ದರು. ಕಳೆದ ಶುಕ್ರವಾರವಷ್ಟೇ ಈ ಸಮಿತಿಯು ಚಿನ್ನಸ್ವಾಮಿ ಸ್ಟೇಡಿಯಂಗೆ ಭೇಟಿ ನೀಡಿ ಸುದೀರ್ಘ ಪರಿಶೀಲನೆ ನಡೆಸಿತ್ತು. ಸರ್ಕಾರ ವಿಧಿಸಿದ್ದ ಷರತ್ತುಗಳನ್ನು ಹಾಗೂ ಸಮಿತಿ ನೀಡಿದ್ದ ಶಿಫಾರಸು ಕೆಎಸ್‌ಸಿಎ ಪೂರೈಸಿದೆಯೇ ಎಂಬುವುದರ ಬಗ್ಗೆ ಸಭೆ ನಡೆಸಿ ಚರ್ಚಿಸಲಾಗಿತ್ತು.
ಸಮಿತಿಯು ಸೂಚಿಸಿದ್ದ ಬಹುತೇಕ ಎಲ್ಲಾ ಭದ್ರತಾ ಕಾರ್ಯಗಳು ಮತ್ತು ಷರತ್ತುಗಳನ್ನು ಕೆಎಸ್‌ಸಿಎ ಪೂರೈಸಿದೆ. ಈ ಕುರಿತ ವರದಿಯನ್ನು ಸಮಿತಿಯು ಇಂದು ಗೃಹ ಸಚಿವರಿಗೆ ಸಲ್ಲಿಸಲಿದೆ. ವರದಿ ಆಧಾರದ ಮೇಲೆ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ವಹಿಸುವ ಷರತ್ತಿನ ಮೇರೆಗೆ ಗೃಹ ಸಚಿವರು ಪಂದ್ಯಗಳ ಆಯೋಜನೆಗೆ ಅನುಮತಿ ನೀಡಿದ್ದಾರೆ.
ಇನ್ನು ಪಂದ್ಯಗಳನ್ನು ಅಧಿಕೃತವಾಗಿ ನಡೆಸಲು ಗೃಹ ಸಚಿವರು ಅನುಮತಿ ನೀಡಿದ್ದಾರೆ ಹಾಗೂ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ ಸೂಚನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ನಮಗೆ ಸಹಕರಿಸಿದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಆರ್‌ಸಿಬಿ ತಂಡವು ಇಲ್ಲಿ ಪಂದ್ಯಗಳನ್ನಾಡಲು ಒಪ್ಪಿಕೊಂಡಿದ್ದು, ಜೊತೆಗೆ ಐಪಿಎಲ್‌ನ ಪ್ಲೇ-ಆಫ್ ಹಾಗೂ ಫೈನಲ್ ಪಂದ್ಯಗಳ ಆಯೋಜನೆಗೂ ನಮಗೆ ಅವಕಾಶ ಸಿಕ್ಕಿದೆ ಎಂದು ವಿನಯ್ ಮೃತ್ಯುಂಜಯ ಹರ್ಷ ವ್ಯಕ್ತಪಡಿಸಿದ್ದಾರೆ.

ನೋಡಿರಿ

