ಫುಟ್ಬಾಲ್ ರೀತಿ ಆಡಿದ್ದಕ್ಕೆ ಫುಟ್ಬಾಲ್ ಚಿಹ್ನೆ – ಜನಾರ್ದನ ರೆಡ್ಡಿ ಪಕ್ಷದ ಪ್ರಣಾಳಿಕೆಯಲ್ಲಿ ಏನೆಲ್ಲಾ ಭರವಸೆ?

ಫುಟ್ಬಾಲ್ ರೀತಿ ಆಡಿದ್ದಕ್ಕೆ ಫುಟ್ಬಾಲ್ ಚಿಹ್ನೆ – ಜನಾರ್ದನ ರೆಡ್ಡಿ ಪಕ್ಷದ ಪ್ರಣಾಳಿಕೆಯಲ್ಲಿ ಏನೆಲ್ಲಾ ಭರವಸೆ?

ಹೊಸ ಪಕ್ಷ ಸ್ಥಾಪನೆ ಮೂಲಕ ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿರುವ ಗಣಿಧಣಿ ಗಾಲಿ ಜನಾರ್ದನ ರೆಡ್ಡಿ ಇವತ್ತು ತಮ್ಮ ಪಕ್ಷದ ಚಿಹ್ನೆಯನ್ನ ಅನಾವರಣಗೊಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಚಿಹ್ನೆ ಮತ್ತು ಪ್ರಣಾಳಿಕೆಯನ್ನ ಬಿಡುಗಡೆಗೊಳಿಸಿದ್ದಾರೆ.

ಕೆಆರ್​ಪಿಪಿ ಪಕ್ಷದ ಚುನಾವಣಾ ಚಿಹ್ನೆ ಫುಟ್​ಬಾಲ್ ಆಗಿದೆ. ಚಿಹ್ನೆ ಮತ್ತು ಪ್ರಣಾಳಿಕೆ ಬಿಡುಗಡೆ ಬಳಿಕ ಮಾತನಾಡಿದ ರೆಡ್ಡಿ, ಎಲ್ಲರೂ ನನ್ನನ್ನ ಫುಟ್​ಬಾಲ್​ ರೀತಿ ಆಡಿದ್ರು. ಹೀಗಾಗಿ ನನ್ನ ಪಕ್ಷದ ಚಿಹ್ನೆ ಫುಟ್​ಬಾಲ್ ಅಂದ್ರು. ಈಗಾಗ್ಲೇ 12 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹೆಸರನ್ನ ಘೋಷಣೆ ಮಾಡಿದ್ದು, ಇನ್ನೊಂದು ವಾರದಲ್ಲಿ 19 ಅಭ್ಯರ್ಥಿಗಳನ್ನ ಘೋಷಣೆ ಮಾಡೋದಾಗಿ ತಿಳಿಸಿದ್ರು. ಹಾಗೇ ನನ್ನ ಪರವಾಗಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಪ್ರಚಾರ ಮಾಡ್ತಾರೆ ಅನ್ನೋದು ಸಂಪೂರ್ಣ ಸುಳ್ಳು ಎಂದು ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ್ರು. ಇದೇ ವೇಳೆ ಪ್ರಣಾಳಿಕೆ ಬಿಡುಗಡೆ ಮಾಡಿದ ರೆಡ್ಡಿ, ಹಲವು ಭರವಸೆಗಳನ್ನ ನೀಡಿದೆ. ಅದೇನು ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ : ಕೆಆರ್‌ಪಿ ಪಕ್ಷ ಸಂಘಟನೆ ಮಾಡುವವರಿಗೆ ಭರ್ಜರಿ ಗಿಫ್ಟ್ – ಜನಾರ್ದನ ರೆಡ್ಡಿಯಿಂದ ಸ್ಪೋರ್ಟ್ಸ್ ಬೈಕ್ ಉಡುಗೊರೆ

ಪ್ರಣಾಳಿಕೆಯಲ್ಲಿ ನೀಡಲಾದ ಭರವಸೆಗಳು

– ರೈತರಿಗೆ ಬಡ್ಡಿರಹಿತ ಸಾಲ

– ರೈತರ ಸಮಸ್ಯೆಗಳ ಪರಿಹಾರಕ್ಕೆ ರೈತ ಭರವಸೆ ಕೇಂದ್ರ

– ರಸಗೊಬ್ಬರ ಮತ್ತು ಬಿತ್ತನೆ ಬೀಜಗಳನ್ನ ಸರ್ಕಾರಿ ವಾಹನಗಳಲ್ಲೇ ರೈತರ ಮನೆ ಬಾಗಿಲಿಗೆ ತಲುಪಿಸುವುದು

– ಬಸವೇಶ್ವರ ಆರೋಗ್ಯ ಕವಚ ಯೋಜನೆ – ತಾಲೂಕು ಕೇಂದ್ರಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣ, ಬಡತನ ರೇಖೆಗಿಂತ ಕೆಳಗಿರುವವರಿಗೆ ಉಚಿತ ಚಿಕಿತ್ಸೆ

– ರಾಣಿ ಚನ್ನಮ್ಮ ಅಭಯ ಹಸ್ತ ಯೋಜನೆ – ಗೃಹಿಣಿಯರಿಗೆ ಮತ್ತು ಒಂಟಿ ಮಹಿಳೆಯರಿಗೆ ತಿಂಗಳಿಗೆ 2,500 ರೂಪಾಯಿ ನೇರವಾಗಿ ಅವರ ಖಾತೆಗೆ ಜಮೆ

– ಸ್ವಸಹಾಯ ಸ್ತ್ರೀ ಶಕ್ತಿ ಸಂಘಗಳಿಗೆ 10 ಲಕ್ಷ ರೂಪಾಯಿಗಳವರೆಗೆ ಶೂನ್ಯ  ಬಡ್ಡಿ ದರದಲ್ಲಿ ಸಾಲ

– ಮಹರ್ಷಿ ವಾಲ್ಮೀಕಿ ಮತ್ತು ಅಂಬೇಡ್ಕರ್ ಜನಸ್ನೇಹಿ ಯೋಜನೆ – ಪ್ರತೀ ಮನೆಗೆ 250 ಯೂನಿಟ್ ವಿದ್ಯುತ್ ಉಚಿತ

– ಪರಿಶಿಷ್ಟ ಜಾತಿ ಮತ್ತು ಪಂಗಡ ಮತ್ತು ಪೌರಕಾರ್ಮಿಕರಿಗೆ ಉಚಿತ ನಿವೇಶನಗಳ ನಿರ್ಮಾಣ

– ಸಂಗೊಳ್ಳಿ ರಾಯಣ್ಣ ಯುವಕಿರಣ ಯೋಜನೆ – ನಿರುದ್ಯೋಗಿ ಯುವಕರಿಗೆ ತಿಂಗಳಿಗೆ 2,500 ರೂಪಾಯಿ ನಿರುದ್ಯೋಗ ಭತ್ಯೆ, ಹಿಂದುಳಿದ ಜಿಲ್ಲೆಗಳಲ್ಲಿ ಉದ್ಯೋಗಾವಕಾಶ ಹೆಚ್ಚಳಕ್ಕೆ ಕ್ರಮ

– ಬಸವೇಶ್ವರ ಗೃಹ ಯೋಜನೆ – ಬಡತನರೇಖೆಗಿಂತ ಕೆಳಗಿರುವ ನಿವಾಸ ರಹಿತ ಮಹಿಳೆಯರಿಗೆ ಮನೆಗಳನ್ನ ಕಟ್ಟಿಕೊಡುವುದು ಅಥವಾ ಜಮೀನು ಇದ್ದರೆ 3 ಲಕ್ಷ ರೂಪಾಯಿಗಳವರೆಗೆ ಸಾಲಸೌಲಭ್ಯ

– ಒನಕೆ ಓಬವ್ವ ಸ್ವಾಭಿಮಾನಿ ಯೋಜನೆ – ಎಲ್ಲಾ ಕ್ಷೇತ್ರಗಳಲ್ಲಿರುವ ಮಹಿಳೆಯರಿಗೆ ಸಮಾನ ವೇತನ, ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಮತ್ತು ವಿದ್ಯಾರ್ಥಿನಿಯರಿಗೆ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಉಚಿತ ಪ್ರಯಾಣ

– ಮಹಿಳೆಯರ ರಕ್ಷಣೆಗೆ ವಿಶೇಷ ಪೊಲೀಸ್ ತಂಡಗಳ ರಚನೆ

– ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಈಗಿರುವ ಸಂಬಳಕ್ಕಿಂತ 1 ಸಾವಿರ ರೂಪಾಯಿ ಹೆಚ್ಚಳ

– ಬಸವೇಶ್ವರ ಶಿಕ್ಷಣ ಸುಧಾರಣೆ ಯೋಜನೆ : ಬಡ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಸ್ನಾತಕ್ಕೋತ್ತರ ಪದವಿವರೆಗೂ ಶಿಕ್ಷಣದ ವೆಚ್ಚ ಭರಿಸಲು ತಾಯಂದಿರ ಖಾತೆಗೆ ಹಣ

– ಬಸವೇಶ್ವರ ಜಲಯಜ್ಞ ಯೋಜನೆ – ಬಳ್ಳಾರಿ, ವಿಜಯನಗರ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಕುಡಿಯುವ ನೀರು ಪೂರೈಕೆ ಜೊತೆಗೆ ಸಂಪೂರ್ಣ ಬರಡುಭೂಮಿಗೆ ನೀರಾವರಿ ಸೌಲಭ್ಯ. ನದಿಗಳು ಮತ್ತು  ಉಪನದಿಗಳಿಗೆ ಏತ ನೀರಾವರಿ ಯೋಜನೆ ಮೂಲಕ ಜಮೀನುಗಳಿಗೆ ನೀರಾವರಿ

– ನೇಕಾರರಿಗೆ ಸಂಪೂರ್ಣ ಸಾಲಮನ್ನಾ

suddiyaana