‘ಬಿಜೆಪಿ ಸೇರಲ್ಲ.. ಚುನಾವಣೆಗೆ ಸ್ಪರ್ಧಿಸಲ್ಲ.. ಬೆಂಬಲ ಅಷ್ಟೇ’ – ಸುದೀಪ್ ನಡೆಯೇ ನಿಗೂಢವಾಯ್ತಾ?

‘ಬಿಜೆಪಿ ಸೇರಲ್ಲ.. ಚುನಾವಣೆಗೆ ಸ್ಪರ್ಧಿಸಲ್ಲ.. ಬೆಂಬಲ ಅಷ್ಟೇ’ – ಸುದೀಪ್ ನಡೆಯೇ ನಿಗೂಢವಾಯ್ತಾ?

ಕಿಚ್ಚ ಸುದೀಪ್. ಸ್ಯಾಂಡಲ್ ವುಡ್ ಬಾದ್ ಶಾ ಅಂತಾನೇ ಕರೆಸಿಕೊಳ್ಳೋ ಸುದೀಪ್​ಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಆದ್ರೆ ಕೆಲ ದಿನಗಳಿಂದ ಸುದೀಪ್ ಸಿನಿಮಾಗಳಿಗಿಂತ ರಾಜಕೀಯವಾಗಿಯೇ ಹೆಚ್ಚು ಸುದ್ದಿಯಾಗಿದ್ರು. ಕಾಂಗ್ರೆಸ್ ಸೇರ್ಪಡೆಯಾಗ್ತಾರೆ, ಬಿಜೆಪಿ ಸೇರ್ಪಡೆಯಾಗ್ತಾರೆ ಅನ್ನೋ ಪುಕಾರುಗಳು ಎದ್ದಿದ್ವು.   ಈ ಎಲ್ಲಾ ಪ್ರಶ್ನೆಗಳಿಗೆ ಇವತ್ತು ಸ್ವತಃ ಸುದೀಪ್​ರೇ ತೆರೆ ಎಳೆದಿದ್ದಾರೆ.

ಇದನ್ನೂ ಓದಿ : ಖಾಸಗಿ ವಿಡಿಯೋ ಲೀಕ್ ಮಾಡುವುದಾಗಿ ಕಿಚ್ಚ ಸುದೀಪ್ ಗೆ ಪತ್ರ – ಲೆಟರ್ ನಲ್ಲಿ ಬರೆದಿರೋದೇನು?

ಸಿಎಂ ಬಸವರಾಜ್ ಬೊಮ್ಮಾಯಿ ಮತ್ತು ನಟ ಸುದೀಪ್ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ್ರು. ಇದೇ ವೇಳೆ ಕಂದಾಯ ಸಚಿವ ಆರ್.ಅಶೋಕ್, ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ ಸುದೀಪ್, ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ, ಯಾವುದೇ ಪಕ್ಷದ ಟಿಕೆಟ್ ಕೇಳಿಯೂ ಇಲ್ಲ. ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವುದು ಸಾಕಷ್ಟು ಇದೆ.  ಆದರೆ, ನನಗೆ ಬೆಂಬಲ ನೀಡಿದವರ, ನನ್ನ ಏಳಿಗೆಗೆ ಕಾರಣರಾವದರ ಪರವಾಗಿ ಪ್ರಚಾರ ಮಾಡುತ್ತೇನೆ.  ಚಿತ್ರರಂಗಕ್ಕೆ ಬಂದಾಗ ಕೆಲವೇ ಕೆಲವರು ನನ್ನ ಪರ ನಿಂತಿದ್ದರು. ಅಂಥವರಲ್ಲಿ ನನ್ನ ಮಾಮ ಸಿಎಂ ಬೊಮ್ಮಾಯಿ ಕೂಡ ಒಬ್ಬರು. ಅವರನ್ನು ನಾನು ಮಾಮ ಎಂದೇ ಕರೆಯುತ್ತೇನೆ. ನಾನು ಅವರ ಪರವಾಗಿ ನಿಲ್ಲಲಿದ್ದೇನೆ ಎಂದು ಘೋಷಿಸಿದ್ರು. ಹಾಗೇನಾದ್ರೂ ಚುನಾವಣೆಗೆ ಸ್ಪರ್ಧೆ ಮಾಡುವುದು ಅನಿವಾರ್ಯ ಎಂದಾದಾರೆ ಅದನ್ನ ಖಂಡಿತವಾಗಿಯೂ ನೇರವಾಗಿಯೇ ಹೇಳುತ್ತೇನೆ ಎಂದು ಸ್ಪಷ್ಟಪಡಿಸಿದ್ರು.

ಇದೇ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ, ನನ್ನ ಮೇಲಿನ ಪ್ರೀತಿ ವಿಶ್ವಾಸದಿಂದ ಸುದೀಪ್​ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ. ನಾನು ಹೇಳಿದ ಕಡೆ ನಟ ಸುದೀಪ್​ ಪ್ರಚಾರ ಮಾಡುತ್ತೇನೆ ಎಂದಿದ್ದಾರೆ. ಇನ್ನು ಸುದೀಪ್ ಈ ಹಿಂದಿನ ಚುನಾವಣೆಗಳಲ್ಲೂ ಕೂಡ ಕೆಲವರ ಪರ ಪ್ರಚಾರ ಮಾಡಿದ್ದರು. 2018ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸುದೀಪ್ ಅವರು ಶ್ರೀರಾಮುಲು ಅವರನ್ನು ಬೆಂಬಲಿಸುವಂತೆ ಮತದಾರರಲ್ಲಿ ಮನವಿ ಮಾಡಿದ್ದರು. ಜತೆಗೆ, ಚಿತ್ರದುರ್ಗದ ನಾಯಕನಹಟ್ಟಿಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಪರ ಚುನಾವಣಾ ಪ್ರಚಾರ ನಡೆಸಲು ತೆರಳಿದ್ದರು. ಆದರೆ, ಕೊನೇ ಕ್ಷಣದಲ್ಲಿ ಚುನಾವಣಾ ಆಯೋಗ ತಡೆ ನೀಡಿದ್ದರಿಂದ ಪ್ರಚಾರ ಕಾರ್ಯದಲ್ಲಿ ಭಾಗವಹಿಸದೇ ಹಿಂತಿರುಗಬೇಕಾಗಿ ಬಂದಿತ್ತು. ಶ್ರೀರಾಮುಲು ಪರ ನಟ ಸುದೀಪ್ ಚುನಾವಣಾ ಪ್ರಚಾರ ನಡೆಸಲು ಆಯೋಗ ಬೆಳಿಗ್ಗೆ 9ರಿಂದ 12 ಗಂಟೆವರೆಗೂ ಸಮಯ ನೀಡಿತ್ತು. ಆದರೆ, ಸುದೀಪ್ ಅವರು ಮಧ್ಯಾಹ್ನ 1 ಗಂಟೆಗೆ ಬಂದ ಕಾರಣ ಬೇರೆ ಪಕ್ಷಗಳ ಪ್ರಚಾರಕ್ಕೆ ಸಮಯ ನಿಗದಿಯಾಗಿರುವ ಕಾರಣ ಅವರಿಗೆ ಅವಕಾಶ ದೊರೆತಿರಲಿಲ್ಲ.

suddiyaana