ಎಂಎಸ್ ಧೋನಿ ಶಾಲೆಗೆ ಕರ್ನಾಟಕ ಶಿಕ್ಷಣ ಇಲಾಖೆ ನೋಟಿಸ್ – ಏನಿದು ಸಿಬಿಎಸ್​ಇ ವಿವಾದ..!?

ಎಂಎಸ್ ಧೋನಿ ಶಾಲೆಗೆ ಕರ್ನಾಟಕ ಶಿಕ್ಷಣ ಇಲಾಖೆ ನೋಟಿಸ್ – ಏನಿದು ಸಿಬಿಎಸ್​ಇ ವಿವಾದ..!?

ಬೆಂಗಳೂರು : ಭಾರತ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಶಾಲೆಗೆ ಕರ್ನಾಟಕ ಶಿಕ್ಷಣ ಇಲಾಖೆ ಶಾಕ್ ಕೊಟ್ಟಿದೆ. ನಗರದ ಆರ್ಕಿಡ್ ಶಾಲೆ ಜೊತೆಗೆ ಎಂಎಸ್ ಧೋನಿ ಶಾಲೆಗೂ ನೋಟಿಸ್ ನೀಡಲಾಗಿದೆ.

ಇದನ್ನೂ ಓದಿ : ಅಮೆರಿಕದಲ್ಲಿ ಐಡ್ರಾಪ್ಸ್ ಬಳಸಿ ವ್ಯಕ್ತಿ ಸಾವು? – ಉತ್ಪನ್ನ ಸ್ಥಗಿತಗೊಳಿಸಿದ ಚೆನ್ನೈ ಮೂಲದ ಕಂಪನಿ

ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್​ ಧೋನಿ(MS Dhoni) ಮಕ್ಕಳ ಕಲಿಕೆಗಾಗಿ ಬೆಂಗಳೂರಿನಲ್ಲಿ ಗ್ಲೋಬಲ್​ ಸ್ಕೂಲ್(MS Dhoni Global School) ಆರಂಭಿಸಿದ್ದು, ಈ ಶಾಲೆಗೂ ಶಿಕ್ಷಣ ಇಲಾಖೆ(Karnataka Education Department) ಶಾಕ್ ಕೊಟ್ಟಿದೆ. ಎಂಎಸ್ ಧೋನಿ ಆರಂಭಿಸಿರೋ ಶಾಲೆ ರಾಜ್ಯ ಪಠ್ಯಕ್ರಮದಡಿ ಅನುಮತಿ ಪಡೆದಿದೆ. ಆದ್ರೆ ಸಿಬಿಎಸ್ಇ ಹಾಗೂ ಇತರೆ ಪಠ್ಯ ಬೋಧನೆ ಹಿನ್ನೆಲೆ ಎಂಎಸ್ ಧೋನಿ ಶಾಲೆಗೆ ಶಿಕ್ಷಣ ಇಲಾಖೆ ನೋಟಿಸ್ ನೀಡಿದೆ.

ಕಳೆದ ವರ್ಷವಷ್ಟೇ ಅಂದರೆ 2021-22 ರಲ್ಲಿ ಬೆಂಗಳೂರಿನ ಸಿಂಗಸಂದ್ರದಲ್ಲಿ ಎಂಎಸ್​ ಧೋನಿಯವರ ಶಾಲೆ ಆರಂಭವಾಗಿತ್ತು. ಆದರೆ ಸಿಬಿಎಸ್​ಇ ಸೇರಿದಂತೆ ಇತರೆ ಕೆಲ ಪಠ್ಯಕ್ರಮ ಬೋಧನೆ ಹಿನ್ನೆಲೆ ಶಾಲೆಗೆ ನೋಟಿಸ್ ನೀಡಲಾಗಿದೆ. ಎಂಎಸ್​ ಧೋನಿ ಶಾಲೆಯಲ್ಲಿ ಒಂದರಿಂದ ಎಂಟನೇ ತರಗತಿಯವರೆಗೆ ತರಗತಿಗಳು ನಡೆಯುತ್ತಿದ್ದು ಪ್ರಸಕ್ತ ವರ್ಷ ಶಾಲೆಯಲ್ಲಿ 248 ಮಕ್ಕಳು ದಾಖಲಾತಿ ಪಡೆದಿದ್ದಾರೆ. ಅನಧಿಕೃತ ಪಠ್ಯ ಬೋಧನೆಯಡಿ ಶಾಲೆಗೆ ನೋಟಿಸ್ ನೀಡಲಾಗಿದೆ. ಬೆಂಗಳೂರಿನ 8 ಅನಧಿಕೃತ ಆರ್ಕಿಡ್ ಶಾಲೆಗೆ ಶಿಕ್ಷಣ ಇಲಾಖೆ ಈಗಾಗಲೇ ನೋಟಿಸ್ ನೀಡಿದೆ. ಈಗ ಎಂಎಸ್​ ಧೋನಿ ಶಾಲೆ ಕೂಡ ಇದೇ ಪಟ್ಟಿಯಲ್ಲಿ ಸೇರಿಕೊಂಡಿದೆ.

ಸಿಬಿಎಸ್​ಇ ಶಾಲೆ ಎಂದು ಹೇಳಿಕೊಂಡು ಆರ್ಕಿಡ್ ಶಾಲೆ ಆಡಳಿತ ಮಂಡಳಿ ಪೋಷಕರಿಂದ ಲಕ್ಷ ಲಕ್ಷ ಫೀಸ್ ವಸೂಲಿ ಮಾಡಿದೆ. ಆದ್ರೆ ಸಿಬಿಎಸ್​ಇ ಪರೀಕ್ಷೆ ಬಿಟ್ಟು ಸ್ಟೇಟ್ ಸಿಲಬಸ್ ಪಾಠ ಮಾಡಲಾಗಿದೆ. ಹಾಗೂ ಮಕ್ಕಳಿಗೆ ಪಬ್ಲಿಕ್ ಪರೀಕ್ಷೆಗೆ ತಯಾರಿ ಮಾಡಲಾಗಿದೆ. ಇದರಿಂದ ಅನುಮಾನಗೊಂಡ ಪೋಷಕರು ಶಾಲೆಯ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಆರ್ಕಿಡ್ ಸಿಬಿಎಸ್​ಇ ಶಾಲೆಗಳ ಅಡಿಯಲ್ಲಿ ರಿಜಿಸ್ಟರ್ ಆಗದಿರುವುದು ಬಯಲಾಗಿದೆ. ಹೀಗಾಗಿ ಶಿಕ್ಷಣ ಇಲಾಖೆ ನೋಟಿಸ್ ಕಳಿಸಿದೆ. ಬೆಂಗಳೂರು ಉತ್ತರ ಜಿಲ್ಲೆಯ ಹೋನ್ನೆನಹಳ್ಳಿಯಲ್ಲಿರುವ ಆರ್ಕಿಡ್ ಶಾಲೆ, ಮೈಸೂರು ರಸ್ತೆ, ನಾಗರಭಾವಿ, ಪಣತೂರು, ಹೊಮ್ಮದೇವನಹಳ್ಳಿ ಹರಳೂರು, ಮಹಾಲಕ್ಷ್ಮಿ ಲೇಔಟ್, ಹೊರಮಾವು ಭಾಗದಲ್ಲಿರುವ ಆರ್ಕಿಡ್ ಶಾಲೆಗಳಿಗೆ ನೋಟಿಸ್ ನೀಡಲಾಗಿದೆ.

suddiyaana