ಎಸ್‌ಎಸ್‌ಎಲ್‌ಸಿ, ಪಿಯುಪಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ – ಪರೀಕ್ಷಾ ಮಾದರಿಯಲ್ಲಿ ಭಾರಿ ಬದಲಾವಣೆ!
ಬೆಂಗಳೂರು: ಶಿಕ್ಷಕರ ದಿನಾಚರಣೆ ದಿನದಂದೇ ರಾಜ್ಯ ಶಿಕ್ಷಣ ಇಲಾಖೆ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿದೆ. 2023-24ನೇ ಶೈಕ್ಷಣಿಕ ಸಾಲಿನಿಂದ SSLC, 2nd PUC ಪರೀಕ್ಷಾ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ. ಇದುವರೆಗೆ ವರ್ಷಕ್ಕೆ 2 ಪರೀಕ್ಷೆ ಮಾತ್ರ ನಡೆಸುತ್ತಿದ್ದ ಶಿಕ್ಷಣ ಇಲಾಖೆ ಇನ್ಮುಂದೆ ವರ್ಷಕ್ಕೆ ಮೂರು ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಿದೆ.
ಇದನ್ನೂ ಓದಿ: ನಾಯಿ ಸಾಕಾಣಿಕೆಗೂ ಬಂತು ಹೊಸ ರೂಲ್ಸ್! – ಹೊಸ ನಿಯಮಗಳೇನು?
ಶೈಕ್ಷಣಿಕ ಪ್ರಗತಿ, ಅರ್ಥಪೂರ್ಣ ಕಲಿಕೆ, ಜ್ಞಾನಧಾರಣೆ ವೃದ್ಧಿಸುವ ಉದ್ದೇಶದಿಂದ ಶಿಕ್ಷಣ ಇಲಾಖೆ ಪರಿಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿದೆ. ಹೊಸ ಮಾದರಿಯ ಪರಿಕ್ಷಾ ವ್ಯವಸ್ಥೆಯಲ್ಲಿ, ಪ್ರಸ್ತುತ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಯು ಗಳಿಸಿದ ಅಂಕಗಳನ್ನು ತಿರಸ್ಕರಿಸಲು ಅವಕಾಶವಿದೆ. ಆದರೆ, ವಿದ್ಯಾರ್ಥಿ ಹಿಂದಿನ ಪರೀಕ್ಷೆಯಲ್ಲಿ ಪಡೆದ ಅಂಕಗಳು ಹೆಚ್ಚಾಗಿದ್ದರೂ, ಪೂರಕ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನೇ ವಿದ್ಯಾರ್ಥಿಯ ನೈಜ ಅಂಕಗಳೆಂದು ಪರಿಗಣಿಸಲಾಗುತ್ತಿದೆ. ಹೀಗಾಗಿ, ಎರಡು ಪರೀಕ್ಷೆಗಳಲ್ಲಿ ತನ್ನ ಅತ್ಯುತ್ತಮ ಅಂಕವನ್ನು ಉಳಿಸಿಕೊಳ್ಳಲು ವಿದ್ಯಾರ್ಥಿಗೆ ಆಯ್ಕೆಯಿರುವುದಿಲ್ಲ. ಹೀಗಾಗಿ, ಪ್ರಸ್ತುತ 2023-24ನೇ ಶೈಕ್ಷಣಿಕ ಸಾಲಿನಿಂದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ವಾರ್ಷಿಕ 3 ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ.
ಇನ್ನು ಹೊಸ ಮಾದರಿಯ ‘ವಾರ್ಷಿಕ 1,2 ಮತ್ತು 3’ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಗಳಿಸುವ ಅಂಕಗಳ ಆಧಾರದಲ್ಲಿ ಉತ್ತೀರ್ಣ, ಅನುತ್ತೀರ್ಣ ನಿರ್ಧಾರ ಮಾಡಲಾಗುತ್ತದೆ. ಒಂದು ವೇಳೆ ಉತ್ತೀರ್ಣರಾದ ವಿದ್ಯಾರ್ಥಿಗಳು ಯಾವುದಾದರೂ ವಿಷಯದಲ್ಲಿ ಕಡಿಮೆ ಅಂಕ ಗಳಿಸಿದಾಗ ಮತ್ತೊಮ್ಮೆ ಪರೀಕ್ಷೆಯನ್ನು ಬರೆಯಬಹುದು. ಆಗ ಯಾವ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ಪಡೆದಿರುತ್ತಾರೋ, ಆ ಹೆಚ್ಚಿನ ಅಂಕಗಳನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ವಿದ್ಯಾರ್ಥಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗುತ್ತದೆ. ಈ ಮೂಲಕ ವಾರ್ಷಿಕ ಮೂರು ಪರೀಕ್ಷೆಗಳನ್ನು ಬರೆದರೂ, ಅನುತ್ತೀರ್ಣದ ಭಯವಿಲ್ಲದೇ ಹೆಚ್ಚಿನ ಅಂಕಗಳನ್ನು ಪಡೆಯಲು ಅವಕಾಶ ನೀಡಲಾಗಿದೆ.
ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ನಡೆಸಲಿರುವ 3 ಪರೀಕ್ಷೆಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
SSLC ಸಂಭವನೀಯ ಪರೀಕ್ಷಾ ವೇಳಾಪಟ್ಟಿ ಹೀಗಿದೆ..
ಪರೀಕ್ಷೆಗಳು ದಿನಾಂಕ ಫಲಿತಾಂಶ
ಪರೀಕ್ಷೆ 1: ಮಾ 1- ಮಾ.25 ಏ. 22
ಪರೀಕ್ಷೆ 2 ಮೇ15-ಜೂ.5 ಜೂನ್ 21
ಪರೀಕ್ಷೆ 3 ಜು.12 -ಜು.30 ಆಗಸ್ಟ್16
ಪಿಯುಸಿ ಸಂಭವನೀಯ ಪರೀಕ್ಷಾ ವೇಳಾಪಟ್ಟಿ ಹೀಗಿದೆ..
ಪರೀಕ್ಷೆ 1 ಮಾ 30- ಏ15 ಮೇ 8
ಪರೀಕ್ಷೆ 2 ಜೂ. 12-ಜೂ.19 ಜೂನ್ 29
ಪರೀಕ್ಷೆ 3 ಜು.29 -ಆ.5 ಆಗಸ್ಟ್ 19