ಮುಂಬೈ ಬಗ್ಗು ಬಡಿದ ಕರ್ನಾಟಕ – ಸತತ 4ನೇ ಬಾರಿಗೆ ಸೆಮೆಫೈನಲ್ ಪ್ರವೇಶಿಸಿ ಕನ್ನಡಿಗರ ಅಬ್ಬರ

ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡದ ಅಬ್ಬರ ಮುಂದುವರೆದಿದೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಂಬೈ ವಿರುದ್ಧ ಕರ್ನಾಟಕ ಗೆಲುವು ಸಾಧಿಸಿದೆ.
ಇದನ್ನೂ ಓದಿ:ಸ್ಮೃತಿ ಮಂಧಾನಾ ಪಡೆಗೆ 2ನೇ ಜಯ – RCB ಅಬ್ಬರಕ್ಕೆ ಯುಪಿ ವಾರಿಯರ್ಸ್ ಉಡೀಸ್
ವಿಜಯ ಹಜಾರೆ ಟ್ರೋಫಿಯ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಮುಂಬೈ ವಿರುದ್ಧದ ಹಾಲಿ ಚಾಂಪಿಯನ್ ಕರ್ನಾಟಕ ತಂಡ ಜಯ ಸಾಧಿಸಿದೆ. 55 ರನ್ಗಳ ಗೆಲುವಿನೊಂದಿಗೆ ಕರ್ನಾಟಕ ತಂಡ ಸೆಮಿಫೈನಲ್ ಪ್ರವೇಶಿಸಿದೆ. ಈ ಗೆಲುವಿನ ರೂವಾರಿ ದೇವದತ್ ಪಡಿಕ್ಕಲ್. ಟೂರ್ನಿಯುದ್ದಕ್ಕೂ ರನ್ ಮಳೆ ಸುರಿಸುತ್ತಿರುವ ಯುವ ಬ್ಯಾಟರ್ ದೇವದತ್ ಪಡಿಕ್ಕಲ್ ಮುಂಬೈ ವಿರುದ್ಧವೂ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಆದರೆ, ಇವರ ಶತಕದಾಟಕ್ಕೆ ಮಳೆ ಅಡ್ಡಿಯಾಯ್ತು. ಹೀಗಾಗಿ ಶತಕದಿಂದ ವಂಚಿತರಾದರು.
ಅನುಭವಿ ಆಟಗಾರರು ಇಲ್ಲದೇ ಮುಂಬೈ ತಂಡ ಇದೇ ಮೊದಲ ಬಾರಿಗೆ ಕಣಕ್ಕಿಳಿದಿತ್ತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 254 ರನ್ಗಳಿಸಿತು. ಮಧ್ಯಮ ಕ್ರಮಾಂಕದ ಆಲ್ರೌಂಡರ್ ಶಮ್ಸ್ ಮುಲಾನಿ 91 ಎಸೆತಗಳಲ್ಲಿ 8 ಬೌಂಡರಿಗಳ ಸಹಿತ 86 ರನ್ಗಳಿಸಿ ತಂಡದ ಮೊತ್ತವನ್ನ 200ರ ಗಡಿ ದಾಟಿಸಿದರು. 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಸಾಯಿರಾಜ್ ಪಾಟೀಲ್ 25 ಎಸೆತಗಳಲ್ಲಿ 33 ರನ್ ಸಿಡಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಕರ್ನಾಟಕ ಪರ ವಿದ್ಯಾಧರ್ ಪಾಟೀಲ್ 42ಕ್ಕೆ 3, ಅಭಿಲಾಷ್ ಶೆಟ್ಟಿ 59ಕ್ಕೆ 2, ವಿಧ್ವತ್ ಕಾವೇರಪ್ಪ 43ಕ್ಕೆ 2, ವಿಜಯ್ ಕುಮಾರ್ ವೈಶಾಕ್ 59ಕ್ಕೆ 1 ವಿಕೆಟ್ ಪಡೆದು ಮಿಂಚಿದರು.
ಕರ್ನಾಟಕ ತಂಡ ನಾಯಕ ಮಯಾಂಕ್ ಅಗರ್ವಾಲ್ರನ್ನ (12) ಬೇಗನೆ ಕಳೆದುಕೊಂಡಿತು. ಆದರೆ ಗೋಲ್ಡನ್ ಫಾರ್ಮ್ನಲ್ಲಿರುವ ದೇವದತ್ ಪಡಿಕ್ಕಲ್ ಅನುಭವಿ ಬ್ಯಾಟರ್ ಕರುಣ್ ನಾಯರ್ ಜೊತೆಗೂಡಿ 2ನೇ ವಿಕೆಟ್ ಜೊತೆಯಾಟದಲ್ಲಿ 143 ರನ್ಗಳ ಜೊತೆಯಾಟ ನಡೆಸಿದರು. ಮಳೆಯಿಂದಾಗಿ ಪಂದ್ಯವು ನಿಲ್ಲಿಸಲ್ಪಟ್ಟಾಗ ಕರ್ನಾಟಕ 33 ಓವರ್ಗಳಲ್ಲಿ 1 ವಿಕೆಟ್ಗೆ 187 ರನ್ ಗಳಿಸಿತ್ತು. ಪಡಿಕ್ಕಲ್ ಅಜೇಯ 95 ಎಸೆತಗಳಲ್ಲಿ, 11 ಬೌಂಡರಿಗಳ ಸಹಿತ 81 ರನ್ ಮತ್ತು ಕರುಣ್ ನಾಯರ್ ಅಜೇಯ 80 ಎಸೆತಗಳಲ್ಲಿ, 11 ಬೌಂಡರಿಗಳ ಸಹಿತ 74 ರನ್ಗಳಿಸಿದ್ದರು. ಆದರೆ ಪಂದ್ಯ ಮುಗಿಸಲು ಮಳೆರಾಯ ಅವಕಾಶ ಕೊಡದ ಕಾರಣ ವಿಜೆಡಿ ನಿಯಮದನ್ವಯ ಕರ್ನಾಟಕ ತಂಡವನ್ನ ವಿಜಯಿ ಎಂದು ನಿರ್ಧರಿಸಲಾಯಿತು.

ನೋಡಿರಿ

