ಬಸ್‌ ಬಗ್ಗೆ ಟ್ವೀಟ್ ಮಾಡಿದ ಉದ್ಯಮಿ ಮೋಹನ್ ದಾಸ್ ಪೈಗೆ ರಾಮಲಿಂಗಾ ರೆಡ್ಡಿ ನೇರ ಸವಾಲು

ಬಸ್‌ ಬಗ್ಗೆ ಟ್ವೀಟ್ ಮಾಡಿದ ಉದ್ಯಮಿ ಮೋಹನ್ ದಾಸ್ ಪೈಗೆ ರಾಮಲಿಂಗಾ ರೆಡ್ಡಿ ನೇರ ಸವಾಲು

ಕರ್ನಾಟಕದಲ್ಲಿ ಸರ್ಕಾರಿ ಬಸ್‌ಗಳ ಕೊರತೆ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಕುರಿತು ಉದ್ಯಮಿ ಮೋಹನ್ ದಾಸ್ ಪೈ   ಸಾಮಾಜಿಕ ಮಾಧ್ಯಮ ಎಕ್ಸ್​​ ಸಂದೇಶಗಳ ಮೂಲಕ ಅಸಮಾಧಾನವನ್ನು ಹೊರಹಾಕಿದ್ದಾರೆ. ಇದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ   ಅವರನ್ನು ಕೆರಳಿಸಿದ್ದು, ಸರ್ಕಾರ ಮತ್ತು ಖಾಸಗಿ ವಲಯದ ಉದ್ಯಮಿಗಳ ನಡುವೆ ಮತ್ತೆ ವಾಕ್ಸಮರ ಆರಂಭವಾಗಿದೆ. ಕಳೆದ ಮೂರು ವರ್ಷಗಳಿಂದಲೂ ರಾಜ್ಯದಲ್ಲಿ ಸಾರಿಗೆ ಬಸ್‌ಗಳ ಕೊರತೆ ಇರುವುದನ್ನು ಮೋಹನ್ ದಾಸ್ ಪೈ ಎಕ್ಸ್​ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಒದಗಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: ಅಮೆಜಾನ್‌ನಿಂದ ಬಿಗ್ ಶಾಕ್ – ಉದ್ಯೋಗ ಕಡಿತ, ಬೀದಿಗೆ ಬಿದ್ದ 16,000 ಉದ್ಯೋಗಿಗಳು

ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರನ್ನು ಉದ್ದೇಶಿಸಿ ಎಕ್ಸ್ ಸಂದೇಶ ಪ್ರಕಟಿಸಿರುವ ಪೈ, ಸಾರ್ವಜನಿಕ ವಲಯದ ಉದ್ಯಮಗಳು (PSU) ಮಾತ್ರ ಕೆಲಸ ಮಾಡುತ್ತವೆ ಎಂಬ ಮೂಢನಂಬಿಕೆಯ ಮನೋಭಾವದಿಂದಾಗಿ ಈ ವೈಫಲ್ಯ ಉಂಟಾಗಿದೆ ಎಂದಿದ್ದಾರೆ. ಜನರಿಗೆ ಉತ್ತಮ ಸಾರಿಗೆ ವ್ಯವಸ್ಥೆ ಅತ್ಯಗತ್ಯವಾಗಿದ್ದು, ಈ ಕೊರತೆಯನ್ನು ನಿವಾರಿಸಲು ಖಾಸಗಿ ಬಸ್ ಸೇವೆಗಳಿಗೆ ಅವಕಾಶ ನೀಡುವಂತೆ ಅವರು ಮನವಿ ಮಾಡಿದ್ದಾರೆ.

ಈ ಹಿಂದೆ ರಸ್ತೆಗುಂಡಿಗಳ ಬಗ್ಗೆಯೂ ಮೋಹನ್ ದಾಸ್ ಪೈ, ಕಿರಣ್ ಮುಜುಂದಾರ್ ಶಾ ಸೇರಿದಂತೆ ಉದ್ಯಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಆಗಲೂ ಸರ್ಕಾರದಿಂದ ಇದೇ ರೀತಿ ಆಕ್ರೋಶಭರಿತ ಪ್ರತಿಕ್ರಿಯೆ ಬಂದಿತ್ತು. ಇದು ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವವರ ವಿರುದ್ಧ ಸರ್ಕಾರಗಳ ಪ್ರತಿಕ್ರಿಯೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮೋಹನ್ ದಾಸ್ ಪೈ ಅವರು BMTC ಬಸ್‌ಗಳ ಕೊರತೆ, ಹದಗೆಟ್ಟ ರಸ್ತೆಗಳಿಂದ ಬಸ್‌ಗಳಿಗೆ ಆಗುತ್ತಿರುವ ಹಾನಿ ಮತ್ತು ಬೆಂಗಳೂರಿನ ಹೆಚ್ಚುತ್ತಿರುವ ಜನಸಂಖ್ಯೆಗೆ ಸಾರಿಗೆ ವ್ಯವಸ್ಥೆ ಸಾಕಾಗದಿರುವುದನ್ನು ಉಲ್ಲೇಖಿಸಿದ್ದಾರೆ. ಬೆಂಗಳೂರಿನಲ್ಲಿ ಖಾಸಗಿ ಬಸ್‌ಗಳ ಸೇವೆಗೂ ಅವಕಾಶ ನೀಡಬೇಕು ಎಂಬುದು ಅವರ ಪ್ರಮುಖ ಆಗ್ರಹವಾಗಿದೆ.

Kishor KV