ಸ್ತ್ರೀ ಶಕ್ತಿಗೆ ಬಹುಪರಾಕ್.. ಬ್ರ್ಯಾಂಡ್ ಬೆಂಗಳೂರಿಗೆ ಬಂಪರ್

ಸಿಎಂ ಸಿದ್ದರಾಮಯ್ಯ ತಮ್ಮ ದಾಖಲೆಯ 16ನೇ ಬಜೆಟ್ ಮಂಡನೆ ಮಾಡಿದ್ದಾರೆ. ಸಿಎಂ ಆಗಿ 9ನೇ ಬಜೆಟ್ ಮಂಡಿಸ್ತಿರುವ ಸಿದ್ದರಾಮಯ್ಯ ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡಿದ್ದಾರೆ. ಮಹಿಳೆಯರಿಗಾಗಿ ವಿವಿಧ ಯೋಜನೆಗಳನ್ನು ಘೋಷಿಸಿದ್ದಾರೆ. ಗೃಹಲಕ್ಷ್ಮೀಯರಿಗೆ, ಆಶಾ ಕಾರ್ಯಕರ್ತೆಯರಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಇದನ್ನೂ ಓದಿ: IND & NZನಲ್ಲಿ ಸ್ಪಿನ್ನರ್ಸ್ ಅಸ್ತ್ರ – ದುಬೈ ಪಿಚ್ ನಲ್ಲಿ ಯಾರ ಕೈ ಮೇಲು?
ಸಿಎಂ ಸಿದ್ದರಾಮಯ್ಯ ಇವತ್ತಿನ ಬಜೆಟ್ ಮಂಡನೆಯಲ್ಲಿ ಗೃಹಲಕ್ಷ್ಮಿಯರಿಗೆ ವಿಶೇಷ ಕೊಡುಗೆ ನೀಡಿದ್ದಾರೆ. ಗೃಹಲಕ್ಷ್ಮೀ ಯೋಜನೆಗೆ 28 ಸಾವಿರ ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಜೊತೆಗೆ ಶಕ್ತಿ ಯೋಜನೆಗೆ 5,300 ಕೋಟಿ ರೂ. ಅನುದಾನ ನೀಡಲಾಗಿದೆ. ಇನ್ನು ಅಂಗನವಾಡಿ ಕಾರ್ಯಕರ್ತೆಯರ ಗೌರವಧನ 1,000 ರೂಪಾಯಿ ಹೆಚ್ಚಿಸಲಾಗಿದೆ. ಸಹಾಯಕಿಯರಿಗೂ 750 ರೂಪಾಯಿ ಗೌರವಧನ ಹೆಚ್ಚಳವಾಗಿದೆ. ಇದೇ ವೇಳೆ ಮಹಿಳಾ ಸಬಲೀಕರಣಕ್ಕೆ ಬಜೆಟ್‌ನಲ್ಲಿ ಇನ್ನೂ ಕೆಲ ಯೋಜನೆಗಳನ್ನು ಘೋಷಿಸಲಾಗಿದೆ. ಇದರಲ್ಲಿ ಅಕ್ಕ ಕೋ ಆಪರೇಟಿವ್ ಸೊಸೈಟಿ, ಅಕ್ಕ ಕ್ಯಾಂಟೀನ್ಗಳನ್ನು ಸ್ಥಾಪಿಸಲಾಗುವುದು ಎಂದು ಸಿದ್ದರಾಮಯ್ಯ ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ. ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಕಚೇರಿಗಳಲ್ಲಿ ಅಕ್ಕ ಕೆಫೆ ಕ್ಯಾಂಟೀನ್ಗಳನ್ನು ತೆರೆಯಲಾಗುವುದು ಎಂದು ಸಿದ್ದರಾಮ್ಯ ಘೋಷಿಸಿದ್ದಾರೆ. ಇನ್ನು ಆಶಾ ಕಾರ್ಯಕರ್ತೆಯರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಆಶಾ ಕಾರ್ಯಕರ್ತೆಯರ ಆರೋಗ್ಯ ಧನ 1 ಸಾವಿರ ರೂ. ಹೆಚ್ಚಳ ಮಾಡಿದ್ದಾರೆ. ಮಹಿಳಾ ಉದ್ದೇಶಿತ ಕಾರ್ಯಕ್ರಮಗಳಿಗೆ ಒಟ್ಟು 94,084 ಕೋಟಿ ರೂಪಾಯಿ ಮೀಸಲಿಡಲಾಗಿದೆ.
ತಾಯಂದಿರ ಮರಣ ತಡೆಗೆ ಕಾರ್ಯಕ್ರಮ
2025-26ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ತಾಯಂದಿರ ಆರೋಗ್ಯಕ್ಕೆ ಹಲವು ಪ್ರಮುಖ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಇತ್ತೀಚೆಗೆ ರಾಜ್ಯದಲ್ಲಿ ಬಾಣಂತಿಯರ ಸಾವು ಪ್ರಕರಣ ಹೆಚ್ಚಾದ ಹಿನ್ನೆಲೆಯಲ್ಲಿ ಅಗತ್ಯ ಚಿಕಿತ್ಸೆಗೆ ವಿಶೇಷ ಅನುದಾನ ನೀಡಿದ್ದಾರೆ. ಗರ್ಭಿಣಿಯರಲ್ಲಿ ರಕ್ತಹೀನತೆ ತಡೆಗೆ ಹಿಂದುಳಿದ ಜಿಲ್ಲೆಗಳಿಗೆ ಪೌಷ್ಟಿಕಾಂಶ ಕಿಟ್, ತಾಯಂದಿರಿಗೆ ವಾತ್ಯಲ್ಯ ಕಿಟ್ ಮತ್ತು ಪ್ರೋತ್ಸಾಹ ಧನ ವಿತರಣೆ ಮಾಡಲಾಗುವುದು. ಶಿಶು ಜನನ ಸಮಯದಲ್ಲಿ ತಾಯಂದಿರ ಮರಣವನ್ನು ತಡೆಗಟ್ಟುವುದು ಅತ್ಯಂತ ಪ್ರಮುಖ ಆರೋಗ್ಯ ಸವಾಲಾಗಿದೆ. ಇದಕ್ಕಾಗಿ ಸರ್ಕಾರ ಮಿಷನ್ ಮೋಡ್ ಕಾರ್ಯಕ್ರಮವನ್ನು ಆರಂಭಿಸಲಾಗುತ್ತಿದ್ದು, 320 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗುವುದು ಎಂದು ಸಿಎಂ ತಿಳಿಸಿದರು.
ಇನ್ನು ಬ್ರ್ಯಾಂಡ್ ಬೆಂಗಳೂರು ಹೆಸರಲ್ಲಿ ಮಹತ್ವದ ಯೋಜನೆಗಳು ಜಾರಿಯಾಗಿವೆ. ಟನಲ್ ರಸ್ತೆ ನಿರ್ಮಾಣಕ್ಕೆ ಬರೋಬ್ಬರಿ 40 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗಿದೆ. ಮೂಲಸೌಕರ್ಯ ಅಭಿವೃದ್ಧಿಗೆ 7 ಸಾವಿರ ಕೋಟಿ ಅನುದಾನ ಹೆಚ್ಚಳ ಮಾಡಲಾಗಿದೆ. ನಮ್ಮ ಮೆಟ್ರೋ ಹಂತ-3 ಯೋಜನೆಯೊಂದಿಗೆ 8.916 ಕೋಟಿ ರೂಪಾಯಿ ಹಾಗೂ 40.50 ಕಿ.ಮೀ ಉದ್ದದ ಡಬಲ್ ಡೆಕ್ಕರ್ ಫ್ಲೇಓವರ್ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಇನ್ನು ರಾಜ್ಯದಲ್ಲಿ 500 ಹೊಸ ಕರ್ನಾಟಕ ಪಬ್ಲಿಕ್ ಶಾಲೆ ಆರಂಭ ಮಾಡುವುದಾಗಿ ಬಜೆಟ್‌ನಲ್ಲಿ ಸಿದ್ದರಾಮಯ್ಯ ಘೋಷಿಸಿದ್ದಾರೆ.