ಬಂಧನ ಭೀತಿಯಲ್ಲಿದ್ದ ವಿರೂಪಾಕ್ಷಪ್ಪಗೆ ಬಿಗ್ ರಿಲೀಫ್ – ಮಧ್ಯಂತರ ಜಾಮೀನು ನೀಡಿ ಕೋರ್ಟ್ ವಿಧಿಸಿದ ಷರತ್ತುಗಳೇನು?

ಬಂಧನ ಭೀತಿಯಲ್ಲಿದ್ದ ವಿರೂಪಾಕ್ಷಪ್ಪಗೆ ಬಿಗ್ ರಿಲೀಫ್ – ಮಧ್ಯಂತರ ಜಾಮೀನು ನೀಡಿ ಕೋರ್ಟ್ ವಿಧಿಸಿದ ಷರತ್ತುಗಳೇನು?

ಬಂಧನ ಭೀತಿಯಲ್ಲಿ ಕಳೆದ 6 ದಿನಗಳಿಂದ ತಲೆಮರೆಸಿಕೊಂಡಿದ್ದ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಬಿಗ್ ರಿಲೀಫ್ ಸಿಕ್ಕಿದೆ. ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ನ್ಯಾಯಾಮುರ್ತಿ ನಟರಾಜನ್ ಅವರು ಮಾಡಾಳ್ ವಿರೂಪಾಕ್ಷಪ್ಪಗೆ(Madal Virupakshappa) ಮಧ್ಯಂತರ ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ.

ಭ್ರಷ್ಟಾಚಾರ ಪ್ರಕರಣದಲ್ಲಿ ಪ್ರಶಾಂತ್ ಜೈಲುಪಾಲಾಗ್ತಿದ್ದಂತೆ ಮಾಡಾಳ್ ವಿರೂಪಾಕ್ಷಪ್ಪ ತಲೆಮರೆಸಿಕೊಂಡಿದ್ದರು.  ತೆರೆಮರೆಯಿಂದಲೇ ವಕೀಲರ ಮೂಲಕ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಇಂದು ವಿಚಾರಣೆ ನಡೆಸಿ ಹೈಕೋರ್ಟ್ ನ ಏಕಸದಸ್ಯ ಪೀಠ ತೀರ್ಪು ನೀಡಿದೆ. ಶಾಸಕರಿಗೆ ಮಧ್ಯಂತರ ಜಾಮೀನು ನೀಡಿ ಆದೇಶ ಪ್ರತಿ ಕೈಗೆ ಸಿಕ್ಕಿದ 48 ಗಂಟೆಗಳೊಳಗೆ ಶರಣಾಗುವಂತೆ ಸೂಚಿಸಿದೆ. ಲೋಕಾಯುಕ್ತ ಪೊಲೀಸರು ಸೂಕ್ತ ದಾಖಲೆ ಸಲ್ಲಿಸುವವರೆಗೆ ಶಾಸಕರಿಗೆ ಜಾಮೀನು ಸಿಕ್ಕಿದೆ. ಮುಂದಿನ ವಿಚಾರಣೆಯನ್ನು ಹೈಕೋರ್ಟ್ ಮಾರ್ಚ್ 17ಕ್ಕೆ ಮುಂದೂಡಿದೆ.

ಇದನ್ನೂ ಓದಿ : ಎ. ಮಂಜು ಜೆಡಿಎಸ್ ಸೇರಲು ಮುಹೂರ್ತ ಫಿಕ್ಸ್ – ಮಾರ್ಚ್ 16ಕ್ಕೆ ಪಕ್ಷ ಸೇರ್ಪಡೆ

ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ₹40 ಲಕ್ಷ ಲಂಚ ಪಡೆಯುವಾಗಲೇ ಮಾರ್ಚ್ 2ರಂದು ಲೋಕಾಯುಕ್ತ ಬಲೆಗೆ ಬಿದ್ದಿದ್ದ. ಈ ವೇಳೆ ನಿವಾಸ ಹಾಗೂ ಕಚೇರಿಯಲ್ಲಿ ತಲಾಶ್ ನಡೆಸಿದಾಗ ಬರೋಬ್ಬರಿ 8.12 ಕೋಟಿ ಕ್ಯಾಶ್ ಪತ್ತೆಯಾಗಿತ್ತು. ಹೀಗಾಗಿ ಲೋಕಾಯುಕ್ತ ಅಧಿಕಾರಿಗಳು ಎ1 ವಿರೂಪಾಕ್ಷಪ್ಪ, ಎ2 ಪ್ರಶಾಂತ್ ಎಂದು ಎಫ್​​ಐಆರ್ ದಾಖಲು ಮಾಡಿದ್ದರು.

ವಿರೂಪಾಕ್ಷಪ್ಪಗೆ ಮಧ್ಯಂತರ ಜಾಮೀನು ಆದೇಶ ನೀಡುವ ವೇಳೆ 5 ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್ ಮತ್ತು ಇಬ್ಬರು ಶ್ಯೂರಿಟಿ ಹಾಕುವಂತೆ ಷರತ್ತು ವಿಧಿಸಲಾಗಿದೆ. ಮಾಡಾಳ್ ವಿರೂಪಾಕ್ಷಪ್ಪನವರಿಗೆ ಹೈಕೋರ್ಟ್ ನಿಂದ ಮಧ್ಯಂತರ ಜಾಮೀನು ಮಂಜೂರಾಗುತ್ತಿದ್ದಂತೆ ಚನ್ನಗಿರಿಯಲ್ಲಿ ಅವರ ಅಭಿಮಾನಿಗಳು ಸಂಭ್ರಮಾಚರಿಸಿದ್ದಾರೆ. ಮತ್ತೊಂದೆಡೆ ಭ್ರಷ್ಟಾಚಾರ, ಲಂಚ ಪ್ರಕರಣದಲ್ಲಿ ಮಾಡಾಳ್ ವಿರೂಪಾಕ್ಷಪ್ಪನವರ ಹೆಸರು ವಿಪಕ್ಷಗಳ ಟೀಕೆಗೆ ಗುರಿಯಾಗಿದೆ. ಹೀಗಾಗಿ ಈ ಬಾರಿ ಚನ್ನಗಿರಿ ವಿಧಾನಸಭೆ ಚುನಾವಣೆಯಲ್ಲಿ ಕ್ಲೀನ್ ಇಮೇಜ್ ಇರುವ ಬೇರೆ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲು ಪಕ್ಷ ಮುಂದಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಹಾಗೇ ಟಿಕೆಟ್ ಆಕಾಂಕ್ಷಿಗಳ ತೆರೆಮರೆಯಲ್ಲಿ ಕಸರತ್ತು ಶುರು ಮಾಡಿದ್ದಾರೆ.

suddiyaana